ಶಿವಮೊಗ್ಗ: ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್‌ನಿಂದ ಆ.11ರಂದು ಸಾಗರದ ವನಶ್ರೀ ವಸತಿ ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಮೂಲಕ ಯೋಗಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಅಸೋಸಿಯೇಷನ್ ಮುಖಂಡ ಬಿ.ಆರ್.ಮಹೇಂದ್ರ ತಿಳಿಸಿದರು.
ಆಯ್ಕೆ ಪ್ರಕ್ರಿಯೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಸಬ್ ಜ್ಯೂನಿಯರ್ ವಿಭಾಗ (10-14 ವರ್ಷ), ಜೂನಿಯರ್ (14ರಿಂದ 18), ಸೀನಿಯರ್ (18ರಿಂದ 35), ಮಾರ್ಷಲ್ (36-45) ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಎಲ್ಲ ವಿಭಾಗದಲ್ಲೂ ಬಹುಮಾನ ನೀಡಲಾಗುವುದು. ಪುರುಷ ಹಾಗೂ ಮಹಿಳೆಯರನ್ನು ಪ್ರತ್ಯೇಕ ವಿಭಾಗದಲ್ಲಿ ಆಯ್ಕೆ ಮಾಡಲಾಗುವುದು. ಬಳಿಕ ರಾಜ್ಯ ಮಟ್ಟದಲ್ಲಿ ಆಯ್ಕೆಯಾದವರನ್ನು ಅಸ್ಸಾಂನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಷ್ಟ್ರಮಟ್ಟದಲ್ಲಿ ವಿಜೇತರಾದವರನ್ನು ಖೇಲೋ ಇಂಡಿಯಾ ಸ್ಪರ್ಧೆಗೆ ಕಳುಹಿಸಲಾಗುವುದು. ಇಲ್ಲಿ ವಿಜೇತರಿಗೆ 10 ಲಕ್ಷ ರೂ. ಬಹುಮಾನ ದೊರೆಯಲಿದೆ. ಆ.11ರ ಬೆಳಗ್ಗೆ 8ರಿಂದ ಯೋಗಾಸನ ಕ್ರೀಡಾ ಸ್ಪರ್ಧೆ ಆರಂಭವಾಗಲಿದೆ. ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆಯಿಂದ ಯೋಗಪಟುಗಳು ಭಾಗವಹಿಸುವರು. ಡಿಸಿ ಗುರುದತ್ತ ಹೆಗಡೆ ಸ್ಪರ್ಧೆ ಉದ್ಘಾಟಿಸುವರು. ಶಾಸಕ ಗೋಪಾಲಕೃಷ್ಣ ಬೇಳೂರು ಪಾಲ್ಗೊಳ್ಳುವರು ಎಂದರು. ವನಶ್ರೀ ವಿದ್ಯಾ ಸಂಸ್ಥೆಯ ಎಚ್.ಪಿ.ಮಂಜಪ್ಪ, ಅನ್ನಪೂರ್ಣ ಸತೀಶ್, ವಾಣಿಶ್ರೀ ಉಪಸ್ಥಿತರಿದ್ದರು.