ಚಂದ್ರಶೇಖರ್​ ಗುರೂಜಿ ಯೋಗಸೇವೆಯ ಬೆಳ್ಳಿ ಹಬ್ಬ

ಯೋಗ ಕಲಿಸಿಕೊಡುವುದರಲ್ಲಿ ಚಂದ್ರಶೇಖರ್ ಗುರುಗಳಿಗೆ ವಿಶೇಷ ಆಸಕ್ತಿ. ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ತಮ್ಮ ವಿದ್ಯೆಯನ್ನು ಧಾರೆ ಎರೆಯುತ್ತಿದ್ದಾರೆ. ಯೋಗ ಎಂದರೆ ಇವರಿಗೆ ಒಂದು ತಪಸ್ಸು. ಈ ಯೋಗಸೇವೆಗೆ 25ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅನುಭವವನ್ನು ಹಂಚಿಕೊಂಡಿದ್ದಾರೆ.

|ಎಂ.ಎಸ್.ನರಸಿಂಹಮೂರ್ತಿ

ಯೋಗ ಅಭ್ಯಾಸ ಮಾಡಲು ಉತ್ಸಾಹ ಬಂದ ಬಗೆ ಹೇಗೆ?

ನಾನು ಯೋಗಾಭ್ಯಾಸ ಶುರು ಮಾಡಿದ್ದು 1983-84ರಲ್ಲಿ. ಆಗ ಅಕ್ಕನ ಮನೆಯಲ್ಲಿದ್ದೆ. ಅವರ ಮನೆ ನಟ ರಾಜಕುಮಾರ್ ಮನೆಯ ಹಿಂಭಾಗದಲ್ಲಿತ್ತು. ರಾಜಕುಮಾರ್ ಅವರು ಯೋಗಾಸನ ಮಾಡೋದನ್ನು ಒಂದೆರಡು ಸಲ ದೂರದಿಂದ ನೋಡಿದ್ದೆ. ಅವರ ‘ಕಾಮನಬಿಲ್ಲು’ ಚಿತ್ರ ನೋಡಿದ ಮೇಲೆ ಅದೇ ನನಗೆ ಯೋಗ ಕಲಿಯಲು ಪ್ರೇರಣೆಯಾಯಿತು. ಡಿಗ್ರಿ ಮುಗಿಸಿ ಎಲ್.ಎಲ್.ಬಿ.ಗೆ ಹೋಗುತ್ತಿದ್ದ ವೇಳೆ (1990ರಲ್ಲಿ) ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಲ್ಲಿ ಅವರು ನಿರ್ದೇಶಕರಾಗಿದ್ದ ಎನ್.ಎಸ್. ನಾರಾಯಣರಾವ್ ಗುರೂಜಿ ಹತ್ತಿರ ಯೋಗ ಕಲಿಯಲು ಶುರು ಮಾಡಿದೆ.

ಮೊದಲ ಯೋಗಾಭ್ಯಾಸದ ಅನುಭವ ಹೇಗಿತ್ತು?

ಹದಿನೇಳು ಬ್ಯಾಚುಗಳಲ್ಲಿ ನಾನು ಭಾಗಿಯಾದೆ. ಒಂದು ಬ್ಯಾಚ್ ಅಂದರೆ ಮೂರು ತಿಂಗಳು. ನನ್ನ ಫ್ಲೆಕ್ಸಿಬಲಿಟಿ ನೋಡಿದ ಗುರುಗಳು ಮೊದಲನೇ ಬ್ಯಾಚ್ ಮುಗಿಯುತ್ತಿರುವ ಹಾಗೆಯೇ ಸ್ಟೇಜಿಗೆ ಕರೆದರು. ಅವರು ಟೂರಲ್ಲಿದ್ದಾಗ ನಾನು ಕ್ಲಾಸ್ ತೆಗೆದುಕೊಳ್ಳುತ್ತಿದ್ದೆ. ನನ್ನ ಗುರುಗಳು ಆಗ ಕೈಗಾರಿಕಾ ಉದ್ಯೋಗ ತರಬೇತಿ ಕೇಂದ್ರದ ಜಂಟಿ ನಿರ್ದೇಶಕರಾಗಿದ್ದರು. ಆಗ ಕ್ಲಾಸ್ ತೆಗೆದುಕೊಳ್ಳುವ ಭಾಗ್ಯ ನನ್ನದಾಗಿತ್ತು. ಕ್ಲಾಸಿಗೆ ಬರುತ್ತಿದ್ದ ವೈದ್ಯೆ ಡಾ.ಕಾಮಿನಿ ರಾವ್ ಅವರು ನಾನು ಯೋಗಾಸನ ಮಾಡುತ್ತಿದ್ದ ಭಂಗಿಗಳನ್ನು ನೋಡಿ ‘ನಿಮ್ಮ ಮೂಳೆ ಪರೀಕ್ಷೆ ಮಾಡಬೇಕು. ಅದು ಪ್ಲಾಸ್ಟಿಕ್​ನಲ್ಲಿ ಮಾಡಿದಂತೆ ಇದೆ’ ಎಂದು ತಮಾಷೆ ಮಾಡುತ್ತಿದ್ದರು. ನಂತರ ಡಾ. ನಾಗೇಂದ್ರ, ಡಾ. ನಾಗರತ್ನ, ಮೋಹನ್​ಜೀ, ರಘುರಾಮ್ ಜೀ, ಡಾ. ವೆಂಕಟರಾವ್ ಅವರ ಜತೆ ಒಡನಾಟ ಇಟ್ಟು ಕೊಂಡಿದ್ದೆ. ಎಲ್ಲರಿಂದ ಸಾಕಷ್ಟು ವಿದ್ಯೆ ಕಲಿತೆ. ಡಾ.ಪಟ್ಟಾಭಿ (ಸಾಧನ ಸಂಗಮ) ಹಾಗೂ ಪ್ರಕೃತಿ ಜೀವನದ ಹೊ. ಶ್ರೀನಿವಾಸಯ್ಯ ಅವರು ನ್ಯಾಚುರೋಪತಿ ಬಗ್ಗೆ ನನಗೆ ಕಲಿಸಿದರು.

ತಮ್ಮ ಬಾಲ್ಯದ ಬಗ್ಗೆ ಹೇಳಿ

ನಾನು ಹುಟ್ಟಿದ್ದು ಅವಿಭಜಿತ ಕೋಲಾರ ಜಿಲ್ಲೆಯ ನಂದಿ ಗ್ರಾಮದಲ್ಲಿ. ತಂದೆ-ತಾಯಿ ಲಕ್ಷ್ಮಮ್ಮ ಮತ್ತು ನಾರಾಯಣಪ್ಪ. ನಮ್ಮದು ವ್ಯವಸಾಯದ ಕುಟುಂಬ. ತಂದೆಯವರದು ತಾತನವರಂತೆಯೇ ರೇಷ್ಮೆ ವ್ಯಾಪಾರ ಹಾಗೂ ಕೃಷಿ. ನನ್ನ ತಾತ ಮತ್ತು ತಂದೆ ಹಿಂದೂಪುರದಿಂದ ರೇಷ್ಮೆ ಗೂಡು ತರುತ್ತಿದ್ದರು. ಅದನ್ನ ಸಂಸ್ಕರಿಸಿ ಬೆಂಗಳೂರಿನ ಬಾದಾಮಿ ಹೌಸ್ ಬಳಿ ಇದ್ದ ರೇಷ್ಮೆ ಕೋಠಿಯಲ್ಲಿ ಮಾರುತ್ತಿದ್ದರು. ‘ಶತಕೋಟಿ ಜೀವರಾಶಿಗಳಿಗೆ ಬೆಳಕು ಕೊಡೋ ಸೂರ್ಯದೇವ ಬೆಳಗ್ಗೆ ಆರಕ್ಕೆಲ್ಲಾ ಎದ್ದಿರ್ತಾನೆ. ಆತ ಏಳೋಕೆ ಮುಂಚೆ ನೀನು ಏಳಬೇಕು. ಸೂರ್ಯನ್ನ ನಾವು ಸ್ವಾಗತ ಮಾಡಬೇಕು’ ಎಂದು ಬಾಲ್ಯದಿಂದಲೇ ಹೇಳುತ್ತಿದ್ದ ನನ್ನ ಅಮ್ಮನ ಮಾತನ್ನು ಚಾಚೂತಪ್ಪದೆ ಪಾಲಿಸುತ್ತಿದ್ದೇನೆ.

ತಮ್ಮ ಮನದಲ್ಲಿನ ಆಸೆ, ಗುರಿ ತಿಳಿಸಿ

ನಮ್ಮ ಗುರುಗಳಾದ ಎನ್.ಎಸ್. ನಾರಾಯಣ ರಾವ್ ಥರ ಯೋಗ ಸೇವೆ ಮಾಡಬೇಕೆಂಬ ಆಸೆ. ಯೋಗ ಕೇಂದ್ರಗಳಲ್ಲಿ ಇನ್ನೂ ಹೆಚ್ಚಿನ ಕಾಲ ದುಡಿಯಬೇಕು ಎಂಬ ಆಸೆ.

ಬೀಡಿ ಬಿಡಿಸಿದ ಯೋಗ

ರಾಮ ಮಂದಿರದಲ್ಲಿ ಯೋಗ ತರಗತಿಗಳನ್ನು ನಡೆಸ್ತಾ ಇದ್ದೆ. ಒಬ್ಬ ಬೀಡಿವಾಲ ಬಾಗಿಲ ಬಳಿ ಬಂದು ಭುಸು ಭುಸು ಬೀಡಿ ಸೇದುತ್ತಾ ನಮ್ಮನ್ನೇ ಗಮನಿಸ್ತಾ ಇದ್ದ. ಆತನನ್ನ ಕರೆದು ಮಾತಾಡಿಸಿದೆ. ‘ಪ್ರಾಣ ಬೇಕಿದ್ರೆ ಬಿಡ್ತೀನಿ. ಆದರೆ ಬೀಡಿ ಬಿಡೋಕೆ ನನ್ನ ಕೈಲಿ ಆಗೊಲ್ಲ. ದಿನಕ್ಕೆ 25 ಬೀಡಿ ಸೇದಲೇಬೇಕು’ ಎಂದು ಗಣೇಶ ಬೀಡಿ ಕಟ್ಟನ್ನು ತೋರಿಸಿದ. ‘ರಾಮರ ದೇವಸ್ಥಾನದ ಬಳಿ ಗಣೇಶ ಬೀಡಿ ಸೇದಬಾರದು ನಾನು ಹೇಳಿದೆ. ಒಮ್ಮೆಗೇ ಬಿಡೋಕೆ ನನ್ನ ಕೈಲಿ ಸಾಧ್ಯ ಇಲ್ಲ. ನೀವೇ ಏನಾದರೂ ಮಾಡಿ, ಬೀಡಿ ಚಟ ಬಿಡಿಸಿ’ ಎಂದು ಆತ ಗೋಗರೆದ. ನೀನು ಬೆಳಿಗ್ಗೆ 9 ಗಂಟೆಯವರೆಗೂ ಬಿಡಿ ಸೇದೊಲ್ಲ ಅನ್ನೋದಾದರೆ ನಾನು ಪ್ರಾಣಾಯಾಮ ಹೇಳಿಕೊಡ್ತೀನಿ’ ಅಂದೆ. ಆತ ಬೆಳಗಿನ ವೇಳೆ ಬೀಡಿ ಸೇದೋದು ಬಿಟ್ಟ. ಯೋಗ ತರಗತಿಗೆ ಬಂದ. ಯೋಗ, ಪ್ರಾಣಾಯಾಮ ಕಲಿತ. ಕ್ರಮೇಣ ಬೀಡಿ ಸೇದೋದು ಕಡಿಮೆ ಮಾಡಿದ. ಮೂರು ತಿಂಗಳಾದ ಮೇಲೆ ಆತ ಖುಷಿಯಾಗಿ ಬಂದ. ನಾನು ಈಗ ಬೀಡಿ ಸೇದೋದು ಸಂಪೂರ್ಣ ನಿಲ್ಲಿಸಿದ್ದೀನಿ. ನಮ್ಮ ಮನೆಯಲ್ಲಿ ಎಲ್ಲರಿಗೂ ಸಂತೋಷ ವಾಗಿದೆ. ಇಪ್ಪತ್ತು ಬೀಡಿಗಳು ಉಳಿದಿವೆ. ತಗೊಳ್ಳಿ, ನೀವು ಇಟ್ಕೊಳ್ಳಿ ಎಂದು ನನ್ನ ಕೈಗೆ ಬೀಡಿ ಕಟ್ಟು ಕೊಟ್ಟು ಹೋದ!

ಯೋಗ ತರಬೇತಿ ಆರಂಭಿಸಿದ್ದು ಯಾವಾಗ?

1993, ಸೆಪ್ಟೆಂಬರ್ 1ನೇ ತಾರೀಖು ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ (ಸಿ.ಪಿ.ಆರ್.ಐ)ನಲ್ಲಿ ತರಗತಿಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಅಲ್ಲಿನ ಅಧಿಕಾರಿಗಳಿಗೆ ನಾನು ಯೋಗ ಕಲಿಸಿದೆ. ಆನಂತರ ಮತ್ತೂರು ಕೃಷ್ಣಮೂರ್ತಿ, ಡಾ. ಎಚ್.ಕೆ. ರಂಗನಾಥ್ ಅವರು ಭಾರತೀಯ ವಿದ್ಯಾ ಭವನದಲ್ಲಿ ಯೋಗ ತರಗತಿಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟರು. 1997ರ ಏಪ್ರಿಲ್​ನಲ್ಲಿ ಬೆಂಗಳೂರಿನ ಮಲ್ಲೇಶ್ವರದ ರಾಮಮಂದಿರದಲ್ಲಿ ತರಗತಿ ಶುರು ಮಾಡಿದೆ. 2006 ರವರೆಗೂ ತರಗತಿಗಳು ನಡೆದವು. 2006 ರಿಂದ ಈಗಿರುವ ಎಂ.ಎಲ್.ಎ. ಕಾಲೇಜಿಗೆ ಬಂದ್ವಿ. ಇಲ್ಲಿ ನಿರಂತರವಾಗಿ ಯೋಗ ತರಗತಿಗಳು ನಡೆಯುತ್ತಿವೆ.

ಇಂದು ಸನ್ಮಾನ

ಚಂದ್ರಶೇಖರ್ ಗುರೂಜಿ ಅವರ 25ವರ್ಷಗಳ ಸೇವೆಗಾಗಿ ಇಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಮಲ್ಲೇಶ್ವರ 4ನೇ ಮುಖ್ಯರಸ್ತೆಯಲ್ಲಿರುವ ರೋಟರಿ ಕ್ಲಬ್​ನಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಯೋಗ, ಚಂದ್ರಶೇಖರ್ ಗುರೂಜಿ, ವಿದ್ಯೆ, ಸಂದರ್ಶನ