ಯೋಗದ ಮಹತ್ವ ಸಾರಿದ ಭಾರತೀಯ ಸಂಸ್ಕೃತಿ ಉತ್ಸವ

| ಹೀರಾನಾಯ್ಕ ಟಿ.

ವಿಜಯಪುರ: ಉತ್ತಮ ಆರೋಗ್ಯ, ಸದೃಢ ಭಾರತ ನಿರ್ವಣಕ್ಕೆ ಯೋಗ ಅವಶ್ಯ ಎಂದು ಸಾಧು-ಸಂತರು, ಸಾಧಕರು ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಯೋಗದ ಮಹತ್ವ ಸಾರಿದರು.

ಕಗ್ಗೋಡದಲ್ಲಿ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದ ಏಳನೇ ದಿನವಾದ ಭಾನುವಾರ ಯೋಗಗುರು ಬಾಬಾ ರಾಮದೇವ್ ಸಾನ್ನಿಧ್ಯದಲ್ಲಿ ಆರೋಗ್ಯಮಯ ದೇಶ ನಿರ್ವಣಕ್ಕೆ ಯೋಗ ಶಿಬಿರ ಮೂಲಕ ಜಾಗೃತಿ ಮೂಡಿಸಲಾಯಿತು. ಮೈ ಕೊರೆಯುವ ಚಳಿಯಲ್ಲೂ ಶಿಬಿರಾರ್ಥಿಗಳು ಹಲವಾರು ಆಸನಗಳನ್ನು ಪ್ರದರ್ಶಿಸಿದರು.

ರೋಗಮುಕ್ತ ಭಾರತ ನಿರ್ವಣಕ್ಕೆ ಬಾಬಾ ರಾಮದೇವ್ ಸೇರಿ ಯೋಗ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಸಂಕಲ್ಪ ಮಾಡಿದರು. ದೇಶದ ಪ್ರತಿ ಗ್ರಾಮದಲ್ಲಿ ಯೋಗ ಪರಿಚಯಿಸುವ ನಿಟ್ಟಿನಲ್ಲಿ ಪತಂಜಲಿ ಯೋಗ ಸಮಿತಿ ಹೆಜ್ಜೆ ಇಟ್ಟಿದೆ ಎಂದು ಬಾಬಾ ರಾಮದೇವ್ ತಿಳಿಸಿದರು. ಆಧುನಿಕ ಜೀವನ ಶೈಲಿಯಿಂದಾಗಿ ಗ್ರಾಮಗಳು ರೋಗಗ್ರಸ್ತಗಳಾಗುತ್ತಿದ್ದು, ಅದರಿಂದ ಹೊರತರಲು ಈ ಉತ್ಸವದಿಂದಲೇ ಪ್ರಾರಂಭಿಸಲಾಗಿದೆ. ಜ.1ರಿಂದ ರಾಜ್ಯಾದ್ಯಂತ ಯೋಗಮಯ ಕರ್ನಾಟಕಕ್ಕೆ ಚಾಲನೆ ನೀಡಲಾಗುತ್ತಿದ್ದು, ಒಂದು ಲಕ್ಷ ಯೋಗ ತರಬೇತಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದರು.

ಗ್ರಾಮ ವಿಕಾಸಕ್ಕೆ ಗಣ್ಯರಿಂದ ಮದ್ದು: ಉತ್ಸವದಲ್ಲಿ ನಡೆದ ಗ್ರಾಮ ವಿಕಾಸ ಸಂಗಮದಲ್ಲಿ ಗಣ್ಯರು, ಸ್ವಾಮೀಜಿಗಳು ಮಾತನಾಡಿ, ಗ್ರಾಮಗಳ ಅಭಿವೃದ್ಧಿ ಆಗಬೇಕು ಎಂದು ಪ್ರತಿಪಾದಿಸಿದರು. ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಸ್ಮಾರ್ಟ್ ಸಿಟಿಯಿಂದ ಭಾರತ ವಿಕಾಸವಾಗಲ್ಲ. ಹಳ್ಳಿಗಳು ಸ್ಮಾರ್ಟ್ ಆದಾಗಲೇ ಭಾರತ ವಿಕಾಸವಾಗಲಿದೆ ಎಂದರು.

ಬಳ್ಳಾರಿಯ ಕಲ್ಯಾಣ ಸ್ವಾಮೀಜಿ, ಆನೆಗುಂದಿ ಸಂಸ್ಥಾನದ ಶ್ರೀಕೃಷ್ಣದೇವರಾಯ, ಕೆ.ಎನ್.ಗೋವಿಂದಾಚಾರ್ಯ, ಬಸವರಾಜ ಪಾಟೀಲ್ ಸೇಡಂ, ಆಸ್ಸಾಂನ ಕಲಾವಿದ ಪ್ರಸನ್ನ ಗೋಗೊಯ್, ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಗೋ.ರು.ಚನ್ನಬಸಪ್ಪ ಇನ್ನಿತರರಿದ್ದರು.

ಸಂಸ್ಕೃತಿ ಉತ್ಸವಕ್ಕೆ ಇಂದು ತೆರೆ

ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಡಿ.31ಕ್ಕೆ ತೆರೆ ಬೀಳಲಿದ್ದು, ಕೊನೇ ದಿನವಾದ ಸೋಮವಾರ ನಡೆಯುವ ಧರ್ಮ ಮತ್ತು ಸಂಸ್ಕೃತಿ ಸಂಗಮದಲ್ಲಿ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉಡುಪಿಯ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಹರಿದ್ವಾರದ ಪತಂಜಲಿ ಯೋಗಪೀಠದ ಬಾಬಾ ರಾಮದೇವ್ ಸಾನ್ನಿಧ್ಯ ವಹಿಸಲಿದ್ದಾರೆ. ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಮಂತ್ರಾಲಯದ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು, ಸರ್ವಜ್ಞ ಪೀಠದ ಶ್ರೀಮಧ್ವಾಚಾರ್ಯ ಸ್ವಾಮೀಜಿ, ಡಿಸಿಎಂ ಡಾ.ಜಿ.ಪರಮೇಶ್ವರ್, ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ್, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಪಾಲ್ಗೊಳ್ಳಲಿದ್ದಾರೆ. ಸಮಾರೋಪದಲ್ಲಿ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.