Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಯೋಗ ಧ್ಯಾನವೇ ನನ್ನ ಫಿಟ್ನೆಸ್ ರಹಸ್ಯ

Thursday, 21.06.2018, 3:06 AM       No Comments

67 ರ ವಯಸ್ಸಲ್ಲೂ ದಿನಕ್ಕೆ 18 ಗಂಟೆ ಕೆಲಸ, ಪ್ರಧಾನಿಯಾದ 4 ವರ್ಷಗಳಲ್ಲಿ ಒಂದೇ ಒಂದು ರಜೆ ತೆಗೆದುಕೊಳ್ಳದೆ ಸತತ ಕಾರ್ಯನಿರತ, ದೇಶ-ವಿದೇಶಗಳ ಭೇಟಿ, ದಿನಕ್ಕೆ ಮೂರ್ನಾಲ್ಕು ರ್ಯಾಲಿ… ಹೀಗೆ ಯುವಕರೂ ನಾಚುವಂತೆ ಕ್ರಿಯಾಶೀಲರಾಗಿರುವ ಪ್ರಧಾನಿ ನರೇಂದ್ರ ಮೋದಿ ಇಷ್ಟೊಂದು ಫಿಟ್ ಹಾಗೂ ಫೈನ್ ಆಗಿರುವ ರಹಸ್ಯವೇನು ಎಂಬ ಬಗ್ಗೆ ಆಗಾಗ ಕುತೂಹಲಭರಿತ ಚರ್ಚೆ ನಡೆಯುತ್ತಿರುತ್ತದೆ. ಈ ಬಗ್ಗೆ ಮೋದಿ ಹೇಳಿರುವುದೇನು, ಓದಿ, ಅವರದ್ದೇ ಮಾತುಗಳಲ್ಲಿ. ಇದು ವಿಶ್ವ ಯೋಗ ದಿನಕ್ಕೆ ವಿಜಯವಾಣಿ ಕೊಡುಗೆ.

ಸಾರ್ವಜನಿಕ ಜೀವನದಲ್ಲಿ ಇರುವವರು ಸ್ವಾಸ್ಥ್ಯದ ಬಗ್ಗೆ ಸ್ವಲ್ಪ ಹೆಚ್ಚೇ ಗಮನ ಕೊಡಬೇಕಾಗುತ್ತದೆ. ಯೋಗ ಪ್ರಾಚೀನ ಭಾರತೀಯ ಋಷಿಗಳು ಜಗತ್ತಿಗೆ ನೀಡಿದ ಬಹುಮೂಲ್ಯ ಕೊಡುಗೆ. ನಾನು ಸೂರ್ಯ ನಮಸ್ಕಾರ, ಯೋಗ ಇತ್ಯಾದಿ ಕಲಿತಿದ್ದು ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದಾಗಲೇ. ಮುಂದೆ, ಪ್ರಚಾರಕನಾದ ಮೇಲೆ ಯೋಗ, ಪ್ರಾಣಾಯಾಮ ಮತ್ತು ಸೂರ್ಯ ನಮಸ್ಕಾರವನ್ನು ದಿನಚರಿಯ ಭಾಗವಾಗಿಸಿಕೊಂಡೆ. ಶರೀರ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿ ಇರಿಸಿಕೊಂಡರೆ ಎಂಥ ಒತ್ತಡವನ್ನೂ ಸಲೀಸಾಗಿ ನಿರ್ವಹಿಸಬಹುದು. ರಾತ್ರಿ ಎಷ್ಟು ತಡವಾಗಿ ಮಲಗಿದರೂ ಬೆಳಗ್ಗೆ 5 ಗಂಟೆಗೆ ಏಳುತ್ತೇನೆ. ಮೊದಲಿಗೆ ಒಂದಿಷ್ಟು ನಡಿಗೆ ಮಾಡುತ್ತೇನೆ. ನಡಿಗೆಯು ರಕ್ತಸಂಚಾರವನ್ನು ಸುಗಮಗೊಳಿಸುತ್ತದೆ. ಆ ಬಳಿಕ ಸೂರ್ಯ ನಮಸ್ಕಾರ ಮತ್ತು ಕೆಲ ಯೋಗಾಸನಗಳು. ರಾತ್ರಿ ಹೊತ್ತಲ್ಲಿ ಧ್ಯಾನ, ಪ್ರಾಣಾಯಾಮದ ಮೊರೆ ಹೋಗುತ್ತೇನೆ. ಪ್ರಾಣಾಯಾಮದ ದೀರ್ಘ ಉಸಿರಿನಿಂದಾಗಿ ರಕ್ತದೊತ್ತಡ ತಗ್ಗಿ, ಮನಸ್ಸು ಹಗುರಾಗುತ್ತದೆ. ಮುಖ್ಯವಾಗಿ, ನಿಯತವಾಗಿ ಯೋಗ, ಪ್ರಾಣಾಯಾಮ ಮಾಡಿದರೆ ನಕಾರಾತ್ಮಕ ಯೋಚನೆಗಳು ಸುಳಿಯುವುದಿಲ್ಲ. ವಿಶ್ವಾಸವೂ ವೃದ್ಧಿಯಾಗಿ ಸೃಜನಶೀಲತೆ, ಕಾರ್ಯಕ್ಷಮತೆ ಹೆಚ್ಚುತ್ತದೆ. ಹಿಂದೆಲ್ಲ ಯೋಗವಿದ್ಯೆ ಋಷಿಮುನಿಗಳು, ಗುಹೆಗಳಿಗೆ ಸೀಮಿತವಾಗಿತ್ತು. ಈಗ ಇಡೀ ವಿಶ್ವವೇ ಯೋಗವನ್ನು ಅಪ್ಪಿಕೊಂಡು ಸಕಾರಾತ್ಮಕತೆಯತ್ತ ಮುನ್ನಡಿ ಇಟ್ಟಿದೆ.

ನಮ್ಮ ಗುಜರಾತಿಗಳಂತೂ ತಿಂಡಿಪ್ರಿಯರು. ಢೋಕ್ಲಾ, ಖಾಖ್ರಾ ಸೇರಿದಂತೆ ಬಗೆಬಗೆಯ ಖಾದ್ಯಗಳನ್ನು ಇಷ್ಟಪಡುತ್ತಾರೆಂಬುದು ನಿಮಗೂ ಗೊತ್ತು. ಆರೋಗ್ಯ ಕಾಯ್ದುಕೊಳ್ಳಲು ಆಹಾರದ ಸಮತೋಲನವೂ ಅಗತ್ಯ. ನಾನು ಮೊದಲಿಗೆ ಉಪ್ಪಿನ ಪದಾರ್ಥಗಳನ್ನು ತ್ಯಜಿಸಿದೆ. ಆ ಬಳಿಕ ಖಾರವನ್ನು ಕಡಿಮೆ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುತ್ತಿಲ್ಲ. ಇದೆಲ್ಲ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕರಿಸುತ್ತಿದೆ. ಬೆಳಗ್ಗೆ ಹೆಲ್ದಿ ಬ್ರೇಕ್​ಫಾಸ್ಟ್ ತೆಗೆದುಕೊಳ್ಳುತ್ತೇನೆ, ಮಧ್ಯಾಹ್ನದ ಊಟಕ್ಕೆ ಸಪ್ಪೆ ದಾಲ್, ಪಲ್ಯ, ಚಪಾತಿ. ರಾತ್ರಿ ಒಂದು ಚಪಾತಿ ಇಲ್ಲವೆ ಸ್ವಲ್ಪ ಅನ್ನ, ತುಂಬ ತಡವಾಗಿದ್ದರೆ ಹಣ್ಣಿನ ರಸವಷ್ಟೇ. ಒಮ್ಮೆಲೇ ಹೊಟ್ಟೆತುಂಬ ತಿಂದುಬಿಟ್ಟರೆ ದಣಿವು, ನಿದ್ದೆ ಆವರಿಸಿಕೊಳ್ಳುತ್ತದೆ. ಮಧ್ಯದಲ್ಲಿ ಸಮಯ ಸಿಕ್ಕಾಗ ಹಣ್ಣು ಅಥವಾ ಒಣಹಣ್ಣು ಸೇವಿಸುತ್ತೇನೆ. ರಾತ್ರಿ ಹಾಸಿಗೆಗೆ ಹೋದ ಕ್ಷಣವೇ ನಿದ್ದೆ ಆವರಿಸಿಕೊಳ್ಳುತ್ತದೆ. ಹೀಗಾಗಿ, 4-5 ಗಂಟೆ ನಿದ್ದೆ ಮಾಡಿದರೂ ಬೆಳಗ್ಗೆ ಫ್ರೆಷ್​ನೆಸ್ ಇರುತ್ತದೆ. ಪ್ರಯಾಣದ ಅವಧಿಯಲ್ಲಿ ಸಮಯ ಸಿಕ್ಕರೆ ಧ್ಯಾನ, ಪ್ರಾಣಾಯಾಮ ಮಾಡಲು ಮರೆಯುವುದಿಲ್ಲ. ಅಂದಹಾಗೆ ನಾನು ಸಂಪೂರ್ಣ ಸಸ್ಯಾಹಾರಿ.

ಬದುಕು ಬದಲಿಸುತ್ತೆ: ಯೋಗದ ಮಹತ್ವ ತಿಳಿಯಲು, ಅದರ ಪರಿಪೂರ್ಣತೆಯನ್ನು ಅರ್ಥ ಮಾಡಿಕೊಳ್ಳಲು, ನಾವು ಮೊದಲು ಯೋಗಿ ಯಾರು ಎಂದು ಅರಿಯಬೇಕು. ತನ್ನೊಂದಿಗೆ, ತನ್ನ ದೇಹದೊಂದಿಗೆ, ತನ್ನ ಸುತ್ತಲಿನ ವಾತಾವರಣದೊಂದಿಗೆ, ಪ್ರಕೃತಿಯೊಂದಿಗೆ, ಯಾರು ಸಾಮರಸ್ಯ ಸಾಧಿಸುತ್ತಾನೊ ಅವನೆ ಯೋಗಿ. ಈ ಸಾಮರಸ್ಯ ಸಾಧಿಸುವ ಸಾಧನವೇ ಯೋಗ. ಯೋಗದ ಮೂಲ ಉದ್ದೇಶ ನಿರಂತರ ಸಾಧನೆಯಿಂದ ದೇಹ ಹಾಗೂ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ಮಾನವನ ಪ್ರಜ್ಞೆಯನ್ನು ಜಾಗೃತಗೊಳಿಸುವುದು. ದೇಹವೆಂಬುದು ಪರಮಾತ್ಮನ ಸಾಕ್ಷಾತ್ಕಾರಕ್ಕೆ ಇರುವ ವಾಹನ.

ಹಲವು ಸಮಸ್ಯೆಗಳಿಗೆ ಪರಿಹಾರ: ಆಧುನಿಕ ಜೀವನಶೈಲಿಯ ಸಮಸ್ಯೆಗಳು ಹಲವು. ಒತ್ತಡ ಬದುಕಿನೊಂದಿಗೆ ಸಕ್ಕರೆ ಕಾಯಿಲೆ, ಅತಿಯಾದ ರಕ್ತದೊತ್ತಡದಿಂದ ಜನರು ತೊಂದರೆಗೊಳಗಾಗಿದ್ದಾರೆ. ಯುವಕರು ಶಾಂತಿಯಿಂದ ವಂಚಿತರಾಗಿ ಡ್ರಗ್ಸ್ ಹಾಗೂ ಮದ್ಯಪಾನಕ್ಕೆ ಶರಣಾಗುತ್ತಿದ್ದಾರೆ. ಯೋಗವು ಒತ್ತಡ ಹಾಗೂ ಹಲವಾರು ಸಮಸ್ಯೆಗಳನ್ನು ನಿಗ್ರಹಿಸಬಲ್ಲದು ಎಂದು ಸಾಬೀತಾಗಿದೆ. ಸರಿಯಾದ ಮಾರ್ಗ ಹಾಗೂ ಶ್ರದ್ಧೆಯಿಂದ ಯೋಗ ಅಭ್ಯಾಸ ಮಾಡಿದರೆ ಅದು ಶಕ್ತಿಯುತ, ಕ್ರಿಯಾತ್ಮಕ, ಶಾಂತಿಯುತ, ಒತ್ತಡಮುಕ್ತ ಜೀವನ ಸಾಗಿಸಲು ನೆರವಾಗುತ್ತದೆ.

ಸಾಮರಸ್ಯ ನಿರ್ಮಾಣ: ಯೋಗದಿಂದ ಆರೋಗ್ಯ ಪ್ರಯೋಜನಗಳಷ್ಟೇ ಇಲ್ಲ. ಅದು ಶಾಂತಿ ಸದ್ಭಾವನೆ ಬಿತ್ತುತ್ತಿದೆ. ಯೋಗದ ಕಾರಣದಿಂದ ವಿಶ್ವದ ಹಲವು ರಾಷ್ಟ್ರಗಳು ಭಾರತದೊಂದಿಗೆ ಸ್ನೇಹಹಸ್ತ ಚಾಚಿವೆ. ಇಂದು ವಿಶ್ವಕ್ಕೆ ಬೇಕಾಗಿರುವುದು ಶಾಂತಿ, ಸೌಹಾರ್ದ ಮತ್ತು ಸಮನ್ವಯ. ಈ ಮೂರೂ ಮೌಲ್ಯಗಳನ್ನು ಯೋಗ ಪರಿಣಾಮಕಾರಿಯಾಗಿ ಹರಡುತ್ತಿದ್ದು, ಜಗತ್ತನ್ನು ಭಾರತದೊಡನೆ, ಭಾರತವನ್ನು ಅಂತಾರಾಷ್ಟ್ರೀಯ ಸಮುದಾಯದೊಡನೆ ಕನೆಕ್ಟ್ ಮಾಡುತ್ತಿದೆ. ಹಾಗಾಗಿ, ಸ್ವಸ್ಥ ಶರೀರ, ಸ್ವಸ್ಥ ಮನಸ್ಸು, ಸ್ವಸ್ಥ ಬುದ್ಧಿ ಪ್ರದಾನಿಸುವ ಯೋಗವನ್ನು ದೇಶದ 130 ಕೋಟಿ ಜನರು ಜೀವನಶೈಲಿಯ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು. ಅದರ ಪರಿಣಾಮಗಳನ್ನು ಮತ್ತು ಅದ್ಭುತಗಳನ್ನು ನೀವೇ ಕಾಣುತ್ತೀರಿ, ಅನುಭವಿಸುತ್ತೀರಿ.

ಪಂಚತತ್ತ್ವ ಯೋಗ: ಕ್ರಿಕೆಟಿಗ ವಿರಾಟ್ ಕೊಹ್ಲಿ ನೀಡಿದ ಫಿಟ್ನೆಸ್ ಚ್ಯಾಲೆಂಜ್ ಸ್ವೀಕರಿಸಿ ಈಚೆಗೆ ನಾನು ಪಂಚತತ್ತ್ವ ಯೋಗದ ವಿಡಿಯೋ ದೃಶ್ಯಾವಳಿ ಬಿಡುಗಡೆ ಮಾಡಿದೆ. ಮಾನವ ದೇಹರಚನೆಯಲ್ಲಿ ಭೂಮಿ, ಆಕಾಶ, ವಾಯು, ಅಗ್ನಿ ಮತ್ತು ನೀರು-ಈ ಪಂಚತತ್ತ್ವಗಳ ಪ್ರಭಾವ ಇದ್ದು ಯೋಗಾಸನಗಳ ಮೂಲಕ ಮನುಷ್ಯ-ಪ್ರಕೃತಿ ಸಮತೋಲನ ಸಾಧಿಸಬಹುದು.

ಉದ್ಯೋಗ ಮಾರುಕಟ್ಟೆ ಸೃಷ್ಟಿ: ಇಂದು ವಿಶ್ವದ ಯಾವ ದೇಶವೂ ಯೋಗದಿಂದ ಅಪರಿಚಿತವಾಗಿ ಉಳಿದಿಲ್ಲ. ಎಲ್ಲ ರಾಷ್ಟ್ರಗಳು ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗವನ್ನು ಅಳವಡಿಸಿಕೊಂಡಿವೆ. ಭಾರತದಲ್ಲೂ ವಿಶ್ವ ಯೋಗ ದಿನದ ಆಚರಣೆ ಆರಂಭಗೊಂಡ ಬಳಿಕ ಯೋಗದ ಹೊಸ ಹೊಸ ಸಂಸ್ಥೆಗಳು, ತರಬೇತಿ ಸಂಸ್ಥೆಗಳು ಆರಂಭಗೊಂಡಿವೆ. ವಿಶ್ವದ ಬೇರೆ-ಬೇರೆ ರಾಷ್ಟ್ರಗಳು ಉತ್ತಮ ಯೋಗ ಶಿಕ್ಷಕರಿಗಾಗಿ ಭಾರತದತ್ತ ನೋಡುತ್ತಿವೆ. ಹಾಗಾಗಿ, ಯೋಗ ಉದ್ಯೋಗ ಮಾರುಕಟ್ಟೆಯನ್ನೂ ಸೃಷ್ಟಿಸಿದೆ ಎಂಬುದನ್ನು ಯುವಸಮುದಾಯ ಮನಗಾಣಬೇಕು.

ಆಸನ ಲಾಭ

ನಾನು ಮಾಡುವ ಕೆಲ ಆಸನಗಳ ಪ್ರಯೋಜನ ಕುರಿತ ಸಂಕ್ಷಿಪ್ತ ವಿವರ

1) ಸುಖಾಸನ: ಇದು ಶ್ವಾಸ ಮತ್ತು ಧ್ಯಾನಕೇಂದ್ರಿತ. ಈ ಆಸನ ಒತ್ತಡವನ್ನು ಕಡಿಮೆ ಮಾಡಿ ಏಕಾಗ್ರತೆ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ.

2) ಪದ್ಮಾಸನ: ಜೀರ್ಣಕ್ರಿಯೆ ಸರಾಗವಾಗಿಸುತ್ತದೆ. ಫ್ರೆಶ್​ನೆಸ್ ನೀಡುವ ಜತೆಗೆ ಏಕಾಗ್ರತೆ ಹೆಚ್ಚಿಸುತ್ತದೆ.

3) ಉಷ್ಟ್ರಾಸನ: ಸ್ನಾಯುಗಳು, ಬೆನ್ನು, ಭುಜ, ಬಾಹುಗಳನ್ನು ಗಟ್ಟಿಗೊಳಿಸುವ ಜತೆಗೆ ಮೈಕೈ ನೋವು ನಿವಾರಿಸುತ್ತದೆ. ಕುತ್ತಿಗೆ, ಹೊಟ್ಟೆಯನ್ನು ಟ್ಯೂನಪ್ ಆಗಿಸುತ್ತದೆ.

4) ವಜ್ರಾಸನ: ಊಟ ಮಾಡಿದ ಬಳಿಕ 10 ನಿಮಿಷ ವಜ್ರಾಸನದಲ್ಲಿ ಕುಳಿತರೆ ಆಹಾರ ಬೇಗನೆ ಜೀರ್ಣವಾಗುತ್ತದೆ. ಅಲ್ಲದೆ, ಆಸಿಡಿಟಿ, ಗ್ಯಾಸ್ಟ್ರಿಕ್​ನಿಂದ ಪರಿಹಾರ ದೊರೆಯುತ್ತೆ. ಮೊಣಕಾಲು ನೋವಿದ್ದವರು ಈ ಆಸನ ಮಾಡಬಾರದು.

# ಯೋಗ ಯಾವುದೇ ಖರ್ಚಿಲ್ಲದೆ ಫಿಟ್ನೆಸ್ ಮಾತ್ರವಲ್ಲ ವೆಲ್​ನೆಸ್​ನ ಗ್ಯಾರಂಟಿಯನ್ನೂ ನೀಡುತ್ತದೆ.

# ಯೋಗ ರೋಗಮುಕ್ತಿಯ ಜತೆಗೆ ಭೋಗಮುಕ್ತಿಯ ಮಾರ್ಗವಾಗಿದೆ.

#ಯೋಗ ವಿಚಾರಗಳಿಂದ ಮನುಷ್ಯ ಶ್ರೇಷ್ಠನಾಗುತ್ತಾನೆ. ಇದು ಜ್ಞಾನ, ಭಕ್ತಿ ಮತ್ತು ಕರ್ಮದ ಅದ್ಭುತ ಸಮನ್ವಯ.

# ಒತ್ತಡದಿಂದ ಮುಕ್ತಿ ಪಡೆಯಲು ಮತ್ತು ಮನಸ್ಸನ್ನು ಪ್ರಸನ್ನ-ಶಾಂತವಾಗಿರಿಸಲು ಯೋಗ ಶ್ರೇಷ್ಠ ಮಾಧ್ಯಮ.

# ಯೋಗ ಜಾತಿ, ಮತ, ಧರ್ಮ, ಲಿಂಗ, ವಯಸ್ಸು, ಪ್ರಾಂತ್ಯ, ಭಾಷೆ, ರಾಷ್ಟ್ರಗಳ ಬಂಧನದಿಂದ ಅತೀತವಾಗಿದೆ.

Leave a Reply

Your email address will not be published. Required fields are marked *

Back To Top