ಯಲಬುರ್ಗಾ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸೋಮವಾರ ಭೇಟಿ ನೀಡಿ ಇಲಾಖೆ ಮಾಹಿತಿ ಹಾಗೂ ಕಡತಗಳ ಪರಿಶೀಲನೆ ನಡೆಸಿದರು. ಬರೊಬ್ಬರಿ ಒಂದು ತಾಸು ಆಸ್ಪತ್ರೆಯಲ್ಲಿದ್ದು, ಆರೋಗ್ಯ ಇಲಾಖೆಯಿಂದ ದೊರೆವ ಯೋಜನೆ, ರೋಗಿಗಳ ಚಿಕಿತ್ಸೆ ಕುರಿತು ಅಕಾರಿಗಳಿಂದ ಮಾಹಿತಿ ಪಡೆದರು.
ಆಸ್ಪತ್ರೆಯ ಎಲ್ಲ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಚಿಕಿತ್ಸೆ ಉಚಿತ ಸಿಗುತ್ತಿದೆಯಾ ಅಥವಾ ಹಣ ಕೇಳುತ್ತಾರ? ಹೊರಗಡೆ ಮಾತ್ರೆ ತರುವಂತೆ ಹೇಳುತ್ತಾರಾ ಎಂದು ರೋಗಿಗಳನ್ನು ಪ್ರಶ್ನಿಸಿದರು. ಸಾರ್ವಜನಿಕರು ಇಲ್ಲ ಸರ್, ವೈದ್ಯರು ರೇಷನ್ ಕಾರ್ಡ್ ಇದ್ದರೆ ಚಿಕಿತ್ಸೆ ಸೌಲಭ್ಯ ಸಿಗಲಿದೆ ಎಂದ್ದಿದ್ದಾರೆಂದು ಉತ್ತರಿಸಿದರು.
ಪಟ್ಟಣ ಆಸ್ಪತ್ರೆ ಸೇರಿದಂತೆ ಪಿಎಚ್‌ಸಿ, ಸಿಎಚ್‌ಸಿಗಳಿಗೆ ಬರುವ ರೋಗಿಗಳಿಗೆ ಸಕಾಲಕ್ಕೆ ಸ್ಪಂದಿಸಿ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದೆಂದು ವೈದ್ಯ, ಸಿಬ್ಬಂದಿಗೆ ಎಚ್ಚರಿಗೆ ನೀಡಿದರು. ತಾಲೂಕಿನ ಆಸ್ಪತ್ರೆಗಳಿಗೆ ತಾಪಂ ಅನುದಾನ ಬಳಕೆ ಮಾಡಿಕೊಂಡು ಅಗತ್ಯ ಸೌಕರ್ಯ ಕಲ್ಪಿಸಬೇಕೆಂದು ಇಒ ಸಂತೋಷ್ ಪಾಟೀಲ್‌ಗೆ ಸಿಇಒ ಆದೇಶಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚುವರಿ ಆಂಬುಲೆನ್ಸ್ ಸೇವೆ ಅವಶ್ಯಕತೆ ಇದೆ. ಸರ್ಕಾರದಿಂದ ಮಂಜೂರು ಮಾಡಿಸುವಂತೆ ಮುಖ್ಯ ವೈದ್ಯಾಕಾರಿ ಕೃಷ್ಣ ಹೊಟ್ಟಿ ಮನವಿ ಮಾಡಿದರು. ಈ ಬಗ್ಗೆ ಸಿಇಒ ಅವರು ಕ್ರಮ ಕೈಗೊಳ್ಳಲಾಗುವುದು ಎಂದರು.
ಟಿಎಚ್‌ಒ ಅಮರೇಶ ನಾಗರಾಳ, ಇಲಾಖೆ ಮಾಹಿತಿ ಮತ್ತು ವರದಿ ನೀಡಿದರು. ಇದೇ ವೇಳೆ ಸಿಇಒ ಅವರು ಔಷಧ ಮಳಿಗೆ, ಹೆರಿಗೆ ಕೊಠಡಿ, ಐಸಿಯು, ಜನರಲ್ ವಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಿದರು.
ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಸಮಾಜ ಕಲ್ಯಾಣ ಅಕಾರಿ ಶಶಿಧರ ಸಕ್ರಿ, ಸಿಬ್ಬಂದಿ ಚಂದ್ರಶೇಖರ ಅಣ್ಣಿಗೇರಿ, ಸಂಗಪ್ಪ ಕುರಿ ಹಾಗೂ ವೈದ್ಯರು, ಸಿಬ್ಬಂದಿ ಇದ್ದರು.