ಯಲಬುರ್ಗಾ: ಸಂಘಟನೆಯು ನಾಡು ನುಡಿ ಉಳಿವಿಗೆ ಶ್ರಮಿಸುವ ಜತೆಗೆ ಸಾಮಾಜಿಕ ಸೇವೆ ಮಾಡುತ್ತಾ ಬಂದಿದೆ ಎಂದು ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ಪಿ. ಕೃಷ್ಣೇಗೌಡ ಹೇಳಿದರು.
ತಾಲೂಕಿನ ಬೇವೂರು ಗ್ರಾಮದಲ್ಲಿ ಕರವೇ ಸ್ವಾಭಿಮಾನಿ ಬಣದಿಂದ ರಾಜ್ಯೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಕನ್ನಡಿಗರ ಸಮಾವೇಶ ಹಾಗೂ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದ ಗಡಿ ಭಾಗಗಳಲ್ಲಿ 48 ಶಾಲೆಗಳನ್ನು ದತ್ತು ಪಡೆದು ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗುತ್ತಿದೆ. ಬಡವರಿಗೆ ಮನೆ ಕಟ್ಟಿಸಿಕೊಡಲಾಗಿದೆ. ಸಂಘಟನೆ ಯಾವಾಗಲೂ ಸಾಮಾಜಿಕ ಚಿಂತನೆ, ನಿಸ್ವಾರ್ಥದಿಂದ ಕೂಡಿರಬೇಕು. ಕಾರ್ಮಿಕ, ರೈತರಪರ ಇರಬೇಕು. ಪ್ರತಿಯೊಬ್ಬರೂ ಭಾಷೆಗೆ ಗೌರವ ಕೊಡಬೇಕು ಎಂದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ ಮಾತನಾಡಿ, ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿ ಉಳಿವಿಗಾಗಿ ಕರವೇ ಸ್ವಾಭಿಮಾನಿ ಬಣ ಶ್ರಮಿಸುತ್ತಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಹೋರಾಟ ಅನಿವಾರ್ಯ ಎಂದರು.
ಸಂಘಟನೆ ಜಿಲ್ಲಾಧ್ಯಕ್ಷ ಬಸವರಾಜ ಹಳ್ಳಿ, ಗಾಯಕರಾದ ಜೀವನ್‌ಸಾಬ್ ಬಿನ್ನಾಳ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ವಕೀಲ ಹನುಮಂತರಾವ ಕೆಂಪಳ್ಳಿ, ಗ್ರಾಪಂ ಅಧ್ಯಕ್ಷೆ ಅಂದಮ್ಮ ಬಳಿಗಾರ, ಸದಸ್ಯೆ ಮಲ್ಲಮ್ಮ ಗೊಂದಿ, ಪ್ರಮುಖರಾದ ಭರತ್ ರಾಮೇಗೌಡ, ಕಳಕಪ್ಪ ಕಂಬಳಿ, ಶಿವಸಂಗಪ್ಪ ಹುಚನೂರು, ಮಲ್ಲನಗೌಡ ಕೋನನಗೌಡ, ಲಕ್ಷ್ಮಣ ಕಂಬಾಗಿ, ದಯಾನಂದ ಸ್ವಾಮಿ, ಬುಡ್ಡಪ್ಪ ಹಳ್ಳಿ ಇತರರಿದ್ದರು.