ಸತ್ಯ ಒಪ್ಪಿಕೊಂಡಾಯ್ತು… ರಾಜೀನಾಮೆ ಯಾವಾಗ? ಬಿಎಸ್​ವೈಗೆ ಡಿಸಿಎಂ ಪರಮೇಶ್ವರ್​ ಪ್ರಶ್ನೆ

ತುಮಕೂರು: ಆಪರೇಷನ್​ ಕಮಲಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರ ಆಡಿಯೋ ತಮ್ಮದೆಂದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ ಈಗ ಅವರೇ ಸಂಭಾಷಣೆ ನಡೆದದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದ್ದರಿಂದ ರಾಜೀನಾಮೆ ನೀಡಲಿ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್​ ಅವರು ಒತ್ತಾಯಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿರುವ ಅವರು, ಆಡಿಯೋ ಬಗ್ಗೆ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಹಾಗಿದ್ದಮೇಲೆ ಅವರೇ ಹೇಳಿದಂತೆ ರಾಜಕೀಯ ನಿವೃತ್ತಿ ಪಡೆಯಬೇಕು. ಈ ವಿಚಾರವನ್ನು ನಾವು ಸ್ಪೀಕರ್​ ಬಳಿಗೆ ಕೊಂಡೊಯ್ಯುತ್ತೇವೆ. ನಾವು ಕಾನೂನು ಪಾಲಿಸುವವರು. ಆದ್ದರಿಂದ ಇದನ್ನು ಸ್ಪೀಕರ್​ಗೆ ತಿಳಿಸುತ್ತೇವೆ. ನಂತರ ಅವರು ಯಾವುದಾದರೂ ಕ್ರಮ ಕೈಗೊಳ್ಳಲಿ. ಕಾನೂನಿನ ಪ್ರಕಾರ ಯಡಿಯೂರಪ್ಪ ಅವರ ಶಾಸಕತ್ವ ಅನರ್ಹ ಆಗಬೇಕು ಎಂದೂ ಹೇಳಿದರು.

ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಕೀಳು ಮಟ್ಟದ ರಾಜಕಾರಣಕ್ಕಿಳಿದಿದೆ ಎಂದು ಪರಮೇಶ್ವರ್​ ವಾಗ್ದಾಳಿ ನಡೆಸಿದರು.