ಆಪರೇಷನ್​ಗೆ ಆಡಿಯೋ ಬ್ರೇಕ್!

ಕಳೆದೊಂದು ತಿಂಗಳಿಂದ ರಾಜ್ಯದಲ್ಲಿ ಸುನಾಮಿ ಎಬ್ಬಿಸಿದ್ದ ಆಪರೇಷನ್ ರಾಜಕೀಯ ನಿರ್ಣಾಯಕ ಘಟ್ಟ ತಲುಪಿದೆ. ಮುಂಬೈ ಸೇರಿದ್ದ ನಾಲ್ವರು ಅತೃಪ್ತರ ವಿರುದ್ಧ ಅಂತಿಮ ಕ್ರಮವಾಗಿ ರಾಜ್ಯ ಕೈ ನಾಯಕರು ಅನರ್ಹತೆ ಅಸ್ತ್ರ ಪ್ರಯೋಗಿಸಿ ಸ್ಪೀಕರ್​ಗೆ ದೂರು ಸಲ್ಲಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸ್ಪೋಟಗೊಂಡಿದ್ದ ಆಡಿಯೋ ಬಾಂಬ್ ಪ್ರಕರಣದ ಎಸ್​ಐಟಿ ತನಿಖೆಗೆ ಆದೇಶಿಸುವ ಮೂಲಕ ತಣ್ಣಗೆ ಹೊಗೆಯಾಡುತ್ತಿದ್ದ ಆಪರೇಷನ್ ಸಾಧ್ಯತೆಯನ್ನು ಮಟ್ಟಹಾಕುವ ಜಾಣ್ಮೆಯನ್ನು ಸರ್ಕಾರ ತೋರಿದೆ.

ಆಡಿಯೋ ಕೋಲಾಹಲ

ಬೆಂಗಳೂರು: ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಹೆಸರು ಪ್ರಸ್ತಾಪವಾಗಿರುವ 50 ಕೋಟಿ ರೂ. ಆಡಿಯೋ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್​ಐಟಿ)ಕ್ಕೆ ಒಪ್ಪಿಸುವ ಮೂಲಕ ಮೈತ್ರಿ ಸರ್ಕಾರ ಬಿಜೆಪಿಯನ್ನು ವ್ಯೂಹದಲ್ಲಿ ಸಿಲುಕಿಸಿದೆ. ಸರ್ಕಾರದ ನಿರ್ಧಾರ ವಿರುದ್ಧ ಸಿಡಿದೆದ್ದಿರುವ ಬಿಜೆಪಿ, ಎಸ್​ಐಟಿ ಬದಲು ನ್ಯಾಯಾಂಗ ತನಿಖೆಗೆ ಪಟ್ಟು ಹಿಡಿದು, ವಿಧಾನಮಂಡಲ ಕಲಾಪದಲ್ಲಿ ಹೋರಾಟ ಆರಂಭಿಸಿದೆ.

ಆಡಿಯೋ ಪ್ರಕರಣ ಸೋಮವಾರ ಇಡೀ ದಿನ ವಿಧಾನಸಭೆ ಕಲಾಪವನ್ನು ಆಪೋಶನ ಪಡೆಯಿತು. ನಾಡಿನ ಹತ್ತಾರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಿದ್ದ ಕಲಾಪ ಸ್ಪೀಕರ್ ಮೇಲಿನ ಆರೋಪದ ಸುತ್ತವೇ ಸುತ್ತಿತು. ಅಂತಿಮವಾಗಿ ಪ್ರಕರಣವನ್ನು ಎಸ್​ಐಟಿಗೆ ಕೊಡುವ ತೀರ್ವನಕ್ಕೆ ಬಂದ ಬಳಿಕ ಬಿಜೆಪಿ ಪ್ರತಿಭಟನೆ ಆರಂಭಿಸಿದ ಹಿನ್ನೆಲೆಯಲ್ಲಿ ಕಲಾಪ ಮುಂದೂಡಲ್ಪಟ್ಟಿತು.

ಪಕ್ಷಾತೀತವಾಗಿ ಮಾತನಾಡಿದ ಶಾಸಕರು ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನೈತಿಕ ಸ್ಥೈರ್ಯ ತುಂಬಿದರು. ರಮೇಶ್ ಕುಮಾರ್ ರಾಜೀನಾಮೆ ಕೊಡುತ್ತಾರೆಂಬ ವದಂತಿ ಹರಿದಾಡಿದ ಹಿನ್ನೆಲೆಯಲ್ಲಿ ಆತುರದ ನಿರ್ಧಾರ ಬೇಡವೆಂದು ಸಲಹೆ ನೀಡಿದರು.

‘ನಾನು ಸ್ಥಾನ ಬಿಟ್ಟು ಹೋಗುವುದಿಲ್ಲ. ಬದಲಿಗೆ ನನ್ನ ಮೇಲೆ ಬಂದಿರುವ ಕಳಂಕದ ಬಗ್ಗೆ ಮುಂದಿನ 15 ದಿನಗಳಲ್ಲೇ ತನಿಖೆ ಪೂರ್ಣಗೊಂಡು ವರದಿ ಬರಬೇಕು. ಸರ್ಕಾರ ಸೂಕ್ತ ತನಿಖೆ ನಡೆಸಬೇಕು’ ಎಂದು ಅಂತಿಮವಾಗಿ ಸ್ಪೀಕರ್ ಅಭಿಪ್ರಾಯಪಟ್ಟರು. ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆ ಬದಲು ಎಸ್​ಐಟಿ ಮೂಲಕ ತನಿಖೆ ಮಾಡಿಸಬೇಕೆಂದು ಸಿಎಂಗೆ ನಿರ್ದೇಶನ ನೀಡಿದರು. ಇದು ಸಲಹೆ ಎಂದು ಪರಿಗಣಿಸುವಂತೆ ರಮೇಶ್ ಕುಮಾರ್ ಹೇಳಿದರೂ ಪೀಠದಿಂದ ಎಸ್​ಐಟಿ ಬಗೆಗಿನ ತನಿಖೆಗೆ ಒಲವು ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರು ಸರ್ಕಾರದ ತೀರ್ವನಕ್ಕೆ ವಿರೋಧ ವ್ಯಕ್ತಪಡಿಸಿದರು.

ನ್ಯಾಯಾಂಗ ತನಿಖೆಯೇ ಸೂಕ್ತ, ಎಸ್​ಐಟಿ ತನಿಖೆ ಬಗ್ಗೆ ನಂಬಿಕೆ ಇಲ್ಲ ಎಂದು ವಾದಿಸಿದರು. ಆದರೆ, ಈ ವಾದಕ್ಕೆ ಸ್ಪೀಕರ್ ಸಹಮತ ವ್ಯಕ್ತಪಡಿಸಲಿಲ್ಲ. ಅಂತಿಮವಾಗಿ ಅಪರಾಹ್ನ ಕಲಾಪ ಮಂಗಳವಾರಕ್ಕೆ ಮುಂದೂಲ್ಪಟ್ಟಿತು. ಮಂಗಳವಾರವೂ ಇದೇ ವಿಚಾರ ಕೈಗೆತ್ತಿಕೊಂಡು ಸರ್ಕಾರವನ್ನು ಹಣಿಯಲು ಬಿಜೆಪಿ ನಿರ್ಧರಿಸಿದೆ. ಎಸ್​ಐಟಿ ರಚನೆಯಾದರೆ ರಾಜಕೀಯ ಪ್ರಭಾವ ಬೀರುತ್ತದೆ ಎಂಬುದು ಬಿಜೆಪಿ ನಾಯಕರ ವಾದವಾಗಿತ್ತು.

ನ್ಯಾಯಾಧೀಶರೇ ಹೆಡ್?: ಬಿಜೆಪಿಯನ್ನು ಕಟ್ಟಿಹಾಕಲು ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಎಸ್​ಐಟಿ ಮೂಲಕವೇ ತನಿಖೆ ನಡೆಸಲು ಮೈತ್ರಿ ಸರ್ಕಾರದ ನಾಯಕರು ಸಂಜೆ ಕಲಾಪ ಮುಗಿದ ಬಳಿಕ ಸಭೆ ಸೇರಿ ರ್ಚಚಿಸಿದರು. ಮಂಗಳವಾರ ಕಲಾಪದಲ್ಲಿ ಈ ಪ್ರಕಟಣೆ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಎಸ್​ಐಟಿ ತನಿಖೆ ಪ್ರಕ್ರಿಯೆ

  • ವಿಶೇಷ ತನಿಖಾ ತಂಡ ಮಂಗಳವಾರವೇ ರಚನೆಯಾಗಿ, ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಿದೆ.
  • ಆಡಿಯೋ ತಯಾರಿಸಿದ ಶರಣಗೌಡ ಅವರನ್ನು ಕರೆಸಿ ದಾಖಲೆ ವಶಕ್ಕೆ ಪಡೆಯಲಾಗುತ್ತದೆ.
  • ಆಡಿಯೋ ಅಸಲಿಯತ್ತು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರಿಶೀಲನೆಗೊಳಪಡಲಿದೆ.
  • ಬಳಿಕ ಶರಣಗೌಡ ಹೇಳಿಕೆ ಆಧಾರದಲ್ಲಿ ಅವರು ಆರೋಪಿಸುವ ನಾಯಕರಿಗೆ ನೋಟಿಸ್ ಜಾರಿ.
  • ನೋಟಿಸ್ ಪಡೆದುಕೊಂಡವರು ವಿಚಾರಣೆಗೆ ಹಾಜರಾದಾಗ ಧ್ವನಿ ಮಾದರಿ ಪಡೆದು ಪರಿಶೀಲಿಸಲಾಗುತ್ತದೆ.
  • ತನಿಖೆಗೆ ಸ್ಪಂದಿಸದಿದ್ದರೆ ಬಂಧಿಸಲು ಅವಕಾಶವಿದೆ.
  • ಅಂತಿಮವಾಗಿ ತನಿಖಾ ತಂಡ ಸರ್ಕಾರದ ಮುಖೇನ ಸ್ಪೀಕರ್​ಗೆ ವರದಿ ಸಲ್ಲಿಸುತ್ತದೆ. ವರದಿಯಲ್ಲಿ ಯಾವುದೇ ಜನಪ್ರತಿನಿಧಿ ವಿರುದ್ಧ ಆರೋಪ ಸಾಬೀತಾಗಿದ್ದರೆ ಸ್ಪೀಕರ್ ಕ್ರಮಕ್ಕೆ ಮುಂದಾಗುತ್ತಾರೆ.
  • ಪೀಠಕ್ಕೆ ಅವಮಾನಿಸಿದ ಆರೋಪದ ಮೇಲೆ ಅವರನ್ನು ಉಚ್ಚಾಟನೆ ಮಾಡುವ ಅವಕಾಶವಿದೆ, ಆದರೆ, ಅವರಿಂದ ಮೊದಲು ವಿವರಣೆ ಪಡೆದುಕೊಳ್ಳಬೇಕಾಗುತ್ತದೆ.

ಸ್ಪೀಕರ್ ಭಾವುಕ

1. ಆಪಾದನೆ ಮಾಡಿದವರು ರಾಜಕೀಯದಿಂದ ದೂರವಾಗಲಿ, ಇಲ್ಲವಾದರೆ ನಾನು ಈ ಸ್ಥಾನದಲ್ಲಿ ಮುಂದುವರಿಯಲಾಗಲ್ಲ.

2. ಈ ಆರೋಪದ ಬುಟ್ಟಿಯನ್ನು ಹೊತ್ತು ಹೇಗೆ ದಿನ ಕಳೆಯಲಿ? ಪತ್ನಿ, ಸಹೋದರ, ಮಕ್ಕಳಿಗೆ ಹೇಗೆ ಮುಖ ತೋರಿಸಲಿ?

3. ನನ್ನ ಚಾರಿತ್ರ್ಯವಧೆ ಮಾಡಿದರೆ ಸಾವಿಗಿಂತ ಹೆಚ್ಚು ಕ್ರೌರ್ಯ ಆಗುತ್ತದೆ. ನಾನೆಂದೂ ಇಂಥ ಕೆಲಸ ಮಾಡಿಲ್ಲ.

ತರಾತುರಿಯಲ್ಲಿ ಸಾಧ್ಯವೇ?

15 ದಿನದಲ್ಲಿ ತನಿಖೆ ಮುಗಿಸಲು ಸಮಯ ನಿಗದಿ ಮಾಡಲಾಗಿದೆ. ಆದರೆ, ಅಷ್ಟು ಬೇಗ ಸಾಧ್ಯವೇ ಇಲ್ಲ ಎಂಬ ವಾದವಿದೆ. ಎಸ್​ಐಟಿ ರಚನೆಯಾಗಿ ಸಂಬಂಧಪಟ್ಟವರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿ ವರದಿ ನೀಡಲು 15 ದಿನದಲ್ಲಿ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.

ಎಸ್​ಐಟಿಯಲ್ಲಿ ಯಾರ್ಯಾರು

ಎಡಿಜಿಪಿ ರ್ಯಾಂಕ್​ನ ಅಧಿಕಾರಿ, ಅವರ ಅಧೀನದಲ್ಲಿ ಎಸ್ಪಿಗಳು, ಇನ್​ಸ್ಪೆಕ್ಟರ್​ಗಳು, ಸಬ್ ಇನ್​ಸ್ಪೆಕ್ಟರ್​ಗಳು ಇರುತ್ತಾರೆ. ಮಂಗಳವಾರ ಎಸ್​ಐಟಿ ಅಧಿಸೂಚನೆ ಹೊರಟ ಬಳಿಕ ತನಿಖಾ ತಂಡದ ಮುಖ್ಯಸ್ಥರು ತಂಡವನ್ನು ಆಯ್ಕೆ ಮಾಡಿಕೊಂಡು ತಂಡ ರಚಿಸಿಕೊಳ್ಳುತ್ತಾರೆ.

 

ಸಿಎಂ ಕೈಕೆಳಗೆ ತನಿಖೆ ಬೇಡ ಎಂಬುದು ನಮ್ಮ ಅಪೇಕ್ಷೆಯೇ ಹೊರತು ತನಿಖೆಯಿಂದ ಓಡಿ ಹೋಗುತ್ತಿಲ್ಲ. ಸದನ ಸಮಿತಿ ಅಥವಾ ನ್ಯಾಯಾಧೀಶರಿಂದ ತನಿಖೆ ಮಾಡಿಸಲು ತಿಳಿಸಿದ್ದೇವೆ. ತರಾತುರಿಯಲ್ಲಿ ತನಿಖೆ ಬೇಡ ಎಂದು ನಾಳೆಯೂ ಸ್ಪೀಕರ್​ಗೆ ಸ್ಪಷ್ಟಪಡಿಸುತ್ತೇವೆ.

| ಯಡಿಯೂರಪ್,ಪ ಬಿಜೆಪಿ ಅಧ್ಯಕ್ಷ

 

ಯಾರೋ ಏನೋ ಮಾತನಾಡಿದರು ಎಂದು ನೀವು ಭಾವುಕರಾಗಬೇಕಿಲ್ಲ. ನಾವೆಲ್ಲ ನಿಮ್ಮ ಪರವಾಗಿದ್ದೇವೆ. ನಿಮ್ಮ ಮೇಲೆ ನಂಬಿಕೆ ಇದೆ. ಈ ವಿಚಾರವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ.

| ಮಾಧುಸ್ವಾಮಿ, ಬಿಜೆಪಿ ಶಾಸಕ

 

ಎಸ್​ಐಟಿ ಏಕೆ ಬೇಡ

1. ಆಡಿಯೋ ರೆಕಾರ್ಡ್ ಮಾಡಿಸಿದ್ದೇ ತಾನು ಎಂದು ಸಿಎಂ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಇದೀಗ ಅವರೇ ನಿರ್ಧರಿಸುವ ಅಧಿಕಾರಿ ನೇತೃತ್ವದ ತಂಡದಿಂದಲೇ ತನಿಖೆ ನಡೆಯುತ್ತದೆ.

2.ಸರ್ಕಾರದ ಹಿಡಿತದಲ್ಲಿರುವ ತನಿಖಾ ತಂಡದಿಂದ ನಡೆಯುವ ತನಿಖೆ ಯಾವ ಮಗ್ಗುಲಿಗಾದರೂ ಹೊರಳಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ.

3. ಆಡಿಯೋ ರೆಕಾರ್ಡ್ ಪೂರ್ವಯೋಜಿತ ಎಂದು ಮುಖ್ಯಮಂತ್ರಿಯವರೇ ಒಪ್ಪಿಕೊಂಡ ಮೇಲೆ ತನಿಖೆಯ ಗತಿ ಮತ್ತು ದಿಕ್ಕು ಸ್ಪಷ್ಟ

4. ನ್ಯಾಯಾಂಗ ತನಿಖೆ ಬಗ್ಗೆ ಒಲವಿಲ್ಲದಂತೆ ಎಸ್​ಐಟಿ ತನಿಖೆಗೆ ಉತ್ಸುಕತೆ ತೋರಿ

ಹಠ ಹಿಡಿದಿರುವುದರ ಹಿಂದೆ ರಾಜಕೀಯ ಬಣ್ಣದ ವಾಸನೆ.

 

ನೀವು(ಸ್ಪೀಕರ್) ನ್ಯಾಯಸಮ್ಮತವಾಗಿ ಕಾರ್ಯ ಮಾಡುತ್ತಿದ್ದೀರಿ. ನೀವೊಬ್ಬ ಭಾವನಾಜೀವಿ. ಎಲ್ಲವನ್ನೂ ಸೂಕ್ಷ್ಮವಾಗಿ ತೆಗೆದುಕೊಳ್ಳುತ್ತೀರಿ. ಎಸ್​ಐಟಿ ಮೂಲಕ ತನಿಖೆ ಆಗಬೇಕು ಎಂಬ ಮಾತಿಗೆ ನಾನು ಬದ್ಧ.

| ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

 

ಅತೃಪ್ತರಿಗೆ ಆಘಾತ

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ನಾಟ್ ರೀಚೆಬಲ್ ಆಗಿಯೇ ಉಳಿದಿರುವ ನಾಲ್ವರು ಅತೃಪ್ತ ಶಾಸಕರ ವಿರುದ್ಧ ಕೊನೆಗೂ ಕಾಂಗ್ರೆಸ್ ಅನರ್ಹತೆಯ ಅಸ್ತ್ರ ಪ್ರಯೋಗಿಸಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಈ ನಾಲ್ವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿ ಕಾಂಗ್ರೆಸ್​ನ ನಿಯೋಗ ಸೋಮವಾರ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದೆ. ಆ ಮೂಲಕ ಬೇಲಿ ಮೇಲೆ ಕುಳಿತಿರುವ ಪಕ್ಷದ ಇತರ ಶಾಸಕರಿಗೂ ಎಚ್ಚರಿಕೆ ರವಾನಿಸಿದೆ.

ಕಾಂಗ್ರೆಸ್ ನಿಯೋಗದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇದ್ದರು. ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕಮಟಳ್ಳಿ, ಉಮೇಶ್ ಜಾಧವ್ ಮತ್ತು ನಾಗೇಂದ್ರ ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ, ನೋಟಿಸ್​ಗಳಿಗೆ ಸರಿಯಾದ ಕಾರಣಗಳನ್ನೂ ನೀಡಿಲ್ಲ.

ಹೀಗಾಗಿ ಪಕ್ಷಾಂತರ ನಿಷೇಧ ಕಾಯ್ದೆಯಂತೆ ಶಾಸಕಸ್ಥಾನದಿಂದ ಅನರ್ಹಗೊಳಿಸಿ ಎಂದು ದೂರಿನಲ್ಲಿ ವಿವರಿಸಲಾಗಿದೆ. ಅತೃಪ್ತರ ಅನರ್ಹತೆ ಸಂಬಂಧ ವಕೀಲ ಶಶಿಕಿರಣ ತಂಡದಿಂದ ಕಾನೂನು ಸಲಹೆ ಪಡೆದ ಬಳಿಕ ಸಿದ್ದರಾಮಯ್ಯ 82 ಪುಟಗಳ ದಾಖಲೆಯೊಂದಿಗೆ ಸ್ಪೀಕರ್​ಗೆ ದೂರು ನೀಡಿದರು. ಶಾಸಕಾಂಗ ಪಕ್ಷದ ಸಭೆಗೆ ಬರುವಂತೆ ನೋಟಿಸ್, ಸಭೆಗೆ ಬಾರದಿರುವುದಕ್ಕೆ ಕಾರಣ ಕೇಳಿ ನೋಟಿಸ್, ನೋಟಿಸ್​ಗಳಿಗೆ ಅತೃಪ್ತರ ಶಾಸಕರು ನೀಡಿದ ಉತ್ತರಗಳು, ರಾಜಕೀಯ ಬೆಳವಣಿಗೆ ಮತ್ತು ಹೇಳಿಕೆಗಳನ್ನೊಳಗೊಂಡ ಪತ್ರಿಕಾ ವರದಿಗಳು ದಾಖಲೆಯಲ್ಲಿ ಸೇರಿದೆ.

ನಾಲ್ವರು ಕಾಂಗ್ರೆಸ್​ನಿಂದ ಆಯ್ಕೆಯಾಗಿ ದ್ದರೂ ಪಕ್ಷದಿಂದ ದೂರವಾಗುತ್ತಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಅವಕಾಶವಿದ್ದು, ಅದರ ಪ್ರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

 

ಅನರ್ಹತೆಗೆ ಶಿಫಾರಸು ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ಒಂದೊಮ್ಮೆ ನೋಟಿಸ್ ಬಂದರೆ ಕಾನೂನು ಪ್ರಕಾರ ಉತ್ತರಿಸುವೆ. ಇನ್ನೂ 4-6 ಮುಖಂಡರು ನನ್ನ ಜತೆಗಿದ್ದು ಅವರೊಂದಿಗಿನ ಚರ್ಚೆ ಪೂರ್ಣಗೊಂಡಿಲ್ಲ. ಆ ಬಳಿಕವೇ ನಮ್ಮ ನಿರ್ಧಾರ ಹೊರಬೀಳಲಿದೆ.

| ಡಾ.ಉಮೇಶ್ ಜಾಧವ್, ಚಿಂಚೋಳಿ ಶಾಸಕ

ಮುಂದಿನ ಸಾಧ್ಯಾಸಾಧ್ಯತೆಗಳು

1. ನಾಲ್ವರು ಶಾಸಕರಿಗೆ ಸ್ಪೀಕರ್ 15 ದಿನ ಕಾಲಾವಕಾಶ ನೀಡಬಹುದು.

2. ಶಾಸಕರು ತಮ್ಮ ವಾದವನ್ನು ಸ್ಪೀಕರ್ ಮುಂದೆ ಮಂಡಿಸಬಹುದು.

3. ಪಕ್ಷ ವಿರೋಧಿ ಚಟುವಟಿಕೆಗೆ ದಾಖಲೆ ಇಲ್ಲವೆಂದು ಹೇಳಬಹುದು.

4. ಪಕ್ಷದ ಸಭೆಗೆ ಬಾರದೇ ಇರುವುದಕ್ಕೆ ಕಾರಣವನ್ನು ಶಾಸಕಾಂಗ ಪಕ್ಷದ ನಾಯಕರಿಗೆ ತಿಳಿಸಿರುವ ದಾಖಲೆ ಸ್ಪೀಕರ್​ಗೆ ಸಲ್ಲಿಸಬಹುದು.

5. ಸ್ಪೀಕರ್ ಕ್ರಮಕ್ಕೆ ಮುಂದಾದರೆ ನಾಲ್ವರೂ ಕೋರ್ಟ್ ಮೆಟ್ಟಿಲೇರ ಬಹುದು. ಆದರೆ ತೀರ್ಪು ಬರುವ ತನಕ ಶಾಸಕರಾಗಿರುವುದಿಲ್ಲ.

6. ನ್ಯಾಯಾಲಯದಲ್ಲಿ ಸ್ಪೀಕರ್ ಆದೇಶ ಎತ್ತಿ ಹಿಡಿದರೆ ಅವರ ರಾಜಕೀಯ ಭವಿಷ್ಯ ಹಾಳಾಗಲಿದೆ. ಇದೇ ವಿಧಾನಸಭೆ ಅವಧಿಗೆ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಇರುವುದಿಲ್ಲ.

7. ಕಾಂಗ್ರೆಸ್​ನ ಬೆದರಿಕೆ ತಂತ್ರಕ್ಕೆ ಬಾಗಿ ಪಕ್ಷವನ್ನು ಸೇರಿಕೊಳ್ಳಬಹುದು.