ಮೈಸೂರು: ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಿ.ವೈ.ವಿಜಯೇಂದ್ರ ಕಡತಗಳಿಗೆ ನಕಲಿ ಸಹಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಆ್ಯಕ್ಟಿಂಗ್ ಸಿಎಂನಂತೆ ವರ್ತಿಸಿದರು. ಸಾವಿರಾರು ಕಡತಗಳಿಗೆ ಸಿಎಂ ಅವರ ನಕಲಿ ಸಹಿ ಮಾಡಿದ್ದಾರೆ. ಇದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಪಡೆದುಕೊಳ್ಳಬೇಕು ಎಂದರು.
ಬಿಜೆಪಿ-ಜೆಡಿಎಸ್ ಪಾದಯಾತ್ರೆ ಮೂಲಕ ಕಾಂಗ್ರೆಸ್‌ಗೆ ಮಸಿ ಬಳಿಯಲು ಯತ್ನಿಸಿದೆ. ನಮ್ಮ ಪಕ್ಷ ವರ್ಚಸ್ಸು ಕುಗ್ಗಿಸುವ ಪ್ರಯತ್ನ ಬಹಳ ಕಾಲದಿಂದಲೂ ನಡೆದಿದೆ. ಆದರೆ, ಸಾಧ್ಯವಾಗಲಿಲ್ಲ. ಇವರು ಪ್ರಜಾಪ್ರಭುತ್ವ ವಿರೋಧಿಗಳು ಎಂದು ಹರಿಹಾಯ್ದರು.
ಯಡಿಯೂರಪ್ಪ ಆಪರೇಷನ್ ಕಮಲದ ರೂವಾರಿ. ಈಗ ನಾಚಿಕೆ, ಮಾನ ಮರ್ಯಾದೆ ಇಲ್ಲದೆ ಯಡಿಯೂರಪ್ಪ, ಕುಮಾರಸ್ವಾಮಿ ವರ್ತಿಸುತ್ತಿದ್ದಾರೆ. ಈಗ ಮರಿ ಯಡಿಯೂರಪ್ಪ(ವಿಜಯೇಂದ್ರ) ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಮಾಡಿರುವ ಹಗರಣಕ್ಕೆ ಲೆಕ್ಕವಿಲ್ಲ ಎಂದು ದೂರಿದರು.