ಕ್ಷಮಾಪಣೆ ವಿಚಾರದಲ್ಲಿ ಡಿಕೆಶಿ ಬೆನ್ನಿಗೆ ನಿಂತ ಯಡಿಯೂರಪ್ಪ

ಶಿವಮೊಗ್ಗ: “ಲಿಂಗಾಯತ ಸ್ವತಂತ್ರ ಧರ್ಮದ ವಿಚಾರಕ್ಕೆ ನಾವು ಕೈ ಹಾಕಬಾರದಿತ್ತು ಎಂಬ ಡಿ.ಕೆ ಶಿವಕುಮಾರ್​ ಅವರ ಹೇಳಿಕೆ ಬಗ್ಗೆ ಟೀಕೆ, ಟಿಪ್ಪಣಿಗಳು ಸರಿಯಲ್ಲ” ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಡಿಕೆಶಿ ಪರ ಬ್ಯಾಟಿಂಗ್​ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ಡಿ.ಕೆ.ಶಿವಕುಮಾರ್ ತಮ್ಮ ಸ್ವಂತ ಅಭಿಪ್ರಾಯ ಹೇಳಿದ್ದಾರೆ. ಈ ಹೇಳಿಕೆ ಬಗ್ಗೆ ಟೀಕೆ ಟಿಪ್ಪಣಿ ಸರಿಯಲ್ಲ. ವಾಸ್ತವ ಸಂಗತಿ ಅರ್ಥ ಮಾಡಿಕೊಂಡು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯನ್ನು ಎಲ್ಲರೂ ಸ್ವಾಗತಿಸಬೇಕು. ಈ ಹೇಳಿಕೆ ಬಗ್ಗೆ ಕುಹಕ, ವಿರೋಧ ಯಾರಿಗೂ ಶೋಭೆಯಲ್ಲ. ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಇದರಲ್ಲಿ ನನಗೆ ಯಾವುದೇ ರಾಜಕಾರಣ ಕಾಣುತ್ತಿಲ್ಲ,” ಎಂದು ಹೇಳಿದರು.

ಇನ್ನೊಂದೆಡೆ ಯಡಿಯೂರಪ್ಪ ಅವರ ಮಾತಿನ ಧಾಟಿಯಲ್ಲೇ ಮಾತನಾಡಿರುವ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ, ಬಿಎಸ್​ವೈ ಪುತ್ರ ಬಿ.ವೈ ರಾಘವೇಂದ್ರ, ” ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ಸ್ವಾಗತಾರ್ಹ. ಯಾವುದೇ ಧರ್ಮ ಒಡೆದು ರಾಜಕೀಯ ಮಾಡಬಾರದು. ತಪ್ಪು ಮಾಡುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯ. ತಪ್ಪು ತಿದ್ದಿಕೊಂಡು ಹೇಳಿಕೆ ನೀಡಿರುವುದು ಸ್ವಾಗತಾರ್ಹ,” ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅವರು ಸಚಿವ ಡಿ.ಕೆ ಶಿವಕುಮಾರ್​ ಅವರ ವಿಚಾರದಲ್ಲಿ ಯಾವುದೇ ಟೀಕೆಗೆ ಮುಂದಾಗದೆ, ಮೃಧು ಧೋರಣೆ ಅನುಸರಿಸಿದ್ದು, ಇದರ ಹಿಂದೆ ರಾಜಕೀಯ ಕಾರಣಗಳೂ ಇವೆ ಎನ್ನಲಾಗಿದೆ.

ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಮೈತ್ರಿಕೂಟದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರ ಹಿಂದೆ ಡಿ.ಕೆ ಶಿವಕುಮಾರ್​ ಅವರೇ ಸ್ವತಃ ಆಸ್ತೆ ವಹಿಸಿದ್ದರು. ಮಧು ಬಂಗಾರಪ್ಪ ಅವರನ್ನು ಒಪ್ಪಿಸಿದ್ದೇ ಡಿಕೆಶಿ ಎಂದು ವರದಿಗಳಾಗಿದ್ದವು. ಅಲ್ಲದೆ, ಶಿವಮೊಗ್ಗದಿಂದ ಮೈತ್ರಿ ಕೂಟದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರೊಂದಿಗೆ ಸೇರಿ ಡಿಕೆಶಿ ರಣತಂತ್ರ ರೂಪಿಸಿದ್ದಾರೆ ಎಂದೂ ಮಾಧ್ಯಮಗಳು ವರದಿ ಮಾಡಿದ್ದವು. ಹೀಗಿರುವಾಗಲೇ ಯಡಿಯೂರಪ್ಪ ಅವರ ಈ ಮೃಧುತ್ವದ ಧೋರಣೆ ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ಡಿಕೆಶಿ ಅವರನ್ನು ಈ ಮೂಲಕವಾದರೂ ತಣ್ಣಗಾಗಿಸುವ ಪ್ರಯತ್ನ ಬಿಜೆಪಿ ಪಾಳಯದ್ದು ಎಂದು ಬಿಂಬಿಸಲಾಗುತ್ತಿದೆ.