More

  ಸಮಗ್ರ ನೋಟ 2019: ಕ್ರೀಡಾ ಜಗತ್ತಿನಲ್ಲಿ ವಿಶ್ವ ವಿಕ್ರಮ

  ಕ್ರೀಡಾ ಜಗತ್ತಿನಲ್ಲಿ ಭಾರತ 2019ರಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿಲ್ಲದಿದ್ದರೂ, ತೀರಾ ಕಳಪೆ ಸಾಧನೆಯನ್ನೂ ಮಾಡಿಲ್ಲ. ಏಕದಿನ ವಿಶ್ವಕಪ್ ಸೆಮಿಫೈನಲ್​ನಲ್ಲಿ ಆಘಾತಕಾರಿ ನಿರ್ವಹಣೆ ತೋರಿ ಮುಗ್ಗರಿಸಿದ್ದ ಟೀಮ್ ಇಂಡಿಯಾ, ಹೊಸ ಮಾದರಿಯ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದು, ಈ ವರ್ಷ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ನಂ.1 ಸ್ಥಾನದಲ್ಲಿದೆ. ನಾಯಕ ವಿರಾಟ್ ಕೊಹ್ಲಿ ಟೆಸ್ಟ್- ಏಕದಿನದಲ್ಲಿ ವಿಶ್ವ ನಂ. 1 ಬ್ಯಾಟ್ಸ್​ಮನ್ ಎನಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಸ್ಮರಣೀಯ ದಾಖಲೆ ಬಂದಿರುವುದು ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ. ದೇಶದ ಅಗ್ರ ಷಟ್ಲರ್ ಪಿವಿ ಸಿಂಧು ವಿಶ್ವ ಚಾಂಪಿಯನ್ ಎನಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿದರು. ಒಟ್ಟಾರೆಯಾಗಿ 2019ರ ವರ್ಷಕ್ಕೆ ಭಾರತ ವಿಶ್ವ ಮಟ್ಟದಲ್ಲಿ ವಿಕ್ರಮ ಸಾಧಿಸಿದ ವರ್ಷ ಎನ್ನಬಹುದು.

  ಒಲಿಂಪಿಕ್ಸ್​ಗೆ ಭರ್ಜರಿ ಸಿದ್ಧತೆ

  ನೂರ್ ಸುಲ್ತಾನ್​ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ದೀಪಕ್ ಪೂನಿಯಾ ಬೆಳ್ಳಿ ಗೆದ್ದು ಗಮನಸೆಳೆದರೆ, ರವಿ ಕುಮಾರ್ ದಹಿಯಾ, ರಾಹುಲ್ ಅವಾರೆ ಹಾಗೂ ಭಜರಂಗ್ ಪೂನಿಯಾ ಕಂಚಿನ ಪದಕ ಜಯಿಸಿದರು. ವಿಶ್ವ ಬಾಕ್ಸಿಂಗ್ ಚಾಂಪಿಯನ್​ಷಿಪ್​ನಲ್ಲಿ ಅಮಿತ್ ಪಾಂಗಲ್ ಬೆಳ್ಳಿ ಹಾಗೂ ಮನೀಷ್ ಕೌಶಿಕ್ ಕಂಚಿನ ಪದಕ ಜಯಿಸುವ ಮೂಲಕ ಮಿಂಚಿದರು. ಶೂಟಿಂಗ್​ನಲ್ಲಿ ಭಾರತದ ಸಾಕಷ್ಟು ಶೂಟರ್​ಗಳು ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವಲ್ಲಿ ಯಶ ಕಂಡರು. ಈವರೆಗೂ 15 ಶೂಟರ್​ಗಳು ಟೋಕಿಯೋ ಒಲಿಂಪಿಕ್ಸ್​ಗೆ ಕೋಟಾ ಸ್ಥಾನ ಸಂಪಾದಿಸಿದ್ದು, ಇದು ಭಾರತದ ದಾಖಲೆ ಎನಿಸಿದೆ. ಆರ್ಚರಿ (4), ಅಥ್ಲೆಟಿಕ್ಸ್ (6), ಈಕ್ವೆಸ್ಟ್ರಿಯನ್ (1), ಹಾಕಿ (2 ಟೀಮ್, ಶೂಟಿಂಗ್ (15) ಹಾಗೂ ಕುಸ್ತಿ (4) ಸೇರಿದಂತೆ 6 ಕ್ರೀಡೆಯ 24 ವಿಭಾಗಗಳಲ್ಲಿ ಭಾರತ ಈವರೆಗೂ ಒಲಿಂಪಿಕ್ಸ್ ಅರ್ಹತೆ ಗಳಿಸಿದೆ.

  ಸಿಂಧುಗೆ ವಿಶ್ವ ಕಿರೀಟ

  2019ರ ಮೊದಲಾರ್ಧದಲ್ಲಿ ಪಿವಿ ಸಿಂಧು ದೊಡ್ಡ ಮಟ್ಟದಲ್ಲಿ ಗಮನಸೆಳೆದರು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನ ಫೈನಲ್​ನಲ್ಲಿ ಜಪಾನ್​ನ ನಜೋಮಿ ಒಕುಹರಾರನ್ನು ಮಣಿಸುವ ಮೂಲಕ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಆದ ಭಾರತದ ಮೊದಲ ಷಟ್ಲರ್ ಎನಿಸಿಕೊಂಡರು. ಇಂಡೋನೇಷ್ಯಾ ಮಾಸ್ಟರ್ಸ್​ನಲ್ಲಿ ಸೈನಾ ನೆಹ್ವಾಲ್, ಥಾಯ್ಲೆಂಡ್ ಓಪನ್​ನ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ, ಹೈದರಾಬಾದ್ ಹಾಗೂ ವಿಯೆಟ್ನಾಂ ಓಪನ್​ನಲ್ಲಿ ಸೌರಭ್ ವರ್ಮ, ಡಚ್ ಓಪನ್​ನಲ್ಲಿ ಲಕ್ಷ್ಯ ಸೆನ್ ಪ್ರಶಸ್ತಿ ಗೆದ್ದಿದ್ದು ವರ್ಷದ ಹೈಲೈಟ್ ಎನಿಸಿತು.

  ಮುಗಿಯದ ವಿವಾದ ಪರ್ವ

  ಈ ವರ್ಷವೂ ವಿವಾದಗಳಿಂದ ಕ್ರೀಡೆ ಹೊರತಾಗಿರಲಿಲ್ಲ. ವರ್ಷದ ಆರಂಭದಲ್ಲಿ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ‘ಕಾಫಿ ವಿತ್ ಕರಣ್ ಶೋ’ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾಗಿತ್ತು. ಕಿವೀಸ್ ಪ್ರವಾಸದಿಂದ ಅರ್ಧದಲ್ಲಿಯೇ ಇವರು ತವರಿಗೆ ವಾಪಸಾದರೆ, ವರ್ಷದ ಕೊನೆಯಲ್ಲಿ ಟಿಎನ್​ಪಿಎಲ್, ಕೆಪಿಎಲ್ ಹಾಗೂ ಮುಂಬೈ ಟಿ20 ಲೀಗ್​ನಲ್ಲಿ ಫಿಕ್ಸಿಂಗ್​ನ ಆರೋಪಗಳು ಎದುರಾಗಿದ್ದರಿಂದ ಕ್ರಿಕೆಟ್ ಮತ್ತೆ ತಲೆತಗ್ಗಿಸಿತು. ಡೇವಿಸ್ ಕಪ್ ಪಂದ್ಯದ ಬಗ್ಗೆ ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಆತಿಥ್ಯ ಗೊಂದಲದ ಬಳಿಕ ಪಂದ್ಯವನ್ನು ಐಟಿಎಫ್ ತಟಸ್ಥ ಸ್ಥಳಕ್ಕೆ ವರ್ಗಾವಣೆ ಮಾಡಿ ಆಡಿಸಿತು.

  ವಿವಾದಿತ ವಿಶ್ವಕಪ್ ಫೈನಲ್, ಆಂಗ್ಲರಿಗೆ ವಿಶ್ವ ಕಿರೀಟ

  ಇಂಗ್ಲೆಂಡ್ ಆತಿಥ್ಯದಲ್ಲಿ ಮೇ 30ರಿಂದ ಜೂನ್ 14ರವರೆಗೆ ನಡೆದ ಏಕದಿನ ವಿಶ್ವಕಪ್ ಈ ವರ್ಷದ ಪ್ರಮುಖ ಟೂರ್ನಿ ಆಗಿತ್ತು. ವಿವಾದಾತ್ಮಕ ಫೈನಲ್​ನಲ್ಲಿ ಆತಿಥೇಯ ಇಂಗ್ಲೆಂಡ್ ಚಾಂಪಿಯನ್ ಪಟ್ಟವೇರಿತು. ಜೂನ್ 14ರಂದು ಲಾರ್ಡ್ಸ್​ನಲ್ಲಿ ನಡೆದ ನ್ಯೂಜಿಲೆಂಡ್-ಇಂಗ್ಲೆಂಡ್ ನಡುವಿನ ಫೈನಲ್ ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಟೈ ಆದ ಮೊದಲ ವಿಶ್ವಕಪ್ ಫೈನಲ್ ಇದಾಯಿತು. ಸೂಪರ್ ಓವರ್​ನಲ್ಲೂ ಪಂದ್ಯ ಟೈ ಕಂಡಿದ್ದರಿಂದ ಅಂಪೈರ್​ಗಳ ಪ್ರಮಾದ ಹಾಗೂ ಬೌಂಡರಿ ಕೌಂಟ್ ಎನ್ನುವ ವಿವಾದಿತ ನಿಯಮದಿಂದ ಇಂಗ್ಲೆಂಡ್ ಚಾಂಪಿಯನ್ ಪಟ್ಟವೇರಿತು. ಬೆನ್ ಸ್ಟೋಕ್ಸ್ ಆಟ ಗಮನಸೆಳೆಯಿತು.

  ವಿದಾಯ ಹೇಳಿದ ಯುವರಾಜ್ ಸಿಂಗ್

  2011ರ ವಿಶ್ವಕಪ್ ವಿಜಯದ ಹೀರೋ ಯುವರಾಜ್ ಸಿಂಗ್, ದಕ್ಷಿಣ ಆಫ್ರಿಕಾ ಕ್ರಿಕೆಟ್​ನ ಮಧ್ಯಮ ಕ್ರಮಾಂಕದ ಆಧಾರ ಸ್ತಂಭ ಹಾಶಿಂ ಆಮ್ಲ ಈ ವರ್ಷ ಕ್ರಿಕೆಟ್​ಗೆ ವಿದಾಯ ಪ್ರಕಟಿಸಿದ ಪ್ರಮುಖರು. ವಿಶ್ವ ಕ್ರೀಡಾರಂಗದಲ್ಲಿ ಖ್ಯಾತ ಮಹಿಳಾ ಬಾಕ್ಸರ್ ನಿಕೋಲ್ ಆಡಮ್್ಸ, ಷಟ್ಲರ್ ಲೀ ಚಾಂಗ್ ವೀ ನಿವೃತ್ತಿ ಹೇಳಿದರು.

  ದಕ್ಷಿಣ ಏಷ್ಯಾ ಗೇಮ್ಸ್​ನಲ್ಲಿ ಮಿಂಚಿದ ಭಾರತ

  ನೇಪಾಳದಲ್ಲಿ ನಡೆದ 13ನೇ ಆವೃತ್ತಿಯ ದಕ್ಷಿಣ ಏಷ್ಯಾ ಗೇಮ್ಸ್​ನಲ್ಲಿ ಭಾರತ ಪಾರಮ್ಯ ಮೆರೆಯಿತು. 174 ಚಿನ್ನ, 93 ಬೆಳ್ಳಿ ಹಾಗೂ 45 ಕಂಚಿನೊಂದಿಗೆ ದಾಖಲೆಯ 312 ಪದಕವನ್ನು ಭಾರತ ಗೆದ್ದುಕೊಂಡಿತು.

  ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ ಪ್ರಾಬಲ್ಯ

  ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ವರ್ಷಾರಂಭದಲ್ಲಿ ನ್ಯೂಜಿಲೆಂಡ್ ಪ್ರವಾಸ ಆರಂಭಿಸಿದ್ದ ಭಾರತ, ಏಕದಿನ ಸರಣಿಯನ್ನು 4-1ರಿಂದ ಜಯಿಸಿದರೆ, ಟಿ20 ಸರಣಿಯನ್ನು ಸಮಬಲ ಮಾಡಿಕೊಂಡಿತು. ಆಸ್ಟ್ರೇಲಿಯಾ ವಿರುದ್ಧದ ತವರಿನ ಏಕದಿನ ಹಾಗೂ ಟಿ20 ಸರಣಿಯ ಸೋಲು ಕಂಡು ವಿಶ್ವಕಪ್ ಆಡಲು ತೆರಳಿತ್ತು.

  ವಿಶ್ವಕಪ್​ನ ಉತ್ತಮ ನಿರ್ವಹಣೆ ನಡುವೆಯೂ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್​ನಲ್ಲಿ ಸೋಲು ಕಂಡು ತಂಡ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿತ್ತು. ಇಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನ ಮೊದಲ ಸರಣಿ ಆಡಿದ್ದ ಭಾರತ ಟೆಸ್ಟ್ ಸರಣಿಯನ್ನು 2-0, ಏಕದಿನ ಸರಣಿಯನ್ನು 2-0 ಹಾಗೂ ಟಿ20 ಸರಣಿಯನ್ನು 3-0ಯಿಂದ ಜಯಿಸಿತು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ತವರಿನ ಟೆಸ್ಟ್ ಸರಣಿಯನ್ನು 3-0ಯಿಂದ ಗೆಲ್ಲುವ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಕ್ಲೀನ್​ಸ್ವೀಪ್ ಸಾಧನೆಯನ್ನು ಮಾಡಿದರೆ, ಟಿ20 ಸರಣಿ 1-1 ರಿಂದ ಸಮಬಲ ಕಂಡಿತು.

  ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ಯಿಂದ ಟಿ20 ಸರಣಿಯನ್ನು 2-1ರಿಂದ ಗೆದ್ದಿತು. ವರ್ಷದ ಕೊನೆಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು 2-1 ಹಾಗೂ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಈ ನಡುವೆ ರವಿಶಾಸ್ತ್ರಿ 2021ರವರೆಗೆ ಕೋಚ್ ಆಗಿ ಮರುನೇಮಕಗೊಂಡರು.

  ವಿವಿಧ ಕ್ರೀಡಾ ಲೀಗ್​ಗಳಲ್ಲಿ ಕರ್ನಾಟಕದ ಅಧಿಪತ್ಯ

  ಕ್ರೀಡಾ ಲೀಗ್​ಗಳಲ್ಲಿ ಕರ್ನಾಟಕದ ಫ್ರಾಂಚೈಸಿಗಳು ಅಧಿಪತ್ಯ ಸಾಧಿಸಿದವು. ವರ್ಷದ ಆರಂಭದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆದರೆ, ಅಕ್ಟೋಬರ್​ನಲ್ಲಿ ಮುಕ್ತಾಯವಾದ 7ನೇ ಆವೃತ್ತಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ವಿಫಲವಾಯಿತು. ಐಎಸ್​ಎಲ್ ಫುಟ್​ಬಾಲ್​ನಲ್ಲಿ ಬೆಂಗಳೂರು ಎಫ್​ಸಿ ಹಾಗೂ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ ಬೆಂಗಳೂರು ರ್ಯಾಪ್ಟರ್ಸ್ ಚಾಂಪಿಯನ್ ಆಯಿತು. ಐಪಿಎಲ್​ನಲ್ಲಿ ಆರ್​ಸಿಬಿ ಕೊನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರೆ, ಮುಂಬೈ ಇಂಡಿಯನ್ಸ್ 4ನೇ ಬಾರಿಗೆ ಪ್ರಶಸ್ತಿ ಜಯಿಸಿತು. ಚೊಚ್ಚಲ ಆವೃತ್ತಿಯ ಪ್ರೊ ವಾಲಿಬಾಲ್ ಲೀಗ್​ನಲ್ಲಿ ಚೆನ್ನೈ ಸ್ಪಾರ್ಟನ್ಸ್ ತಂಡ ಪ್ರಶಸ್ತಿ ಗೆದ್ದಿತು. ಐ-ಲೀಗ್ ಫುಟ್​ಬಾಲ್ ಚೆನ್ನೈ ಸಿಟಿ ಎಫ್​ಸಿ ಪ್ರಶಸ್ತಿ ಗೆದ್ದಿತು. ಕೆಪಿಎಲ್​ನಲ್ಲಿ ಹುಬ್ಬಳ್ಳಿ ಟೈಗರ್ಸ್ ಚಾಂಪಿಯನ್ ಆಯಿತು.

  ದೇಶೀಯ ಕ್ರಿಕೆಟ್​ನಲ್ಲೂ ಕರ್ನಾಟಕ ಪಾರಮ್ಯ

  ಲೀಗ್​ಗಳಲ್ಲಿ ಮಾತ್ರವಲ್ಲದೆ, ದೇಶೀಯ ಕ್ರಿಕೆಟ್​ನಲ್ಲೂ ಕರ್ನಾಟಕ ಪಾರಮ್ಯ ಮೆರೆಯಿತು. ವರ್ಷದ ಆರಂಭದಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ಟ್ರೋಫಿ ಗೆದ್ದಿದ್ದ ಕರ್ನಾಟಕ, ವರ್ಷದ ಕೊನೆಯಲ್ಲಿ ತಮಿಳುನಾಡು ತಂಡವನ್ನು ಮಣಿಸಿ ಅದನ್ನು ಉಳಿಸಿಕೊಳ್ಳಲು ಯಶ ಕಂಡಿತು. ಅದರೊಂದಿಗೆ ವಿಜಯ್ ಹಜಾರೆ ಟ್ರೋಫಿಯಲ್ಲೂ ತಮಿಳುನಾಡು ತಂಡವನ್ನು ಮಣಿಸಿ ಟ್ರೋಫಿ ಜಯಿಸಿತು.

  ಬಿಸಿಸಿಐನಲ್ಲಿ ದಾದಾಗಿರಿ

  ಸುಪ್ರೀಂ ಕೋರ್ಟ್ ನೇಮಿಸಿದ್ದ ಕ್ರಿಕೆಟ್ ಆಡಳಿತಾಧಿಕಾರಿಗಳ (ಸಿಒಎ) ಹಿಡಿತದಿಂದ ಕೊನೆಗೂ ಬಿಸಿಸಿಐ ಮುಕ್ತಿ ದೊರೆಯಿತು. ಕ್ರಿಕೆಟ್ ಪ್ರೇಮಿಗಳಿಗೆ ಇದಕ್ಕಿಂತ ಖುಷಿ ತಂದ ವಿಚಾರವೆಂದರೆ, ಮತ್ತೆ ‘ದಾದಾ’ಗಿರಿ ಶುರುವಾಗಿದ್ದು. ಭಾರತ ಕಂಡ ಯಶಸ್ವಿ ನಾಯಕ ಸೌರವ್ ಗಂಗೂಲಿ ಮಂಡಳಿಯ ಹೊಸ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. 6 ದಶಕಗಳ ಬಳಿಕ ಟೆಸ್ಟ್ ಕ್ರಿಕೆಟಿಗರೊಬ್ಬರು ಬಿಸಿಸಿಐ ಅಧ್ಯಕ್ಷರಾದರು.

  ಹಾಕಿಯಲ್ಲಿ ಒಲಿಂಪಿಕ್ ​ಅರ್ಹತೆ

  ವರ್ಷದ ಆರಂಭದಲ್ಲಿ ಸುಲ್ತಾನ್ ಅಜ್ಲಾನ್ ಷಾ ಹಾಕಿಯಲ್ಲಿ ರನ್ನರ್​ಅಪ್ ಆಗಿದ್ದ ಪುರುಷರ ತಂಡ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಹೀನಾಯ ಸೋಲು ಕಂಡಿತು. ಭುವನೇಶ್ವರದಲ್ಲಿ ನಡೆದ ಎಫ್​ಐಎಚ್ ಸಿರೀಸ್ ಫೈನಲ್ಸ್​ನಲ್ಲಿ ಕೊರಿಯಾ ತಂಡವನ್ನು 5-1ರಿಂದ ಮಣಿಸಿ, ಅಜ್ಲಾನ್ ಷಾ ಸೋಲಿಗೆ ಸೇಡು ತೀರಿಸಿಕೊಂಡಿತು. ಒಲಿಂಪಿಕ್ಸ್ ಪರೀಕ್ಷಾರ್ಥ ಟೂರ್ನಿಯ ಫೈನಲ್​ನಲ್ಲಿ ಆತಿಥೇಯ ಜಪಾನ್ ತಂಡವನ್ನು 2-1ರಿಂದ ಮಣಿಸಿದರೆ, ಒಲಿಂಪಿಕ್ ಹಾಕಿ ಅರ್ಹತಾ ಹಂತದಲ್ಲಿ ರಷ್ಯಾವನ್ನು ಮಣಿಸಿ ಟೋಕಿಯೊ ಟಿಕೆಟ್ ಗಿಟ್ಟಿಸಿಕೊಂಡಿತು. ಮಹಿಳಾ ತಂಡ ಕೂಡ ಒಲಿಂಪಿಕ್ ಪರೀಕ್ಷಾರ್ಥ ಟೂರ್ನಿಯಲ್ಲಿ ಆತಿಥೇಯ ಜಪಾನ್ ತಂಡವನ್ನು 3-1ರಿಂದ ಮಣಿಸಿ ಚಾಂಪಿಯನ್ ಆಯಿತು. ಒಲಿಂಪಿಕ್ಸ್ ಹಾಕಿ ಅರ್ಹತಾ ಹಂತದಲ್ಲಿ ಅಮೆರಿಕವನ್ನು ಮಣಿಸಿ ಒಲಿಂಪಿಕ್ ಅರ್ಹತೆ ಪಡೆಯಿತು.

  ಪಿಂಕ್ ಟೆಸ್ಟ್ ಯಶಸ್ಸು

  ಗಂಗೂಲಿ ಒಲವಿನಂತೆ ಭಾರತ ತಂಡ ಕೊನೆಗೂ ಅಹರ್ನಿಶಿ ಟೆಸ್ಟ್​ಗೆ ಪದಾರ್ಪಣೆ ಮಾಡಿತು. ಕೋಲ್ಕತದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಐತಿಹಾಸಿಕ ಪಿಂಕ್ ಟೆಸ್ಟ್​ಗೆ ಗಣ್ಯರ ದಂಡೇ ಸೇರಿತ್ತು. ಪ್ರೇಕ್ಷಕರ ಭರ್ಜರಿ ಸ್ಪಂದನೆಯಿಂದ ಅದ್ಭುತ ಯಶ ಕಂಡ ಪಂದ್ಯದಲ್ಲಿ ಭಾರತ ಮೂರೇ ದಿನಗಳಲ್ಲಿ ಜಯಿಸಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts