ವರ್ಷದ ಹಿನ್ನೋಟ|ಕದನ ಸಂಧಾನ ಸಮಾಧಾನ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಭೇಟಿ, ಉತ್ತರ-ದಕ್ಷಿಣ ಕೊರಿಯಾ ಐತಿಹಾಸಿಕ ಮಿಲನ ಮುಂತಾದ ಪ್ರಮುಖ ಘಟನೆಗಳು ಈ ವರ್ಷ ಗಮನಸೆಳೆದವು. ಆದರೂ ಕೆಲ ವಿಚಾರಗಳಲ್ಲಿ ಆತಂಕ ಇದ್ದೇ ಇದೆ. ಮತ್ತೊಂದೆಡೆ, ಭಾರತ ಹಲವು ದೇಶಗಳ ಜತೆ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಿಕೊಳ್ಳುವ ಮೂಲಕ ತನ್ನ ಜಾಗತಿಕ ಪ್ರಭಾವವನ್ನು ಸಾರಿಹೇಳಿತು.

ಟ್ರಂಪ್-ಕಿಮ್ ಮಹತ್ವದ ಭೇಟಿ

‘ಪರಮಾಣು ಅಸ್ತ್ರ ಉಡಾಯಿಸುವ ಕೆಂಪು ಬಟನ್ ನನ್ನ ಟೇಬಲ್ ಮೇಲೆ ಸದಾ ಸಿದ್ಧವಿದೆ’ ಎಂಬ ವಾಗ್ದಾಳಿಯಿಂದ ಆರಂಭಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವಿನ ತಿಕ್ಕಾಟ ಈ ವರ್ಷ ಸುಖಾಂತ್ಯ ಕಂಡಿದ್ದು ಅಚ್ಚರಿಯೇ ಸರಿ. ಜೂನ್ 12ರಂದು ಸಿಂಗಾಪುರದಲ್ಲಿ ನಡೆದ ಶೃಂಗದಲ್ಲಿ ಇಬ್ಬರೂ ನಾಯಕರು ಭೇಟಿಯಾಗಿ ಇತಿಹಾಸ ಸೃಷ್ಟಿಸಿದರು. ಕೊರಿಯಾ ವಲಯದಲ್ಲಿ ಪರಮಾಣು ನಿಶ್ಶಸ್ತ್ರೀಕರಣಕ್ಕೆ ನಾಯಕರು ಒಮ್ಮತಕ್ಕೆ ಬಂದರು. 2019ರ ಆರಂಭದಲ್ಲಿ ಇಬ್ಬರೂ ನಾಯಕರು ಮತ್ತೆ ಭೇಟಿಯಾಗಲಿದ್ದಾರೆ.

ಉತ್ತರ-ದಕ್ಷಿಣ ಐತಿಹಾಸಿಕ ಮಿಲನ

65 ವರ್ಷಗಳ ಬಳಿಕ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷರ ಭೇಟಿಗೆ 2018 ಸಾಕ್ಷಿಯಾಯಿತು. ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಸಜ್ಜಿತ ಗಡಿ ಎಂದು ಹೆಸರಾದ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವಿನ ಮಿಲಿಟರಿ ಜೋನ್​ನಲ್ಲಿ ಈ ಐತಿಹಾಸಿಕ ಭೇಟಿ ಜರುಗಿತು. ಏಪ್ರಿಲ್​ನಲ್ಲಿ ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗಡಿ ದಾಟಿ ಒಂದು ಹೆಜ್ಜೆ ದಕ್ಷಿಣ ಕೊರಿಯಾ ಕಡೆಗೆ ಹೋಗಿ ಅಲ್ಲಿನ ಅಧ್ಯಕ್ಷ ಮೂನ್ ಜೇ-ಇನ್​ಗೆ ಹಸ್ತಲಾಘವ ನೀಡಿದರು. ಮೂನ್ ಕೂಡ ಗಡಿ ದಾಟಿ ಅಭಿನಂದಿಸಿದರು. ಯುದ್ಧದ ಸಂದರ್ಭದಲ್ಲಿ ಬೇರ್ಪಟ್ಟ ಎರಡು ದೇಶಗಳ ಯೋಧರ ಕುಟುಂಬಕ್ಕಾಗಿ ಮೂರು ದಿನ ಉ.ಕೊರಿಯಾ ರೆಸಾರ್ಟ್​ನಲ್ಲಿ ಭೇಟಿ ಸಮಾರಂಭ ಆಯೋಜಿಸಲಾಗಿತ್ತು.

ಸಿರಿಯಾ ಮೇಲೆ ಕ್ಷಿಪಣಿ ದಾಳಿ

ರಾಸಾಯನಿಕ ಶಸ್ತ್ರಗಳ ಉತ್ಪಾದನೆ ಮತ್ತು ಬಳಕೆ ವ್ಯವಸ್ಥೆಯನ್ನು ನಾಶಪಡಿಸುವ ಉದ್ದೇಶದಿಂದ ಏಪ್ರಿಲ್ 14ರಂದು ಅಮೆರಿಕ ನೇತೃತ್ವದಲ್ಲಿ ಸಿರಿಯಾ ಮೇಲೆ ಕ್ಷಿಪಣಿ ದಾಳಿ ನಡೆಯಿತು. ಫ್ರಾನ್ಸ್, ಬ್ರಿಟನ್ ಸೇನೆ ಅಮೆರಿಕಕ್ಕೆ ಸಾಥ್ ನೀಡಿದವು. ಯುದ್ಧವಿಮಾನ, ಹಡಗಿನಿಂದ ಉಡಾಯಿಸಲಾದ ಕ್ಷಿಪಣಿಗಳು ಸಿರಿಯಾ ರಾಜಧಾನಿ ಡಮಾಸ್ಕಸ್, ವೆಸ್ಟ್ ಆಫ್ ಹಾಮ್ಸ್​ನಲ್ಲಿನ ಶಸ್ತ್ರ ಸಂಗ್ರಹಾಗಾರಗಳ ಮೇಲೆ ಎರಗಿದವು. ಸಿರಿಯಾ ಯುದ್ಧದಲ್ಲಿ ಗೆಲುವು ಸಾಧಿಸಿದ್ದು, ಅಲ್ಲಿಂದ ಅಮೆರಿಕ ಪಡೆಗಳನ್ನು ವಾಪಸ್ ಪಡೆಯುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವುದು ಪರ-ವಿರೋಧ ಅಭಿಪ್ರಾಯಗಳಿಗೆ ಕಾರಣವಾಗಿದೆ.

92ರ ಹಿರಿಯ ಮಲೇಷ್ಯಾ ಪ್ರಧಾನಿ

ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸುವ ಮೂಲಕ ಮಲೇಷ್ಯಾದ 7ನೇ ಪ್ರಧಾನಿಯಾಗಿ 92 ವರ್ಷದ ಮಹಾಥಿರ್ ಮೊಹಮದ್ ಆಯ್ಕೆಯಾದರು. ಮೇ 10ರಂದು ಅವರು ಪ್ರಮಾಣ ಸ್ವೀಕರಿಸಿದರು. ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರ ಹಿಡಿದ ವಿಶ್ವದ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. 2003ರವರೆಗೆ 22 ವರ್ಷ ಮಹಾಥೀರ್ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು. ಅವರನ್ನು ಆಧುನಿಕ ಮಲೇಷ್ಯಾದ ಪಿತಾಮಹ ಎಂದೇ ಕರೆಯಲಾಗುತ್ತದೆ.

ಚಾಲಕನ ಸೀಟಲ್ಲಿ ಸೌದಿ ಮಹಿಳೆ

ಮುಸ್ಲಿಂ ಸಂಪ್ರದಾಯವಾದಿ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಇದೇ ಮೊದಲ ಬಾರಿಗೆ ಅಲ್ಲಿನ ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ಸಿಕ್ಕಿತು. 2018ರ ಜೂ.24ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಮಹಿಳೆಯರು ಕಾರು ಚಲಾಯಿಸಬಹುದು ಎಂದು ಸೌದಿ ಸರ್ಕಾರ ಐತಿಹಾಸಿಕ ಆದೇಶ ಹೊರಡಿಸಿತು. 30 ವರ್ಷಗಳಿಂದ ಈ ಬೇಡಿಕೆಗಾಗಿ ಪ್ರತಿಭಟನೆ ನಡೆಯುತ್ತಿತ್ತು. ಸದ್ಯಕ್ಕೆ ಸೌದಿಯಲ್ಲಿ ಸುಮಾರು 2,000 ಮಹಿಳೆಯರ ಬಳಿ ಕಾರು ಚಾಲನಾ ಪರವಾನಗಿ ಇದೆ.

ಫ್ರಾನ್ಸ್​ನಲ್ಲಿ ಯೆಲ್ಲೊ ವೆಸ್ಟ್ ಪ್ರತಿಭಟನೆ

ವರ್ಷಾರಂಭದಿಂದ ಡೀಸೆಲ್ ಬೆಲೆಯಲ್ಲಿ ಶೇ. 20 ಏರಿಕೆ ಜತೆಗೆ ಹೆಚ್ಚುವರಿ ತೆರಿಗೆ ಹೇರಿಕೆ ಖಂಡಿಸಿ ಫ್ರಾನ್ಸ್​ನಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಬೀದಿಗಿಳಿದರು. ಹಳದಿ ಕೋಟ್ ಧರಿಸಿ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ವಿರುದ್ಧ ಜನರು ನಡೆಸಿದ ಪ್ರತಿಭಟನೆ ಜಾಗತಿಕ ಗಮನಸೆಳೆಯಿತು. ಹವಾಮಾನ ಬದಲಾವಣೆ, ನಿಸರ್ಗ ರಕ್ಷಣೆ ದೃಷ್ಟಿಯಿಂದ ತೆರಿಗೆ ಹೇರಿಕೆ ಅನಿವಾರ್ಯ ಎಂದು ಮ್ಯಾಕ್ರನ್ ಸಮರ್ಥಿಸಿಕೊಂಡರಾದರೂ, ಇದು ಮಧ್ಯಮ ಹಾಗೂ ಕೆಳವರ್ಗದ ಮೇಲೆ ಸರ್ಕಾರ ಎಳೆಯುತ್ತಿರುವ ಬರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಒಂದು ತಿಂಗಳ ಬಳಿಕ ಮ್ಯಾಕ್ರನ್ ತೆರಿಗೆ ಹೆಚ್ಚಳ ಆದೇಶ ಹಿಂಪಡೆದರು. ಆದರೆ ವೇತನ, ಪಿಂಚಣಿಗಾಗಿ ಪ್ರತಿಭಟನೆ ಮುಂದುವರಿದಿದೆ.

ಪಾಕಿಸ್ತಾನದಲ್ಲಿ ಇಮ್ರಾನ್ ಸರ್ಕಾರ

ಜು.25ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು. ಆಡಳಿತಾರೂಢ ಪಿಎಂಎಲ್-ಎನ್ ಸರ್ಕಾರದಲ್ಲಿ ಸರಣಿ ಹಗರಣಗಳು, ಭ್ರಷ್ಟಾಚಾರ ಆರೋಪದಲ್ಲಿ ಜೈಲುಪಾಲಾಗಿದ್ದ ಪ್ರಧಾನಿ ನವಾಜ್ ಷರೀಫ್, ಮಿಲಿಟರಿ ಪ್ರಭಾವಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನದ ಜನತೆ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪಕ್ಷ ತೆಹ್ರೀಕ್-ಇ-ಇನ್ಸಾಫ್​ಗೆ (ಪಿಟಿಐ) ಹೆಚ್ಚು ಮತ ಕೊಟ್ಟಿತು. ಚುನಾವಣೆಯಲ್ಲಿ ಅತಿಹೆಚ್ಚು ಕ್ಷೇತ್ರಗಳಲ್ಲಿ ಜಯಿಸಿದ ಏಕೈಕ ದೊಡ್ಡ ಪಕ್ಷವಾಗಿ ಪಿಟಿಐ ಹೊರಹೊಮ್ಮಿತು. ಸಣ್ಣ ಪಕ್ಷಗಳು, ಪಕ್ಷೇತರರ ಬೆಂಬಲ ಪಡೆದು ಇಮ್ರಾನ್ ಖಾನ್ ಆಗಸ್ಟ್ 20ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಿ ಹುದ್ದೆಗೇರಿದ ಕೂಡಲೇ ಆರ್ಥಿಕ ಬಿಕ್ಕಟ್ಟಿನ ಕಾವು ಖಾನ್​ಗೆ ತಟ್ಟಿತು. ಪರಿಣಾಮ ಪ್ರಧಾನಿ ನಿವಾಸದಲ್ಲಿದ್ದ ಕಾರುಗಳು, ಎಮ್ಮೆಗಳನ್ನು ಸಹ ಮಾರಾಟ ಮಾಡಿದರು. ಭಾರತದೊಂದಿಗೆ ಸೌಹಾರ್ದತೆ ಮಾತುಗಳನ್ನು ಖಾನ್ ಆಡಿದರಾದರೂ ಅದು ಬಾಯಿ ಮಾತಿಗೆ ಮಾತ್ರ ಸೀಮಿತವಾದಂತಿದೆ.

ದ್ವೀಪರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ

ರಾನಿಲ್ ವಿಕ್ರಮಸಿಂಘಯನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸುವ ಮೂಲಕ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟಿಗೆ ನಾಂದಿ ಹಾಡಿದರು. ಅ.26ರಂದು ವಿಕ್ರಮಸಿಂಘಯನ್ನು ಹುದ್ದೆಯಿಂದ ಪಲ್ಲಟಗೊಳಿಸಿ ತಮ್ಮ ಆಪ್ತ ಮಹಿಂದಾ ರಾಜಪಕ್ಸೆಯನ್ನು ಸಿರಿಸೇನಾ ನೇಮಿಸಿದರು. ರಾನಿಲ್ ಬೆಂಬಲಿಗರು ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಸಂಸತ್ತಿನಲ್ಲಿ ವಿಕ್ರಮಸಿಂಘ ಬಹುಮತ ಸಾಬೀತುಪಡಿಸಿ ಮತ್ತೆ ಪ್ರಧಾನಿ ಹುದ್ದೆಗೇರುವ ಸುಳಿವು ಸಿಕ್ಕಿದ್ದರಿಂದ ಅಧ್ಯಕ್ಷ ಸಿರಿಸೇನಾ ನ.9ಕ್ಕೆ ಸಂಸತ್ ವಿಸರ್ಜನೆಗೆ ಮುಂದಾದರು. ಸಿರಿಸೇನಾ ಕ್ರಮ ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ತೀರ್ಪಿತ್ತಿತು. ಜತೆಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ರಾಜಪಕ್ಸೆಗೆ ಕಾರ್ಯನಿರ್ವಹಿಸದಂತೆ ಸೂಚಿಸಿತು. ಇದರಿಂದ ರಾಜಪಕ್ಸೆ ರಾಜೀನಾಮೆ ಸಲ್ಲಿಸಿದರು. ಡಿ.16ರಂದು ರಾನಿಲ್ ಮತ್ತೆ ಪ್ರಧಾನಿಯಾದರು. ಭಾರತಪರ ನಿಲುವಿನ ರಾನಿಲ್ ಪುನರಾಗಮನ ಸಮಾಧಾನಕರ ಸಂಗತಿ.

ಡಿಎಲ್ ಪಡೆದ ಮೊದಲ ಕನ್ನಡತಿ!

ಸೌದಿ ಅರೇಬಿಯಾದಲ್ಲಿ ವಾಹನ ಚಾಲನಾ ಪರವಾನಗಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕುಂದಾಪುರದ ಅಲ್ಬಾಡಿ ಮೂಲದ ಡಾ.ವಾಣಿಶ್ರೀ ಸಂತೋಷ್ ಶೆಟ್ಟಿ ಪಾತ್ರರಾದರು. ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಡಾ.ವಾಣಿಶ್ರೀ, ಪತಿ ಹಾಗೂ ಇಬ್ಬರು ಪುತ್ರರೊಂದಿಗೆ ರಿಯಾದ್​ನಲ್ಲಿ 15 ವರ್ಷಗಳಿಂದ ನೆಲೆಸಿದ್ದಾರೆ. ದಂತ ವೈದ್ಯೆಯಾಗಿರುವ ಅವರು, ನ. 21ರಂದು ವಾಹನ ಚಾಲನಾ ಪರವಾನಗಿ ಪಡೆದರು. 2002ರಲ್ಲಿ ಭಾರತೀಯ ವಾಹನ ಚಾಲನಾ ಪರವಾನಗಿ ಪಡೆದಿದ್ದರು.

ಅಮೆರಿಕದಲ್ಲಿ ಶಟ್​ಡೌನ್ ಆತಂಕ

ವಲಸಿಗ ವಿದ್ಯಾರ್ಥಿಗಳ ಪರವಾದ ಮಸೂದೆ ಮಂಡನೆಗೆ ಮುಂದಾಗದ ಸರ್ಕಾರದ ವಿರುದ್ಧ ಅಸಮಾಧಾನಗೊಂಡ ಡೆಮಾಕ್ರಟಿಕ್ ಸಂಸದರು ವರ್ಷಾರಂಭದಲ್ಲೇ ಸಂಸತ್ತಿನಲ್ಲಿ ಅಧ್ಯಕ್ಷ ಟ್ರಂಪ್​ಗೆ ಚುರುಕು ಮುಟ್ಟಿಸಿದರು. ಆಡಳಿತ ಯಂತ್ರ ಸರಾಗವಾಗಿ ಸಾಗಲು ಅಗತ್ಯವಾದ ಹಣಕಾಸು ವೆಚ್ಚಗಳ ವಿಧೇಯಕಕ್ಕೆ ಅನುಮೋದನೆ ನೀಡಲು ಡೆಮಾಕ್ರಟಿಕ್ ಸಂಸದರು ಸಿದ್ಧರಾಗಲಿಲ್ಲ. ಇದರಿಂದ ಜ.20ರ ಮಧ್ಯರಾತ್ರಿಯಿಂದ ಟ್ರಂಪ್ ಸರ್ಕಾರದ ಅವಧಿಯ ಮೊದಲ ಶಟ್​ಡೌನ್ ಆರಂಭವಾಯಿತು. ಆದರೆ ಬಿಕ್ಕಟ್ಟು ಜ.22ಕ್ಕೆ ಅಂತ್ಯಗೊಂಡಿತು. ಸಂಧಾನ ಹಿನ್ನೆಲೆ ವಲಸಿಗರ ನೀತಿ ಮಂಡಿಸಲು ಟ್ರಂಪ್ ಸರ್ಕಾರ ಸಮ್ಮತಿಸಿತು. ಇದಕ್ಕೆ ಪ್ರತಿಯಾಗಿ ಸರ್ಕಾರದ ವೆಚ್ಚ ವಿಧೇಯಕಕ್ಕೆ ಡೆಮಾಕ್ರಟಿಕ್ ಸಂಸದರು ಬೆಂಬಲ ನೀಡಿದರು. ಫೆ.9ಕ್ಕೆ ಎರಡನೇ ಶಟ್​ಡೌನ್​ಗೆ ಅಮೆರಿಕ ಸಾಕ್ಷಿಯಾದರೂ ಕೇವಲ 9 ಗಂಟೆಯಲ್ಲಿ ಸರ್ಕಾರದ ಆಡಳಿತ ಯಂತ್ರಕ್ಕೆ ಅಗತ್ಯವಾದ ವೆಚ್ಚದ ಹಣವನ್ನು ಸಂಸತ್ತಿನಲ್ಲಿ ಅನುಮೋದನೆ ಮೂಲಕ ಪಡೆಯಲಾಯಿತು. ಮೆಕ್ಸಿಕೋ ತಡೆಗೋಡೆ ನಿರ್ವಣಕ್ಕೆ ಹಣದ ನೆರವು ನೀಡಲು ಸಂಸತ್ ನಿರಾಕರಿಸಿದ ಹಿನ್ನೆಲೆಯಲ್ಲಿ ಡಿ.22ರಿಂದ 3ನೇ ಶಟ್​ಡೌನ್ ಟ್ರಂಪ್ ಸರ್ಕಾರಕ್ಕೆ ಕಾಡುತ್ತಿದೆ. ಮತ್ತೆ ಸರ್ಕಾರದ ವೆಚ್ಚಕ್ಕೆ ಅಗತ್ಯ ಆರ್ಥಿಕ ಕೊರತೆ ಎದುರಾಗಿದೆ.

ಮಂದಿರಕ್ಕಾಗಿ ಜನಾಗ್ರಹ

ಅಯೋಧ್ಯೆಯ ರಾಮ ಜನ್ಮಭೂಮಿ ವಿವಾದ ಪ್ರಕರಣ ಅಕ್ಟೋಬರ್​ನಲ್ಲಿ ಸುಪ್ರೀಂ ಕೋರ್ಟ್ ಮುಂದೆ ಬಂದಾಗ, ವಿಚಾರಣೆಯನ್ನು ಜನವರಿಗೆ ಮುಂದೂಡಲಾಯಿತು. ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಕ್ಟೋಬರ್​ನಿಂದ ಅಯೋಧ್ಯೆ ಪ್ರಕರಣದ ದೈನಂದಿನ ವಿಚಾರಣೆ ನಡೆಯಲಿ ಎಂದು ಹೇಳಿದ್ದರೂ, ಹೊಸ ಸಿಜೆಐ ಗೊಗೊಯ್ ಪೀಠ ಅದನ್ನು ಮುಂದೂಡಿತು. ಪರಿಣಾಮ, ಈ ಪ್ರಕರಣ ಕೋರ್ಟಿನಲ್ಲಿ ಶೀಘ್ರ ಇತ್ಯರ್ಥಗೊಳ್ಳುವುದು ಅನುಮಾನ ಎಂಬ ಭಾವನೆ ಮೂಡಿತಲ್ಲದೆ ರಾಮ ಮಂದಿರದ ನಿರ್ಮಾಣ ಇನ್ನಷ್ಟು ವಿಳಂಬವಾಗುವುದನ್ನು ಮನಗಂಡು-ಮಂದಿರದ ನಿರ್ವಣಕ್ಕಾಗಿ ಕೇಂದ್ರ ಸರ್ಕಾರ ಶೀಘ್ರ ಕಾನೂನು ಜಾರಿಗೆ ತರಬೇಕು ಎಂಬ ಆಗ್ರಹ ಬಲವಾಗಿ ಕೇಳತೊಡಗಿತು. ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಜನಾಗ್ರಹ ರ್ಯಾಲಿಗಳನ್ನು ನಡೆಸಲಾಯಿತು. ಸಾಧುಸಂತರು, ಮಠಾಧೀಶರು ಮತ್ತು ಧರ್ವಚಾರ್ಯರು ಉಗ್ರ ಹೋರಾಟದ ಎಚ್ಚರಿಕೆ ನೀಡಿದರಲ್ಲದೆ, ಜನವರಿಯಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಹೋರಾಟದ ರೂಪುರೇಷೆ ಅಂತಿಮಗೊಳಿಸುವುದಾಗಿ ಹೇಳಿದರು.

ಭಾಗ್ವತ್ ಉಪನ್ಯಾಸ

ರಾಷ್ಟ್ರೀಯ ಸ್ವಯಂಸೇವಕ ಸಂಘದ 90 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಸರಸಂಘಚಾಲಕರು ಸಮಾಜದ ಎಲ್ಲ ವರ್ಗ ಮತ್ತು ಗಣ್ಯರನ್ನು ಉದ್ದೇಶಿಸಿ ಮೂರು ದಿನಗಳ ವಿಶೇಷ ಉಪನ್ಯಾಸ ನೀಡಿದರು. ಸಂಘದ ಕುರಿತಾದ ತಪು್ಪ ಕಲ್ಪನೆಗಳನ್ನು ಹೋಗಲಾಡಿಸುವುದು ಮತ್ತು ಕಾರ್ಯಚಟುವಟಿಕೆಗಳ ನಿಖರ ಮಾಹಿತಿ ನೀಡುವುದು ಇದರ ಉದ್ದೇಶವಾಗಿತ್ತು.

ಹೆಸರು ಬದಲಾವಣೆ ಪರ್ವ

ಅಲಹಾಬಾದ್ ಹೆಸರನ್ನು ಉತ್ತರಪ್ರದೇಶ ಸರ್ಕಾರ ಪ್ರಯಾಗ್ (ಇದೇ ಹೆಸರು ಮೂಲದಲ್ಲಿತ್ತು) ಆಗಿ ಬದಲಾಯಿಸಿತು. ಜನವರಿಯಲ್ಲಿ ಮಹಾಕುಂಭ ನಡೆಯಲಿದ್ದು, 150 ರಾಷ್ಟ್ರಗಳ ಪ್ರತಿನಿಧಿಗಳು, ಜಿಜ್ಞಾಸುಗಳು ಪಾಲ್ಗೊಳ್ಳಲಿದ್ದಾರೆ. ಆ ಮುನ್ನವೇ ಪ್ರಯಾಗ್ ಎಂದು ನಾಮಕರಣ ಮಾಡಿ, ಕುಂಭಮೇಳದ ತಯಾರಿಗಳಿಗೆ ಚಾಲನೆ ನೀಡಲಾಯ್ತು. ಫೈಜಾಬಾದನ್ನು ಅಯೋಧ್ಯೆಯಾಗಿ ಬದಲಾಯಿಸುವ ಆಶ್ವಾಸನೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೀಡಿದ್ದಾರೆ. ಈ ಬೆಳವಣಿಗೆಗಳ ಮಧ್ಯೆಯೇ, ಆಕ್ರಮಣಕಾರಿಗಳು ಇಟ್ಟ ಗುಲಾಮಗಿರಿಗಳ ಹೆಸರನ್ನು ಬದಲಾಯಿಸಿ, ಮೂಲ ಹೆಸರನ್ನು ಇಡಬೇಕು ಎಂಬ ಆಗ್ರಹ ಇತರೆಡೆಯೂ ಹಬ್ಬಿತು.

ಆಗಸದೆತ್ತರಕ್ಕೆ ಏಕತಾ ಪ್ರತಿಮೆ

ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಮೂರ್ತಿ ದೇಶಕ್ಕೆ ಹೊಸ ಕೀರ್ತಿಗರಿ ಮೂಡಿಸಿತು. ಪಟೇಲರ ಜನ್ಮದಿನವಾದ ಅ.31ರಂದು ಗುಜರಾತಿನ ನರ್ಮದಾ ನದಿ ತೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು. ಅಲ್ಪಾವಧಿಯಲ್ಲೇ ಪ್ರವಾಸೋದ್ಯಮ ತಾಣವಾಗಿದ್ದು, ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಿದ್ದಾರೆ. ಏಕತಾ ರ‍್ಯಾಲಿ ಹಾಗೂ ಅಭಿಯಾನದ ಮೂಲಕ ಸಾರ್ವಜನಿಕರಿಂದ 50 ಲಕ್ಷ ಕೆ.ಜಿ ಉಕ್ಕು ಸಂಗ್ರಹಿಸಲಾಯಿತು. ಇದನ್ನು ಹೊರತುಪಡಿಸಿ 24 ಸಾವಿರ ಟನ್ ಉಕ್ಕು, 2.25 ಕೋಟಿ ಕೆ.ಜಿ ಸಿಮೆಂಟ್, 3550 ಟನ್ ಕಂಚನ್ನು ನಿರ್ವಣಕ್ಕೆ ಬಳಸಲಾಗಿದೆ. 3 ವರ್ಷ 9 ತಿಂಗಳಲ್ಲಿ ಒಟ್ಟಾರೆ 2,989 ಕೋಟಿ ರೂ. ವಿನಿಯೋಗಿಸಿ ಮೂರ್ತಿಗೆ ಅಂತಿಮ ರೂಪ ನೀಡಲಾಯಿತು; 250 ಇಂಜಿನಿಯರ್​ಗಳು ಹಾಗೂ 3400 ಕಾರ್ವಿುಕರು ಶ್ರಮಿಸಿದರು.

ಪುತಿನ್ ಭಾರತ ಪ್ರವಾಸ ಎಸ್-400 ಖರೀದಿ

ವಾರ್ಷಿಕ ಭಾರತ-ರಷ್ಯಾ ಶೃಂಗದಲ್ಲಿ ಭಾಗವಹಿಸಲು ಅ.4ರಿಂದ ಎರಡು ದಿನಗಳ ಭಾರತ ಪ್ರವಾಸವನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಕೈಗೊಂಡರು. ಇರಾನ್​ನಿಂದ ಕಚ್ಚಾ ತೈಲ ಆಮದು ಮೇಲೆ ಅಮೆರಿಕದ ನಿರ್ಬಂಧ, ಉಭಯ ರಾಷ್ಟ್ರಗಳ ನಡುವಿನ ಜಾಗತಿಕ ಹಾಗೂ ಪ್ರಾದೇಶಿಕ ಮಟ್ಟದ ವಿಚಾರಗಳು, ದ್ವಿಪಕ್ಷೀಯ ಸಂಬಂಧ ವೃದ್ಧಿ ಮುಂತಾದ ವಿಚಾರಗಳ ಕುರಿತು ಪ್ರಧಾನಿ ಮೋದಿ ಮತ್ತು ಪುತಿನ್ ಸಭೆ ನಡೆಸಿ ರ್ಚಚಿಸಿ, ಹಲವು ಒಪ್ಪಂದಗಳನ್ನು ಮಾಡಿಕೊಂಡರು. ರಷ್ಯಾದಿಂದ ಅತ್ಯಾಧುನಿಕ ವಾಯುದಾಳಿ ರಕ್ಷಣಾ ವ್ಯವಸ್ಥೆ ಎಸ್-400 ಟ್ರಯಂಫ್ ಖರೀದಿಗೆ ಭಾರತ ಸಹಿ ಹಾಕಿತು. ಅಮೆರಿಕದಿಂದ ನಿರ್ಬಂಧ ಹೇರಿಕೆ ಆತಂಕದ ನಡುವೆಯೇ ಈ ಮಹತ್ವದ ರಕ್ಷಣಾ ವ್ಯವಸ್ಥೆ ಖರೀದಿಗೆ ಅಂಕಿತ ಬಿದ್ದಿದ್ದು ವಿಶೇಷ ಮತ್ತು ಪ್ರಧಾನಿ ಮೋದಿ ಅವರ ಜಾಗತಿಕ ಪ್ರಭಾವಕ್ಕೆ ಸಾಕ್ಷಿಯಾಯಿತು.

ಬೆಸೆದ ಭಾರತ-ಮಾಲ್ದೀವ್ಸ್ ಬಂಧ

ಚೀನಾ ಪರವಾಗಿದ್ದ ಅಬ್ದುಲ್ಲಾ ಯಾಮೀನ್​ರ ಚುನಾವಣಾ ಸೋಲಿನೊಂದಿಗೆ ಮಾಲ್ದೀವ್ಸ್​ನಲ್ಲಿ ಮತ್ತೆ ಭಾರತಪರ ಆಡಳಿತ ಬಂದಂತಾಯಿತು. ನೂತನ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ನ.17ರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದರು. ಪ್ರಧಾನಿ ಕಾರ್ಯಕ್ರಮಕ್ಕೆ ಹಾಜರಾಗಿ ಹೊಸ ಬಾಂಧವ್ಯಕ್ಕೆ ಭಾಷ್ಯ ಬರೆದರು. ಇದರ ಫಲವಾಗಿ ತಮ್ಮಮೊದಲ ವಿದೇಶ ಪ್ರವಾಸವಾಗಿ ಸೊಲಿಹ್ ಡಿ.16ರಿಂದ ಮೂರು ದಿನ ಭಾರತಕ್ಕೆ ಆಗಮಿಸಿದರು. ದ್ವಿಪಕ್ಷೀಯ ಮಾತುಕತೆಯಲ್ಲಿ ಮಾಲ್ದೀವ್ಸನ್ನು ಚೀನಾ ತನ್ನ ರಕ್ಷಣಾ ನೆಲೆ ವಿಸ್ತರಣೆಗೆ ಬಳಸದಂತೆ ತಡೆಯೊಡ್ಡುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾದರು. ಚೀನಾದ ಸಾಲದಲ್ಲಿ ಮುಳುಗಿರುವ ಮಾಲ್ದೀವ್ಸ್​ಗೆ ಭಾರತ ಸುಮಾರು 9000 ಕೋಟಿ ರೂ. ನೆರವು ಘೋಷಿಸಿತು.

ಗುರಿ ತಲುಪದ ರಫೇಲ್

ರಫೇಲ್ ಯುದ್ಧವಿಮಾನ ಖರೀದಿಯಲ್ಲಿ ಅಕ್ರಮ ನಡೆದಿದೆ, ಉದ್ಯಮಿ ಅನಿಲ್ ಅಂಬಾನಿಯವರಿಗೆ ಲಾಭ ಮಾಡಿಕೊಡಲಾಗಿದೆ ಎಂಬುದಾಗಿ ಕಾಂಗ್ರೆಸ್ ಪಕ್ಷ, ಅದರಲ್ಲೂ ವಿಶೇಷವಾಗಿ ಅದರ ಅಧ್ಯಕ್ಷ ರಾಹುಲ್ ಗಾಂಧಿಯವರು ಭಾರಿದನಿಯಲ್ಲಿ ಆರೋಪಿಸಿದ್ದರು. ಜತೆಗೆ, ಪಂಚರಾಜ್ಯ ವಿಧಾನಸಭಾ ಚುನಾವಣೆಗಳಲ್ಲೂ ಈ ಚರ್ಚಾವಿಷಯವೇ ರಾಜಕೀಯ ಎದುರಾಳಿಗಳ ಬತ್ತಳಿಕೆಯಲ್ಲಿ ಒಂದು ಅಸ್ತ್ರವಾಗಿಬಿಟ್ಟಿತ್ತು. ಆದರೆ ವಿಮಾನ ಖರೀದಿ ಸಂಬಂಧಿತ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರವಿಲ್ಲವಾದ್ದರಿಂದ ಈ ಕುರಿತಂತೆ ತನಿಖೆಯ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದ ಸವೋಚ್ಚ ನ್ಯಾಯಾಲಯ, ‘ಬೆಲೆ ಪರಾಮರ್ಶೆಯೆಂಬುದು ನ್ಯಾಯಾಲಯದ ಕೆಲಸವಲ್ಲ; ಹೀಗಾಗಿ ಮಧ್ಯಪ್ರವೇಶಿಸಲಾಗದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ತನಿಖೆಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳೆಲ್ಲವನ್ನೂ ವಜಾಗೊಳಿಸಿತು.

ಮೋದಿಗೆ ಮನ್ನಣೆ

ವಿಶ್ವಸಂಸ್ಥೆಯ ಪರಿಸರ ವಿಭಾಗ ನೀಡುವ ಚಾಂಪಿಯನ್ಸ್ ಆಫ್ ದ ಅರ್ಥ್ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಭಾಜನರಾದರು. ದೆಹಲಿಯಲ್ಲಿ ಅ.3ರಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಪ್ರಶಸ್ತಿ ಪ್ರದಾನ ಮಾಡಿದರು. ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಪರಿಣಾಮಗಳನ್ನು ತಡೆಗಟ್ಟಲು ದೂರದೃಷ್ಟಿ ನಿಲುವು ತಳೆದಿರುವ ಕಾರಣ ಈ ಪ್ರಶಸ್ತಿ ಲಭಿಸಿತು. ಅಂತಾರಾಷ್ಟ್ರೀಯ ಸೌರ ಮಹಾಒಕ್ಕೂಟ (ಐಎಸ್​ಎ) ರಚನೆಯಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಿದ್ದರು. 2022ರ ವೇಳೆಗೆ ಭಾರತದಲ್ಲಿ ಒಮ್ಮೆ ಬಳಸಬಹುದಾದ ಪ್ಲಾಸ್ಟಿಕ್ ಅನ್ನು ಸಂಪೂರ್ಣ ನಿಷೇಧಿಸುವುದಾಗಿ ಪ್ರಧಾನಿ ಘೋಷಿಸಿದ್ದರು.

ಸಂಘದ ವೇದಿಕೆಯಲ್ಲಿ ಮುಖರ್ಜಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮೊದಲ ಬಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು (ಜೂನ್ 7), ರಾಜಕೀಯ ಅಂಗಳದಲ್ಲಿ ಸಂಚಲನ ಮೂಡಿಸಿತು. ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಕಾಂಗ್ರೆಸ್ ನಾಯಕರು ಪತ್ರ ಬರೆದು ಆಗ್ರಹಿಸಿದರೆ, ಕೆಲವರು ಫೋನ್ ಮಾಡಿ ಮನವಿ ಮಾಡಿದ್ದೂ ಉಂಟು. ಆದರೆ, ವೈಚಾರಿಕ ಭಿನ್ನಾಬಿಪ್ರಾಯಗಳಿದ್ದರೂ ಚಿಂತನೆಗಳನ್ನು ಗೌರವಿಸಬೇಕು ಎಂದು ಹೇಳಿದ ಮುಖರ್ಜಿ ಆರೆಸ್ಸೆಸ್ ಸ್ಥಾಪಕ ಕೇಶವ ಬಲಿರಾಮ್ ಹೆಡ್ಗೇವಾರ್ ಜನ್ಮಸ್ಥಳಕ್ಕೆ ಭೇಟಿ ನೀಡಿದರು. ‘ಭಾರತದ ಸಾಕಷ್ಟು ವಿವಿಧತೆಯೂ ಒಂದೇ ವ್ಯವಸ್ಥೆ, ಒಂದೇ ಧ್ವಜ, ಒಂದೇ ಸಂವಿಧಾನದ ಮೇಲೆ ನಿಂತಿದೆ. ಇದು ನಿಜವಾದ ರಾಷ್ಟ್ರೀಯತೆ’ ಎಂದು ಮುಖರ್ಜಿ ಅಭಿಪ್ರಾಯಪಟ್ಟರು.

ನಿರ್ವಹಣೆ: ನಾಗರಾಜ ಇಳೆಗುಂಡಿ ವಿಜಯವಾಣಿ ಟೀಂ: ರವೀಂದ್ರ ಎಸ್.ದೇಶಮುಖ್, ವಿಜಯ್ ಸಿ.ವಿ ಪುಟ ವಿನ್ಯಾಸ: ಅಶ್ವತ್ಥ ಕೃಷ್ಣ