ಕಿರದಹಳ್ಳಿ ಕಾರ್ಮಿಕರು ಬಂಧಮುಕ್ತ

ವಿಜಯವಾಣಿ ಸುದ್ದಿಜಾಲ ಸುರಪುರ
ತಾಲೂಕಿನ ಕಿರದಹಳ್ಳಿ ತಾಂಡಾದಿಂದ ಮಹಾರಾಷ್ಟ್ರಕ್ಕೆ ಕೂಲಿಗಾಗಿ ಹೋಗಿದ್ದ ಕಾರ್ಮಿಕರನ್ನು ಜಿಲ್ಲೆಯ ಅಧಿಕಾರಿಗಳ ತಂಡ ಬಿಡಿಸಿಕೊಂಡು ಬಂದಿದ್ದು, ಕಾರ್ಮಿಕರಿಗೆ  ಬಂಧ ಮುಕ್ತಿ ನೀಡಿದೆ. ತಾಲೂಕಿನ ಕಿರದಹಳ್ಳಿ ತಾಂಡಾದಿಂದ ಕೂಲಿಗಾಗಿ ಮಹಾರಾಷ್ಟ್ರಕ್ಕೆ ಹೋಗಿದ್ದ ಕಾರ್ಮಿಕರನ್ನು ಅಲ್ಲಿನ ಸಾತಾರ ಜಿಲ್ಲೆಯ ಇಟಾ ಗ್ರಾಮದಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಕೂಡಿ ಹಾಕಿ, ಹಣಕ್ಕಾಗಿ ಪೀಡಿಸಲಾಗುತ್ತಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಡಳಿತ ಮೂರು ಅಧಿಕಾರಿಗಳ ತಂಡ ರಚಿಸಿತ್ತು.

ಮಹಾರಾಷ್ಟ್ರಕ್ಕೆ ಹೋಗಿದ್ದ ತಂಡ ಕೂಡಿ ಹಾಕಲಾಗಿದ್ದ ಹತ್ತು ಕಾರ್ಮಿಕರಲ್ಲಿ ಐದು ಮಹಿಳೆಯರನ್ನು ಕರೆತಂದಿದೆ. ಘಟನೆ ಕುರಿತು ಗ್ರೇಡ್-2 ತಹಸೀಲ್ದಾರ ಸೂಫಿಯಾ ಸುಲ್ತಾನ ಮಾಹಿತಿ ನೀಡಿ, ಕಾರ್ಮಿಕರು ಮಧ್ಯವರ್ತಿಗಳಿಂದ ಮುಂಗಡ ಹಣ ಪಡೆದು ಕೆಲಸಕ್ಕೆ ಬರುವುದಾಗಿ ಹೇಳಿದ್ದರು ಎನ್ನಲಾಗಿದೆ. ಆದರೆ ಕೆಲಸ ಮಾಡಲು ಆಗದೇ ಇದ್ದಾಗ ಕಾರ್ಮಿಕರನ್ನು ಮಧ್ಯವರ್ತಿಗಳು ಕೂಡಿ ಹಾಕಿದ್ದರು. ಈ ಕುರಿತು ಮಾಹಿತಿ ಅರಿತ ಜಿಲ್ಲಾಧಿಕಾರಿ ಮೂರು ಅಧಿಕಾರಿಗಳ ತಂಡ ರಚಿಸಿ, ಕಾರ್ಮಿಕರನ್ನು ಕರೆ ತರಲು ಕಳಿಸಿದ್ದರು. ಮಹಾರಾಷ್ಟ್ರಕ್ಕೆ ಹೋಗಿದ್ದ ಅಧಿಕಾರಿಗಳು ಐದು ಮಹಿಳಾ ಕಾರ್ಮಿಕರನ್ನು ಕರೆತಂದಿದ್ದು, ಉಳಿದವರನ್ನು ಶೀಘ್ರದಲ್ಲಿ ಕರೆತರಲಾಗುವುದು ಎಂದು ತಿಳಿಸಿದರು.
ಮಹಾರಾಷ್ಟ್ರಕ್ಕೆ ಹೋಗಿದ್ದ ತಂಡದಲ್ಲಿದ್ದ ಅಧಿಕಾರಿ ರಘುವೀರಸಿಂಗ್ ಠಾಕೂರ ಮಾತನಾಡಿ, ಕಾರ್ಮಿಕರು ಮುಂಗಡ ಹಣ ಪಡೆದಿದ್ದಾಗಿ ಅಲ್ಲಿನ ಕೆಲ ವ್ಯಕ್ತಿಗಳು ಹೇಳುತ್ತಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ. ಕಾರ್ಯಾಚರಣೆಯಲ್ಲಿ ಅಧಿಕಾರಿಗಳಾದ ರಘುವೀರಸಿಂಗ್ ಠಾಕೂರ್, ಕೆಂಭಾವಿ ಕಂದಾಯ ನಿರೀಕ್ಷಕ ರಾಜಾಸಾಬ್, ಎಎಸ್ಐ ರಾಜಶೇಖರ ಗಡ್ಡದ್ ಅವರ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳನ್ನು ತಾಲೂಕು ವಾಲ್ಮೀಕಿ ನಾಯಕ ಸಂಘದಿಂದ ಗೌರವಿಸಲಾಯಿತು. ಗಂಗಾಧರ ನಾಯಕ, ರಮೇಶ ದೊರೆ, ವೆಂಕಟೇಶ ಬೇಟೆಗಾರ, ಲಾಲು ಚವ್ಹಾಣ್ ಇತರರಿದ್ದರು.