ಆದಿಲಕ್ಷ್ಮೀಗೆ ಯಶ್ ಸಾಥ್

ಬೆಂಗಳೂರು: ‘ಆದಿಲಕ್ಷ್ಮೀ ಪುರಾಣ’ ಚಿತ್ರದ ಮೂಲಕ ಬಹು ದಿನಗಳ ಬಳಿಕ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟಿ ರಾಧಿಕಾ ಪಂಡಿತ್. ಕುಟುಂಬ ಮತ್ತು ಮಗುವಿನ ಸಲುವಾಗಿ ಚಿತ್ರರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದ ಅವರ ಪಾಲಿಗೆ ಇದನ್ನು ಒಂಥರಾ ಕಮ್್ಯಾಕ್ ಸಿನಿಮಾ ಎನ್ನಬಹುದು. ಹಾಗಾಗಿ ರಾಧಿಕಾಗೆ ಸ್ವಾಗತ ಕೋರಲು ಅಭಿಮಾನಿ ಬಳಗ ಸಜ್ಜಾಗಿದೆ. ಜು.19ರಂದು ‘ಆದಿಲಕ್ಷ್ಮೀ ಪುರಾಣ’ ತೆರೆಕಾಣುತ್ತಿದೆ. ಅದಕ್ಕೂ ಮುನ್ನ ಟ್ರೇಲರ್ ಮೂಲಕ ಜನಮನ ಸೆಳೆಯಲಿದ್ದಾರೆ ನಿರ್ದೇಶಕಿ ಪ್ರಿಯಾ. ಓರ್ವ ವಿಶೇಷ ವ್ಯಕ್ತಿ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಎಂದು ರಾಧಿಕಾ ಇತ್ತೀಚೆಗಷ್ಟೇ ಹೇಳಿದ್ದರು. ಆ ವ್ಯಕ್ತಿ ಬೇರಾರೂ ಅಲ್ಲ, ‘ರಾಕಿಂಗ್ ಸ್ಟಾರ್’ ಯಶ್ ಎಂಬುದು ಗೊತ್ತಾಗಿದೆ. ಈ ಬಗ್ಗೆ ಬ್ರೇಕಿಂಗ್ ನ್ಯೂಸ್ ನೀಡಿರುವ ರಾಧಿಕಾ, ‘ನನಗೆ ಇದು ಎಕ್ಸ್​ಟ್ರಾ ಸ್ಪೆಷಲ್’ ಎಂದಿದ್ದಾರೆ. ಶುಕ್ರವಾರ (ಜು.12) ಯಶ್ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.

ಅಂದಹಾಗೆ, ಈ ಸಿನಿಮಾದಲ್ಲಿ ರಾಧಿಕಾಗೆ ಜೋಡಿಯಾಗಿ ನಿರೂಪ್ ಭಂಡಾರಿ ಬಣ್ಣ ಹಚ್ಚಿದ್ದಾರೆ. ಹಲವು ದಿನಗಳ ಹಿಂದೆ ಬಿಡುಗಡೆಯಾದ ಟೀಸರ್​ನಲ್ಲಿ ಅವರಿಬ್ಬರ ಕೆಮಿಸ್ಟ್ರಿಯ ಝುಲಕ್ ನೀಡಲಾಗಿತ್ತು. ಆದರೆ ಕಥೆಯ ಎಳೆ ಏನು ಎಂಬುದನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಟ್ರೇಲರ್ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಚಿತ್ರಕ್ಕೆ ರಾಕ್​ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ.

ಚಿತ್ರದ ಹಾಡುಗಳಿಗೆ ‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ಸಂಗೀತ ನೀಡಿರುವುದು ವಿಶೇಷ. ಆರಂಭದಿಂದಲೂ ನಿರೂಪ್ ನಟಿಸಿರುವ ಎಲ್ಲ ಚಿತ್ರಗಳಿಗೂ ಅವರೇ ಸಂಗೀತ ಸಂಯೋಜನೆ ಮಾಡುತ್ತ ಬಂದಿದ್ದಾರೆ. ‘ಆದಿಲಕ್ಷ್ಮೀ ಪುರಾಣ’ದಲ್ಲೂ ಅದು ಮುಂದುವರಿದಿದೆ. ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಗಿದ್ದು, ಹಾಡುಗಳು ಕೇಳುಗರ ಗಮನ ಸೆಳೆದಿವೆ. ತಾರಾ, ಸುಚೇಂದ್ರ ಪ್ರಸಾದ್, ಯಶ್ ಶೆಟ್ಟಿ, ಸೌಮ್ಯಾ ಜಗನ್​ವುೂರ್ತಿ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿಯನ್ನು ಪ್ರೀತಾ ಜಯರಾಮನ್ ನಿಭಾಯಿಸಿದ್ದು, ತಾಂತ್ರಿಕ ವರ್ಗದಲ್ಲಿ ಬಹುತೇಕ ಮಹಿಳೆಯರೇ ಕೆಲಸ ಮಾಡಿರುವುದು ವಿಶೇಷ.

Leave a Reply

Your email address will not be published. Required fields are marked *