ಬಹುನಿರೀಕ್ಷಿತ ಕೆ.ಜಿ.ಎಫ್​. ಚಿತ್ರದ ಮೊದಲ ವಿಮರ್ಶೆ ಬಹಿರಂಗ!

ಬೆಂಗಳೂರು: ಕೆ.ಜಿ.ಎಫ್​. ಸ್ಯಾಂಡಲ್​ವುಡ್​​ನ ಬಹುನಿರೀಕ್ಷಿತ ಹಾಗೂ ಪ್ರಪಂಚದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಚಿತ್ರ. ಬಿಡುಗಡೆಗೆ ಇನ್ನೊಂದು ದಿನ ಬಾಕಿ ಇರುವಾಗಲೇ ಚಿತ್ರದ ವಿಮರ್ಶೆ ಹೊರಬಿದ್ದಿದೆ. ಆಶ್ಚರ್ಯವಾದರೂ ಇದು ಸತ್ಯ.

ನಾಳೆ ಬಿಡುಗಡೆಯಾಗಲಿರುವ ಚಿತ್ರದ ವಿಮರ್ಶೆ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ. ಕೆ.ಜಿ.ಎಫ್​. ಚಿತ್ರ ಈಗಾಗಲೇ ಯುಎಇ(ಯುನೈಟೆಡ್​ ಅರಬ್ ಎಮಿರೇಟ್ಸ್ ​​)ನಲ್ಲಿ ಬಿಡುಗಡೆಯಾಗಿದ್ದು, ಯುಎಇ ಮೂಲದ ಪತ್ರಕರ್ತ ಹಾಗೂ ವಿಮರ್ಶಕ ಉಮರ್​ ಸೈಂಧು ಚಿತ್ರ ವೀಕ್ಷಣೆ ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಚಿತ್ರವು ಖಂಡಿತ ಯಶಸ್ಸು ಕಾಣಲಿದೆ. ಆರಂಭದಿಂದ ಕೊನೆಯವರೆಗೂ ಚಿತ್ರದ ಕತೆ ಪ್ರೇಕ್ಷಕರ ಕೂತೂಹಲವನ್ನು ಹಿಡಿದಿಡುತ್ತದೆ. ತೆರೆಯ ಮೇಲೆ ಯಶ್​ ತಮ್ಮ ನಟನೆಯಿಂದ ಎಲ್ಲರ ಮನವನ್ನು ಕದಿಯುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಚಿತ್ರ ವೀಕ್ಷಣೆ ನಂತರ ಬಂದ ಮೊದಲು ಮಾತು ಇದಾಗಿದ್ದು, ನಾಳೆ ದೇಶದಾದ್ಯಂತ ಐದು ಭಾಷೆಯಲ್ಲಿ ಬಿಡುಗಡೆಯಾಗಲಿರುವ ಚಿತ್ರದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಚಿತ್ರವನ್ನು ಉಗ್ರಂ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶಿಸಿದ್ದಾರೆ. ನಟಿ ಶ್ರೀನಿಧಿ ಮೊದಲ ಬಾರಿಗೆ ಚಂದವನದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಒಟ್ಟು 2000 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಕಾಣುತ್ತಿರುವುದು ಚಿತ್ರದ ಹೆಗ್ಗಳಿಕೆಯಾಗಿದೆ. (ಏಜೆನ್ಸೀಸ್​)