ಸೆಕೆಂಡ್ ಪ್ರಭಾಸ್ ಅಲ್ಲ ನಾನು ಫಸ್ಟ್ ​ಯಶ್!

ಬೆಂಗಳೂರು: ಭಾರಿ ನಿರೀಕ್ಷೆ ಮೂಡಿಸಿರುವ ‘ಕೆಜಿಎಫ್’ ಚಿತ್ರದಿಂದಾಗಿ ನಟ ಯಶ್ ಖ್ಯಾತಿ ದೇಶಾ ದ್ಯಂತ ಹಬ್ಬಿದೆ. ಚಿತ್ರದ ಟ್ರೇಲರ್ 5 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿರುವುದೇ ಈ ಜನಪ್ರಿಯತೆಗೆ ಕಾರಣ. 5 ಭಾಷೆಗಳಲ್ಲಿ ‘ಕೆಜಿಎಫ್’ ತೆರೆಕಾಣುತ್ತಿರುವುದರಿಂದಾಗಿ ಎಲ್ಲ ಚಿತ್ರರಂಗಗಳಲ್ಲೂ ಯಶ್ ಬಗ್ಗೆ ಚರ್ಚೆ ಶುರುವಾಗಿದೆ. ಅದರಲ್ಲೂ ಕೆಲವರು ಅವರನ್ನು ಸೆಕೆಂಡ್ ಪ್ರಭಾಸ್ ಎಂದೆಲ್ಲ ಬಣ್ಣಿಸುತ್ತಿದ್ದಾರೆ. ಆದರೆ ಈ ಮಾತಿಗೆ ತಮ್ಮದೇ ರೀತಿಯಲ್ಲಿ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೆ ಹೋಲಿಕೆಯಲ್ಲಿ ನಂಬಿಕೆ ಇಲ್ಲ. ಸೆಕೆಂಡ್ ಎಂಬ ಮಾತು ಬೇಡ. ನಾನು ಫಸ್ಟ್ ಯಶ್ ಆಗಿರಲು ಇಷ್ಟಪಡುತ್ತೇನೆ.

ನಮ್ಮ ಚಿತ್ರ ಕೂಡ ಸಂಪೂರ್ಣ ಭಿನ್ನ. ಬೇರ್ಯಾವ ಸಿನಿಮಾದೊಂದಿಗೂ ಇದನ್ನು ಹೋಲಿಸುವ ಅಗತ್ಯವಿಲ್ಲ’ ಎನ್ನುವ ಮೂಲಕ ‘ಸೆಕೆಂಡ್ ಪ್ರಭಾಸ್’ ಎಂಬ ವಿಶೇಷಣವನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ಇನ್ನು, ‘ಕೆಜಿಎಫ್’ ಚಿತ್ರೀಕರಣದ ವೇಳೆ ಇಡೀ ತಂಡ ಪಟ್ಟಿರುವ ಕಷ್ಟದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಕೋಲಾರದಲ್ಲಿ ಚಿನ್ನದ ಗಣಿಯಲ್ಲಿ ಸೆಟ್ ಹಾಕಲಾಗಿತ್ತು. ಪ್ರತಿ ಫ್ರೇಮ್ ಕೂಡ 80ರ ದಶಕದ ರೀತಿಯೇ ಕಾಣುವಂತೆ ಕಾಳಜಿ ವಹಿಸಲಾಗಿತ್ತಂತೆ. ಆ ಲೊಕೇಷನ್​ನಲ್ಲಿದ್ದ ವಿಪರೀತ ಧೂಳು ಎಲ್ಲರ ಪಾಲಿಗೆ ತಲೆನೋವಾಗಿತ್ತು. ಅಂಥ ಕಷ್ಟಕರ ಸ್ಥಳದಲ್ಲಿ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಜನರು ಮುಂದೆಬರುತ್ತಿರಲಿಲ್ಲವಂತೆ. ಹೀಗಿರುವಾಗ ಪ್ರಮುಖ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಎರಡು ಸಾವಿರ ನಟರನ್ನು (ಜೂನಿಯರ್ ಕಲಾವಿದರು) ಕರೆತರುವುದು ಸುಲಭ ಆಗಿರಲಿಲ್ಲ. ‘ಮೊದಲಿಗೆ ಎಲ್ಲರೂ ಉತ್ಸಾಹದಿಂದ ಬಂದರು. ಆದರೆ ಅಲ್ಲಿನ ಧೂಳು ನೋಡಿದ ಬಳಿಕ ಹಿಂದೇಟು ಹಾಕಿದರು. ಮೊದಲು ಬೆಂಗಳೂರಿನಿಂದ ಜನರನ್ನು ಕರೆದುಕೊಂಡು ಹೋದೆವು. ಅವರು ಹೆದರಿ ವಾಪಾಸು ಹೋದಾಗ, ಮೈಸೂರಿನ ಜನರನ್ನು ಕರೆಸಿದವು. ಅವರೂ ಭಯಪಟ್ಟಾಗ ಬೇರೆ ರಾಜ್ಯಗಳ ಜನರ ಮೊರೆ ಹೋಗಬೇಕಾಯಿತು’ ಎಂದು ಶೂಟಿಂಗ್ ಕಷ್ಟವನ್ನು ಮೆಲುಕು ಹಾಕಿದ್ದಾರೆ ಯಶ್. ಒಟ್ಟು 145 ದಿನ ‘ಕೆಜಿಎಫ್’ ಚಿತ್ರೀಕರಿಸಲಾಗಿದೆ.

ಎರಡು ವರ್ಷದಲ್ಲಿ ಮಳೆ, ಬಿರುಗಾಳಿ ಮತ್ತು ಬಿಸಿಲಿಗೆ ಸಿಲುಕಿ ಹಲವು ಬಾರಿ ಸೆಟ್ ಕೂಡ ನಾಶ ಆಗಿತ್ತು. ಹಾಗಂತ ವಿಎಫ್​ಎಕ್ಸ್ ಮೊರೆಹೋಗದೆ, ಸೆಟ್ ಮರುನಿರ್ವಣ ಮಾಡಿ ಶೂಟಿಂಗ್ ಮುಂದುವರಿಸಲಾಯಿತು. ಎಲ್ಲವೂ ನೈಜವಾಗಿ ಕಾಣಬೇಕು ಎಂಬುದು ಚಿತ್ರತಂಡದ ಉದ್ದೇಶವಾಗಿತ್ತಂತೆ. ಬಿಡುಗಡೆ ದಿನಾಂಕ (ಡಿ.21) ಹತ್ತಿರವಾಗುತ್ತಿದ್ದಂತೆಯೇ ಇಂಥ ಹಲವು ವಿಚಾರಗಳನ್ನು ಹೊರಹಾಕುತ್ತಿದೆ ‘ಕೆಜಿಎಫ್’ ಬಳಗ. ಯಶ್​ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದರೆ, ವಿಶೇಷ ಹಾಡೊಂದರಲ್ಲಿ ತಮನ್ನಾ ಹೆಜ್ಜೆ ಹಾಕಿದ್ದಾರೆ.