ನನ್ನ ಮೇಲೆ ಅಭಿಮಾನವಿದ್ದರೆ ನಿಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ: ಯಶ್​

ಬೆಂಗಳೂರು: ನಾನು ಹುಟ್ಟುಹಬ್ಬ ಆಚರಿಸಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸುವುದು ನಿಜವಾಗಿಯೂ ಅಭಿಮಾನವಲ್ಲ. ಇಂಥ ಅಭಿಮಾನ ನನಗೆ ಬೇಡವೂ ಬೇಡ. ಇದು ನನಗೆ ಖುಷಿಕೊಡುತ್ತಾ? ಇನ್ಯಾರೇ ಈ ರೀತಿ ಮಾಡಿಕೊಂಡರೂ ನಾನಂತೂ ನೋಡಲು ಬರುವುದಿಲ್ಲ ಎಂದು ರಾಕಿಂಗ್​ ಸ್ಟಾರ್​ ಯಶ್​ ತಿಳಿಸಿದ್ದಾರೆ.

ಯಶ್​ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಎಂದು ರಾಕಿಂಗ್ ಸ್ಟಾರ್​ ಅಭಿಮಾನಿ ರವಿ ಎಂಬಾತ ಮಂಗಳವಾರ ಬೆಳಗ್ಗೆ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಸುಟ್ಟಗಾಯಗಳಿಂದ ಬಳಲುತ್ತಿರುವ ಈತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿ ರವಿಯನ್ನು ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್​, “ನಿಮಗೆ ನಿಜವಾಗಿಯೂ ನನ್ನ ಮೇಲೆ ಅಭಿಮಾನವಿದ್ದರೆ ನಿಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದರು.

ಈ ಘಟನೆ ಆದಾಗ ನಾನು ಮನೆಯಲ್ಲಿಯೇ ಇರಲಿಲ್ಲ. ನನ್ನ ಮೊಬೈಲ್​ ಸ್ವಿಚ್​ ಆಫ್​ ಆಗಿತ್ತು. ಅಭಿಮಾನಿಗಳಿಗೆ ತಿಳಿಯಲಿ ಎಂದೆ ನಿನ್ನೆಯೇ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೆ. ಆದರೂ ಈ ಘಟನೆ ನಡೆದಿದೆ ಎಂದರು.

ಡಾಕ್ಟರ್ ಡ್ರೆಸ್ಸಿಂಗ್ ಮಾಡುವಾಗ ಈಗಲಾದರೂ ಯಶ್​ ಬರ್ತಾರಾ‌ ಎಂದು ರವಿ ಕೇಳಿದ್ರಂತೆ. ನಾನು ಭೇಟಿ ಮಾಡಿದಾಗ ಹ್ಯಾಪಿ ಬರ್ತ್​ಡೇ ಎಂದು ವಿಶ್​ ಮಾಡಿದ್ದಾರೆ. ಏನು ಹೇಳಬೇಕು ಇದಕ್ಕೆ. ಇಂಥ ಘಟನೆಗಳು ಅಭಿಮಾನಿಗಳಿಗೆ ಕೆಟ್ಟ ಸಂದೇಶ ನೀಡುತ್ತೆ. ಇದೇ ಕೊನೆ ಇನ್ನು ನನ್ನ ಅಭಿಮಾನಿಗಳಲ್ಲಿ ಯಾರೇ ಹೀಗೆ ಮಾಡಿಕೊಂಡರೂ ನಾನು ನೋಡುವುದಕ್ಕೆ ಬರುವುದಿಲ್ಲ ಎಂದರು.

ರವಿ ಪಾಲಕರಿಗೆ ನಾನು ಕ್ಷಮೆ ಕೇಳಿದ್ದೇನೆ. ಸಿನಿಮಾ ನೋಡಿ ನಮ್ಮಿಂದ ಏನಾದರೂ ಒಳ್ಳೆಯದನ್ನು ಕಲಿತುಕೊಳ್ಳಿ. ಜೀವನದಲ್ಲಿ ಮುಂದೆ ಹೋದರೆ ನಮಗೂ ಖುಷಿ ಎಂದರು. (ದಿಗ್ವಿಜಯ ನ್ಯೂಸ್)