ಸುಮಲತಾ ಬಗ್ಗೆ ಮಾತನಾಡುವವರು ಮೊದಲು ಅವರ ಮನೆಯ ಹೆಣ್ಣುಮಕ್ಕಳನ್ನೂ ನೆನಪಿಸಿಕೊಳ್ಳಲಿ ಎಂದು ಯಶ್ ಆಕ್ರೋಶ

ಮಂಡ್ಯ: ಸುಮಲತಾ ಅವರಿಗೆ ಮಾಯಾಂಗನೆ ಎಂದು ಕರೆದಿದ್ದ ಶಿವರಾಮೇಗೌಡರಿಗೆ ನಟ ಯಶ್​ ತಿರುಗೇಟು ನೀಡಿದ್ದು, ಮತ್ತೊಬ್ಬರ ಮನೆಯ ಹೆಣ್ಣುಮಕ್ಕಳ ಬಗ್ಗೆ ಮಾತನಾಡುವಾಗ ಒಮ್ಮೆ ತಮ್ಮ ಮನೆಯ ಹೆಣ್ಣುಮಕ್ಕಳನ್ನೂ ನೆನಪಿಸಿಕೊಳ್ಳಲಿ ಎಂದಿದ್ದಾರೆ.

ಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲಿಗೆ ಇದೆ ಎಂದ ತಕ್ಷಣ ಹರಿಬಿಡಬಾರದು. ಅಂಬರೀಷಣ್ಣ ಇದ್ದರೆ ಒಂದು ಬೆರಳು ತೋರಿಸಲೂ ತಾಕತ್ತು ಇರುತ್ತಿರಲಿಲ್ಲ. ಅವರು ಇಲ್ಲ ಎಂದಾಕ್ಷಣ ಕೇಳುವವರು ಯಾರೂ ಇಲ್ಲ ಎಂದು ಮಾತನಾಡುವುದಲ್ಲ. ನಾವೆಲ್ಲ ಇದ್ದೀವಿ ಎಂದು ಹೇಳಿದರು.

ಹೆಣ್ಣಿಗೆ ಗೌರವ ನೀಡಿದರೆ ಆ ಸಮಾಜವೂ ಸ್ವಸ್ಥವಾಗಿರುತ್ತದೆ. ಅದು ನಮ್ಮ ಸಂಸ್ಕೃತಿ ಕೂಡ. ಏನದು ಮಾಯಾಂಗನೆ ಎಂದರೆ. ಈ ಮಾತುಗಳನ್ನೆಲ್ಲ ಒಪ್ಪಿಕೊಳ್ಳಲು ಸಾಧ್ಯವಾಗುತ್ತದಾ? ಚುನಾವಣೆ ಬಂದಿದೆ ಎಂದಾಕ್ಷಣ ಹೀಗೆಲ್ಲ ಮಾತನಾಡಬಾರದು. ಎಲ್ಲರೂ ಕಾವೇರಿ ನೀರನ್ನೇ ಕುಡಿದು ಬೆಳೆದಿದ್ದಾರೆ. ದುರಹಂಕಾರ ಒಳ್ಳೆಯದಲ್ಲ. ಜನರೇ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಕರ್ಚಿಫ್ ಹಾಕಿದ್ದರು

ಹಳ್ಳಿ ಕಡೆ ಬಸ್​ ಬಂದ ಕೂಡಲೇ ಮೊದಲು ಕರ್ಚಿಫ್​ ಹಾಕುತ್ತಾರೆ. ಹಾಗೇ ಇಲ್ಲೊಬ್ಬರು ಆರು ತಿಂಗಳಿಗೋಸ್ಕರ ಕರ್ಚಿಫ್​ ಹಾಕಿದ್ದರು. ಆ ಕರ್ಚಿಫ್​ ಹೆಣ್ಣು ಮಕ್ಕಳ ಬಗ್ಗೆ ತಪ್ಪಾಗಿ ಮಾತನಾಡಬಾರದು. ಸೈಲೆಂಟ್​ ಆಗಿರಬೇಕು. ನೀಟ್​ ಆಗಿರಬೇಕು. ಈ ಕರ್ಚಿಫ್​ಗಳನ್ನು ಜನರು ಬಳಸಿ ಬಿಸಾಕಿಬಿಡುತ್ತಾರೆ. ಪಾಪ ನೋವಾಗುತ್ತದೆ ಎಂದು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದಾಗಿರುವ ಶಿವರಾಮೇಗೌಡರಿಗೆ ಟಾಂಗ್​ ನೀಡಿದರು. ಈ ಮೂಲಕ ಅಂದು ಶಿವರಾಮೇಗೌಡರನ್ನು ಕಣಕ್ಕಿಳಿಸಿ ಸೀಟು ಭದ್ರ ಪಡಿಸಿಕೊಂಡು, ಈಗ ನಿಖಿಲ್​ರನ್ನು ಕಣಕ್ಕಿಳಿಸಿದ ಜೆಡಿಎಸ್​ಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಯಾರು ಏನಾದರೂ ರಾಜಕೀಯ ಮಾಡಿಕೊಳ್ಳಿ ನಮ್ಮನೆ ಹೆಣ್ಣುಮಕ್ಕಳ ತಂಟೆಗೆ ಬರಬೇಡಿ. ನಾವು ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.