ತಾರಕಕ್ಕೇರಿದ ಮಾತಿನ ಯುದ್ಧ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಚಟುವಟಿಕೆ ಬಿರುಸು ಪಡೆದುಕೊಳ್ಳುತ್ತಿದ್ದು, ಅದಕ್ಕೆ ಪೂರಕವಾಗಿ ವಾಗ್ಯುದ್ಧ ಆರಂಭವಾಗಿದೆ.

ಕ್ಷೇತ್ರದ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಶನಿವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಎಂ ಎಚ್.ಡಿ. ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿ ನಿಖಿಲ್ ಪರ ಬ್ಯಾಟ್ ಬೀಸಿದರೆ, 2 ದಿನ ವಿಶ್ರಾಂತಿಯಲ್ಲಿದ್ದ ಯಶ್ ಮತ್ತೆ ಸುಮಲತಾ ಪರ ನಾಗಮಂಗಲ, ಮದ್ದೂರು ಕ್ಷೇತ್ರದಲ್ಲಿ ಮತ ಯಾಚಿಸಿದರು.

ಕೈ ಗಾಯದಿಂದಾಗಿ ಶುಕ್ರವಾರ ವಿಶ್ರಾಂತಿಯಲ್ಲಿದ್ದ ನಿಖಿಲ್ ಶನಿವಾರ ನಾಗಮಂಗಲ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಮಳವಳ್ಳಿ ತಾಲೂಕಿನಲ್ಲಿ, ಅವರ ಪರವಾಗಿ ದರ್ಶನ್ ಮಂಡ್ಯ ತಾಲೂಕಿನ ಕೊತ್ತತ್ತಿ ಹೋಬಳಿಯಲ್ಲಿ ಮತಯಾಚಿಸಿದರು. ದರ್ಶನ್ ರಾಗಿಮುದ್ದನಹಳ್ಳಿಯಿಂದ ನೊದಕೊಪ್ಪಲಿಗೆ ತೆರಳಿ ಅಲ್ಲಿ ‘ತಿಥಿ’ ಚಿತ್ರದ ಖ್ಯಾತಿಯ ಗಡ್ಡಪ್ಪ ಮನೆಗೆ ಹೋಗಿ, ಅವರ ಆರೋಗ್ಯ ವಿಚಾರಿಸಿ ಮತ ಯಾಚಿಸಿದರು.

ಮಳವಳ್ಳಿಯ ಕೊನ್ನಾಪುರಕ್ಕೆ ಸುಮಲತಾ ಆಗಮಿಸಿದಾಗ ಜೆಡಿಎಸ್ ಬಾವುಟ ಕೂಡ ಸ್ವಾಗತಿಸಿದ್ದು ಅಚ್ಚರಿ ಮೂಡಿಸಿತು. ಆದರೆ ಜೆಡಿಎಸ್ ಕಾರ್ಯಕರ್ತರೇ ಬೆಂಬಲ ಸೂಚಿಸಿದರಾ ಅಥವಾ ಕಾಂಗ್ರೆಸ್-ಬಿಜೆಪಿಯವರ ತಂತ್ರವೇ? ಎಂಬುದು ಬಹಿರಂಗವಾಗಲಿಲ್ಲ.

ನನ್ನ ಬಲಗೈನಲ್ಲಿ ನೋವಿದೆ, ಮೂಳೆ ಸ್ವಲ್ಪ ಹೊರಗೆ ಬಂದಿದೆ. ನೋವು ನಿವಾರಕ ತೆಗೆದುಕೊಂಡಿದ್ದೇನೆ. ಏ.16ರವರೆಗೆ ಯಮ ಬಂದರೂ ಹೋಗಲ್ಲ. ಅಲ್ಲಿಯವರಿಗೆ ನನ್ನನ್ನು ಬಿಟ್ಟುಬಿಡು, ಆಮೇಲೆ ನಿನ್ನ ಜತೆ ಬರುತ್ತೇನೆಂದು ಹೇಳುತ್ತೇನೆ.

| ದರ್ಶನ್ ನಟ

ಯಶ್ ಕಿಡಿ

ಮದ್ದೂರು: ಅಂಬರೀಷ್ ಅಣ್ಣ ಬದುಕಿದ್ದಾಗ ಅವರ ಕಡೆ ಬೆರಳು ತೋರಿಸಿ ಮಾತನಾಡಲು ಹೆದರುತ್ತಿದ್ದ ಸಂಸದ ಶಿವರಾಮೇಗೌಡರು ಈಗ ಸುಮಲತಾ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ನಟ ಯಶ್ ಚಿಕ್ಕೋನಹಳ್ಳಿಯಲ್ಲಿ ಕಿಡಿಕಾರಿದರು.