ಏಪ್ರಿಲ್​ನಲ್ಲಿ ಕೆಜಿಎಫ್ ಚಾಪ್ಟರ್-2 ಶುರು

ಬೆಂಗಳೂರು: ಈಗಾಗಲೇ ‘ಕೆಜಿಎಫ್’ ಸಿನಿಮಾ ಕನ್ನಡದಲ್ಲಿ ಹೊಸ ಮೈಲಿಗಲ್ಲನ್ನು ತಲುಪಿದೆ. 100 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ಮಾಡಿ, 150 ಕೋಟಿ ರೂ.ನತ್ತ ಮುನ್ನುಗ್ಗುತ್ತಿದೆ. ಹೀಗಿರುವಾಗಲೇ ಚಿತ್ರದ ಎರಡನೇ ಚಾಪ್ಟರ್ ಬಗ್ಗೆಯೂ ಎಲ್ಲೆಡೆ ಕುತೂಹಲ ಸೃಷ್ಟಿಯಾಗಿದೆ. ಹಾಗಾದರೆ, ‘ಕೆಜಿಎಫ್ ಚಾಪ್ಟರ್ 2’ ಶೂಟಿಂಗ್ ಯಾವಾಗ ಶುರು? ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ಚಿತ್ರೀಕರಣ ಆರಂಭಿಸುವುದು ಚಿತ್ರತಂಡದ ಪ್ಲಾ್ಯನ್. ‘ಕೆಜಿಎಫ್’ ಮೊದಲ ಭಾಗಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕ ಹಿನ್ನೆಲೆಯಲ್ಲಿ ಎರಡನೇ ಭಾಗದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸಹಜವಾಗಿ ಮೊದಲ ಅವತರಣಿಕೆಗಿಂತ ದೊಡ್ಡಮಟ್ಟದಲ್ಲೇ ‘ಚಾಪ್ಟರ್ 2’ ನೋಡ ಬಯಸುತ್ತಾರೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಚಿತ್ರವನ್ನು ಕಟ್ಟಿಕೊಡಲು ತಂಡ ಸಜ್ಜಾಗುತ್ತಿದೆ. ಯಥಾಪ್ರಕಾರ ಛಾಯಾಗ್ರಹಣದ ಉಸ್ತುವಾರಿ ಭುವನ್ ಗೌಡ ವಹಿಸಿಕೊಳ್ಳಲಿದ್ದಾರೆ. ಸಂಗೀತದ ಜವಾಬ್ದಾರಿ ರವಿ ಬಸ್ರೂರು ಅವರದ್ದು. ಗಣಿಗಾರಿಕೆ ಸೆಟ್ ನಿರ್ವಿುಸಿ ಹೊಸ ಲೋಕವನ್ನೇ ಸೃಷ್ಟಿಸಿದ್ದ ಕಲಾ ನಿರ್ದೇಶಕ ಶಿವಕುಮಾರ್, ಶೀಘ್ರದಲ್ಲೇ ‘ಕೆಜಿಎಫ್ ಚಾಪ್ಟರ್ 2’ ಬಳಗ ಸೇರಿಕೊಳ್ಳಲಿದ್ದಾರೆ. ಇದೆಲ್ಲದರ ಜತೆಗೆ ಮೊದಲ ಭಾಗದ ಕೆಲ ಕಲಾವಿದರು ಮುಂದುವರಿಯಲಿದ್ದು, ಹೊಸಬರ ಆಗಮನವೂ ಆಗಲಿದೆ. ಚೀನಾದಲ್ಲೂ ‘ಕೆಜಿಎಫ್’ ಸಿನಿಮಾ ಬಿಡುಗಡೆ ಮಾಡುವ ಯೋಜನೆಗಳು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಆ ಬಗ್ಗೆಯೂ ಚಿತ್ರತಂಡದಿಂದ ಮಾಹಿತಿ ಹೊರಬೀಳಲಿದೆ.

ಮೊದಲ ಚಾಪ್ಟರ್​ಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಎರಡನೇ ಭಾಗದ ಮೇಲೆ ನಿರೀಕ್ಷೆಗಳೂ ಜೋರಾಗಿವೆ. ಮೂರು ಪಟ್ಟು ದೊಡ್ಡ ಮಟ್ಟದಲ್ಲಿ ‘ಕೆಜಿಎಫ್ ಚಾಪ್ಟರ್ 2’ ಸಿದ್ಧವಾಗಲಿದೆ. ಎಲ್ಲದಕ್ಕೂ ಸಮಯದ ಅವಶ್ಯಕತೆ ಇದೆ.

| ಯಶ್ ನಟ