More

    ನಾಲ್ಕು ತಿಂಗಳಲ್ಲಿ ಯರಗೋಳ್ ಡ್ಯಾಂ ನೀರು ಪೂರೈಕೆ: ಪೌರಾಡಳಿತ ಸಚಿವ ಬೈರತಿ ಬಸವರಾಜು ಭರವಸೆ ಬಾಗಿನ ಅರ್ಪಣೆ, ಕಾಂಗ್ರೆಸ್‌ನಲ್ಲಿಲ್ಲ ಹೊಂದಾಣಿಕೆ

    ಬೂದಿಕೋಟೆ: ಮುಂದಿನ ನಾಲ್ಕು ತಿಂಗಳಲ್ಲಿ ಬಂಗಾರಪೇಟೆ, ಮಾಲೂರು ಮತ್ತು ಕೋಲಾರ ನಗರಗಳಿಗೆ ಯರಗೋಳ್ ಡ್ಯಾಂನಿಂದ ನೀರು ಪೂರೈಸಲಾಗುತ್ತದೆ ಎಂದು ಪೌರಾಡಳಿತ ಸಚಿವ ಬೈರತಿ ಬಸವರಾಜು ಹೇಳಿದರು.

    ಬೂದಿಕೋಟೆ ಹೋಬಳಿ ಯರಗೋಳ್ ಗ್ರಾಮದ ಬಳಿ ಭಾನುವಾರ ಡ್ಯಾಂಗೆ ಬಾಗಿನ ಸಮರ್ಪಿಸಿ ಮಾತನಾಡಿ, ಯೋಜನೆಯ ಬಾಕಿ 20 ಕೋಟಿ ರೂ. ಹಣವನ್ನು ಮುಂದಿನ ಕ್ಯಾಬಿನೇಟ್ ಮೀಟಿಂಗ್‌ ನಲ್ಲಿ ಮುಖ್ಯಮಂತ್ರಿಗಳು ಬಿಡುಗಡೆ ಮಾಡ್ತಾರೆ. ವಿಧಾನಪರಿಷತ್ ಸದಸ್ಯರಾದ ನಾರಾಯಣಸ್ವಾಮಿ ಸಹ ಹಲವು ಬಾರಿ ಪರಿಷತ್‌ನಲ್ಲಿ ಯೋಜನೆ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು. ಡ್ಯಾಂ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಭೂಮಿ ವಶಪಡಿಸಿಕೊಂಡು ಕಾಮಗಾರಿ ಆರಂಭಿಸಲು ಎರಡು ಮೂರು ವರ್ಷ ವಿಳಂಬವಾಗಿತ್ತು. ಡ್ಯಾಂನಲ್ಲಿ ಈಗ ಸಾಕಷ್ಟು ನೀರು ಸಂಗ್ರಹವಾಗಿದ್ದು, ಬಾಕಿ ಇರುವ ಕೆಲಸಗಳನ್ನು ಮುಗಿಸಿ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
    ರಾಜ್ಯ ಸರ್ಕಾರ ಪುರಸಭೆ, ನಗರಸಭೆ ಮತ್ತು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸಲು ಒತ್ತು ಕೊಟ್ಟು ಇದಕ್ಕಾಗಿ 9300 ಕೋಟಿ ರೂ. ಅನುದಾನ ವ್ಯಯ ಮಾಡುತ್ತಿದೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ, ಯರಗೋಳ್ ಡ್ಯಾಂ ನಿರ್ಮಾಣದಲ್ಲಿ ಬಿಜೆಪಿ ಸರ್ಕಾರ ಮತ್ತು ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ ಮತ್ತು ವರ್ತೂರು ಪ್ರಕಾಶ್ ಅವರ ಶ್ರಮ ಇದೆ. ಯರಗೋಳ್ ಡ್ಯಾಂಗೆ ಒಂದು ಚನಕೆ ಮಣ್ಣು ಎತ್ತಿಲ್ಲ ಎಂದೆಲ್ಲ ಇವರ ಬಗ್ಗೆ ಮಾತಾಡ್ತಾರೆ. ಆದರೆ ಇವರೇ ಜಿಲ್ಲೆಗೆ ನೀರು ಕೊಟ್ಟ ಭಗೀರಥರು ಎಂದರು.

    ಇದೇ ತಿಂಗಳ 12ರಂದು ಡ್ಯಾಂಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಲಾಗುತ್ತದೆ. ಎಲ್ಲೆಲ್ಲಿ ಪೈಪುಗಳನ್ನು ಜೋಡಣೆ ಮಾಡಿಲ್ಲ, ಅಂತಹ ಕಡೆ ಜೋಡಿಸುವ ಕೆಲಸ ಮತ್ತು ಮೋಟಾರ್ ಅಳವಡಿಕೆ ಬಗ್ಗೆ ಪರಿಶೀಲಿಸಲಾಗುತ್ತದೆ. ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಮೂರೂ ತಾಲೂಕಿನ ಪ್ರತಿ ಮನೆಗೂ ನೀರು ಕೊಡುವಂತಹ ಕೆಲಸ ಮಾಡುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಜಲಜೀವನ್ ಮಿಷನ್ ಮೂಲಕ ಟೆಂಡರ್ ಸಹ ಕರೆಯಲಾಗಿದೆ. ಅನ್ನ ಹಾಗೂ ನೀರಿನ ಋಣ ಇಟ್ಟುಕೊಳ್ಳಬಾರದು, ಸರ್ಕಾರ ಡ್ಯಾಂಗೆ ಹೆಚ್ಚುವರಿ ಹಣ ನೀಡಿ ಪೂರ್ಣಗೊಳಿಸಿದೆ. ಮುಂದಿನ ವಿಧಾನಸಭೆ ಚುನಾವಣೆಯೊಳಗೆ ಯೋಜನೆ ಜನರಿಗೆ ತಲುಪುವಂತೆ ಮಾಡಿಯೇ ನಾವು ನಿಮ್ಮ ಮುಂದೆ ಮತ ಕೇಳಲು ಬರುತ್ತೇವೆ. ಬಿಜೆಪಿ ಸರ್ಕಾರ ಜಿಲ್ಲೆಯ ಮೂರು ತಾಲೂಕಿನ ಜನರಿಗೆ ಶುದ್ಧ ನೀರು ಕೊಟ್ಟಿದೆ. ಜನರು ಅದರ ಋಣ ಇಟ್ಟುಕೊಳ್ಳದೆ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಋಣ ತೀರಿಸಬೇಕು ಎಂದರು.

    ಬಲವಂತದ ಆಲಿಂಗನ: ಕಾಂಗ್ರೆಸ್ ನಾಯಕರಲ್ಲಿ ಹೊಂದಾಣಿಕೆ ಇಲ್ಲದಿದ್ದರೂ ಮತ್ತೆ ಅಧಿಕಾರಕ್ಕೆ ಬರುವೆವು ಎಂಬ ಭ್ರಮೆಯಲ್ಲಿದ್ದಾರೆ. 17 ಶಾಸಕರಾದ ನಮ್ಮನ್ನೇ ಪಕ್ಷದಲ್ಲಿ ಉಳಿಸಿಕೊಳ್ಳಲಾಗದವರು ಪಕ್ಷವನ್ನು ಅಧಿಕಾರಕ್ಕೆ ತರುವರೆ. ಸಿದ್ದರಾಮಯ್ಯ ಜಯಂತ್ಯುತ್ಸವದಲ್ಲಿ ರಾಹುಲ್ ಗಾಂಧಿ ಬಲವಂತದಿಂದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಆಲಿಂಗನ ಮಾಡಿಕೊಳ್ಳಿ ಎಂದು ಹೇಳಿದ್ದಕ್ಕೆ ಆಲಿಂಗನ ಮಾಡಿಕೊಂಡರು, ಅದು ನಿಜವಾದ ಆಲಿಂಗನವಲ್ಲ ಎಂದು ಸಚಿವ ಮುನಿರತ್ನ ಟೀಕಿಸಿದರು.

    ಕೂಸು ಹುಟ್ಟುವ ಮುನ್ನವೇ ಕುರ್ಚಿಗೆ ಪೈಪೋಟಿ: ಕಾಂಗ್ರೆಸ್ ನಾಯಕರಿಗೆ ಅಧಿಕಾರ ಬೇಕೇ ವಿನಃ ಅಭಿವೃದ್ಧಿಯಲ್ಲ, ಕೂಸು ಹುಟ್ಟುವ ಮೊದಲೇ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಕುರ್ಚಿಗೆ ಪೈಪೋಟಿ ನಡೆಸಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುವುದು ಖಚಿತ, ಅದರಂತೆ ಜಿಲ್ಲೆಯಲ್ಲಿಯೂ ಕಮಲ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಚಿತ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.

    ಕಾಂಗ್ರೆಸ್ ನಾಯಕರಿಗೆ ಶಕ್ತಿ ಇಲ್ಲ: ಯರಗೋಳ್ ಡ್ಯಾಂ ನಿರ್ಮಾಣ ಯಡಿಯೂರಪ್ಪ ಅವರ ಕಾಲದಲ್ಲಿ ಆರಂಭವಾಗಿದ್ದು, ಬಸವರಾಜು ಬೊಮ್ಮಾಯಿ ಅವರ ಕಾಲದಲ್ಲಿ ಮುಕ್ತಾಯ ಮಾಡುತ್ತಿದ್ದೇವೆ. ಡ್ಯಾಂ ಆರಂಭಕ್ಕೆ ಹಾಗೂ ಯೋಜನೆ ಪೂರ್ಣಗೊಳಿಸಲು ಬಿಜೆಪಿ ಸರ್ಕಾರ ಕಾರಣವಾಗಿದೆ. ಬಿಜೆಪಿಯಲ್ಲಿ ಜನಪರ ಕೆಲಸ ಮಾಡುವ ನಾಯಕರಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿರುವ ನಾಯಕರು ಬೃಹನ್ನಳೆಗಳು. ಅವರಿಗೆ ಸ್ವಂತವಾಗಿ ಮಕ್ಕಳನ್ನು ಹುಟ್ಟಿಸುವ ಶಕ್ತಿ ಇಲ್ಲ, ಬೇರೆಯವರ ಮಕ್ಕಳನ್ನು ನಮ್ಮ ಮಕ್ಕಳೆಂದು ಹೇಳಿಕೊಳ್ಳುವ ಚಪಲ ಹೊಂದಿದ್ದಾರೆ ಎಂದು ಸಚಿವ ಮುನಿರತ್ನ ಹೇಳಿದರು.

    ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಮದುವೆಗೂ ತಿಥಿಗೂ ವ್ಯತ್ಯಾಸ ಗೊತ್ತಿಲ್ಲದ ರಾಜಕಾರಣಿಗಳು ಜಿಲ್ಲೆಯಲ್ಲಿದ್ದಾರೆ. ಯರಗೋಳ್ ಯೋಜನೆಗೆ ಕಾರಣಕರ್ತರು ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ ಮತ್ತು ಬಿ.ಪಿ.ವೆಂಕಟಮುನಿಯಪ್ಪ ಅವರೇ ನಿಜವಾದ ಭಗೀರಥರು. ಆದರೆ ಕೆಲ ಕೈ ನಾಯಕರು ಅವರು ಏನೂ ಮಾಡಿಲ್ಲ ಎಂದು ಭಾಷಣ ಮಾಡುವರು. ಅವರು ಬರೀ ಭಾಷಣ ವೀರರಷ್ಟೇ ಎಂದು ಹೆಸರು ಹೇಳದೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಟೀಕಿಸಿದರು.

    ಸಂಸದ ಎಸ್.ಮುನಿಸ್ವಾಮಿ, ಮಾವು ಅಭಿವೃದ್ದಿ ಮಂಡಳಿ ಅಧ್ಯಕ್ಷ ವಾಸುದೇವ್, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ವರ್ತೂರು ಪ್ರಕಾಶ್, ವೈ.ಸಂಪಂಗಿ, ಮಂಜುನಾಥ್‌ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ, ಬಿ.ವಿ.ಮಹೇಶ್, ತಾಲೂಕು ಅಧ್ಯಕ್ಷ ನಾಗೇಶ್, ಜಿಲ್ಲಾಧಿಕಾರಿ ವೆಂಕಟ್‌ರಾಜ, ಜಿಪಂ ಸಿಇಒ ಉಕೇಶ್ ಕುಮಾರ್, ಎಸ್‌ಪಿ ಧರಣಿದೇವಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts