ಕಾಡಾನೆ ದಾಳಿಗೆ ಬೆಳೆ ನಾಶ

ಚಾಮರಾಜನಗರ : ತಾಲೂಕಿನ ಗಡಿಭಾಗದಲ್ಲಿರುವ ಯರಗನಹಳ್ಳಿ ವ್ಯಾಪ್ತಿಯ ಜಮೀನುಗಳಿಗೆ ಕಾಡಾನೆಗಳು ದಾಳಿಯಿಟ್ಟು ಫಸಲನ್ನು ನಾಶಪಡಿಸುತ್ತಿವೆ.

ಕಳೆದ 20 ದಿನಗಳಿಂದ ಈ ಭಾಗದಲ್ಲಿ 20ಕ್ಕೂ ಹೆಚ್ಚು ಆನೆಗಳ ಹಿಂಡು ಆಗಾಗ ಜಮೀನುಗಳಿಗೆ ದಾಳಿಯಿಟ್ಟು ಫಸಲನ್ನು ಹಾಗೂ ಸೋಲಾರ್ ತಂತಿಬೇಲಿಯನ್ನು ಹಾನಿ ಮಾಡುತ್ತಿವೆ.

ಇತ್ತೀಚೆಗೆ ಗ್ರಾಮದ ಮಲ್ಲು ಎಂಬುವರ 3 ಎಕರೆ ಮತ್ತು ರಂಗರಾಮು ಅವರ 1 ಎಕರೆ ಮುಸುಕಿನ ಜೋಳದ ಫಸಲನ್ನು ತಿಂದು ಹಾಕಿವೆ. ಸೋಲಾರ್ ತಂತಿಬೇಲಿಯನ್ನು ಹಾಳುಗೆಡವಿದ್ದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಸಂಜೆಯಾಗುತ್ತಿದ್ದಂತೆ ಕಾಡಾನೆಗಳ ಹಿಂಡು ಫಸಲುಗಳತ್ತ ಆಗಾಗ ಆಗಮಿಸುವುದರಿಂದ ತೋಟದ ಜಮೀನುಗಳಲ್ಲಿ ವಾಸವಿರುವ ರೈತರು ಹಸುಗಳಿಂದ ಸಂಗ್ರಹಿಸಿದ ಹಾಲನ್ನು ಗ್ರಾಮದ ಹಾಲಿನ ಡೇರಿಗೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಆನೆಗಳು ದಾಳಿ ಮಾಡಿಬಿಟ್ಟಾವು ಎಂಬ ಭಯದಿಂದ ಮನೆಗಳಿಂದ ಹೊರ ಬರುತ್ತಿಲ್ಲ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರವಾಗುತ್ತಿದ್ದು, ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕಾಡಾನೆಗಳ ಹಾವಳಿಯಿಂದ ತೋಟದ ಮನೆಗಳಲ್ಲಿರುವ ಎಸ್ಸೆಸ್ಸೆಲ್ಸಿ ಓದುವ ಮಕ್ಕಳು ಶಾಲೆಗಳಲ್ಲಿ ನಡೆಯುವ ವಿಶೇಷ ತರಗತಿಗಳಿಗೂ ಹೋಗಲು ಆಗುತ್ತಿಲ್ಲ.

ತಾಲೂಕಿನ ಬಿಸಲವಾಡಿ ಗ್ರಾಮದಿಂದ 8 ಕಿ.ಮೀ.ದೂರಲ್ಲಿರುವ ಈ ಯರಗನಹಳ್ಳಿ ಗ್ರಾಮವು ತಮಿಳುನಾಡಿನ ತಾಳವಾಡಿ ತಾಲೂಕಿಗೆ ಸೇರಿದ್ದರೂ, ಕನ್ನಡಿಗರೇ ಹೆಚ್ಚಾಗಿ ವಾಸವಿದ್ದಾರೆ. ಅಲ್ಲದೆ ಗ್ರಾಮವು ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯದ ಅಂಚಿನಲ್ಲಿದೆ. ಕಾಡಾನೆಗಳ ಕಾಟದ ಬಗ್ಗೆ ಹುಲಿ ಸಂರಕ್ಷಿತಾರಣ್ಯದ ಅಧಿಕಾರಿಗಳಿಗೆ ತಿಳಿದಿದ್ದರೂ ಕ್ರಮ ವಹಿಸುತ್ತಿಲ್ಲ ಎಂದು ದೂರಿದ್ದಾರೆ.

ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಇತ್ತ ಗಮನಹರಿಸಿ ಕಾಡಾನೆಗಳ ಹಾವಳಿ ತಡೆಯಬೇಕು ಎಂದು ಗ್ರಾಮಸ್ಥರಾದ ನಾಗೇಂದ್ರ ಹಾಗೂ ಇತರರು ಆಗ್ರಹಿಸಿದ್ದಾರೆ.

ಗುಂಡ್ಲುಪೇಟೆ: ತಾಲೂಕಿನ ಶೆಟ್ಟಹಳ್ಳಿ, ಬಾಚಹಳ್ಳಿ, ಕೆಬ್ಬೇಪುರ ಮುಂತಾದ ಗ್ರಾಮಗಳಲ್ಲಿ ಕಾಡಾನೆ ದಾಳಿ ಹೆಚ್ಚಾಗಿದ್ದು, ಬೆಳೆ ನಾಶವಾಗುತ್ತಿರುವ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಶೆಟ್ಟಹಳ್ಳಿ ಗ್ರಾಮದ ಕೆಂಪಪ್ಪ, ಗಿಡ್ಡಪ್ಪ ಎಂಬ ರೈತರ ಜಮೀನುಗಳಿಗೆ ಕಾಡಾನೆಗಳ ಹಿಂಡು ದಾಳಿ ನಡೆಸಿ ಮುಸುಕಿನಜೋಳ, ಹುರುಳಿ ಮುಂತಾದ ಬೆಳೆಗಳನ್ನು ತಿಂದು ಹಾಕಿವೆ. ಬಂಡೀಪುರ ಹುಲಿಯೋಜನೆಯ ಕುಂದಕೆರೆ ವಲಯದ ಕಾಡಂಚಿನಲ್ಲಿ ಅಳವಡಿಸಿರುವ ಸೋಲಾರ್ ಬೇಲಿ ನಿಷ್ಕ್ರಿಯವಾಗಿದೆ. ಅಲ್ಲಲ್ಲಿ ಕಂದಕಗಳು ಮುಚ್ಚಿಕೊಂಡಿದ್ದು , ಪ್ರತಿ ದಿನವೂ ಆನೆಗಳು ಕಾಡಂಚಿನ ಜಮೀನುಗಳಿಗೆ ದಾಳಿ ಮಾಡುತ್ತಿವೆ. ಅರಣ್ಯ ಇಲಾಖೆಯು ರಾತ್ರಿ ಗಸ್ತು ನಡೆಸದ ಪರಿಣಾಮ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ನಾಶವಾಗುತ್ತಿವೆ.

ಅರಣ್ಯ ಇಲಾಖೆಯು ಕಾಡಂಚಿನ ಜಮೀನುಗಳ ರೈತರಿಗೆ ಪಟಾಕಿ ವಿತರಣೆ ಮಾಡುತ್ತಿಲ್ಲ. ಆನೆಗಳು ಬಂದಿರುವ ಬಗ್ಗೆ ದೂರವಾಣಿಯಲ್ಲಿ ಕರೆ ಮಾಡಿದರೆ ಜೀಪು ಬೇರೆಕಡೆಗೆ ಹೋಗಿದೆ. ಬಂದ ನಂತರ ಬರುತ್ತೇವೆ. ಪ್ರತಿ ದಿನವೂ ನಿಮ್ಮ ಜಮೀನು ಕಾಯಲು ನಮ್ಮಿಂದ ಸಾಧ್ಯವಿಲ್ಲ ಎಂದು ಒರಟಾಗಿ ಉತ್ತರಿಸುವ ಸಿಬ್ಬಂದಿ ರೈತರೊಂದಿಗೆ ದುರ್ವರ್ತನೆ ತೋರುತ್ತಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರೂ ಸಕಾಲದಲ್ಲಿ ಬೆಳೆನಷ್ಟ ಪರಿಹಾರ ನೀಡುತ್ತಿಲ್ಲ. ಸಾವಿರಾರು ರೂ.ಗಳ ಬೆಳೆ ನಷ್ಟಕ್ಕೆ ಕೆಲವೇ ರೂ. ಪರಿಹಾರ ಪಡೆಯಲು ಅರಣ್ಯ ಇಲಾಖೆಯ ಕಚೇರಿಗೆ ಅಲೆದಾಡಬೇಕಾಗಿದೆ.

ಆದ್ದರಿಂದ ಕೂಡಲೇ ವನ್ಯಜೀವಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಶೆಟ್ಟಹಳ್ಳಿ ಗ್ರಾಮದ ಎಸ್.ಜಿ.ಸತೀಶ್ ಹಾಗೂ ಇತರರು ಎಚ್ಚರಿಕೆ ನೀಡಿದ್ದಾರೆ.