ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಿ- ಚುನಾವಣಾ ಅಧಿಕಾರಿ, ಸಿಬ್ಬಂದಿಗೆ ತಹಸೀಲ್ದಾರ್ ವೈ.ಬಿ.ನಾಗಠಾಣ ಸಲಹೆ

ಯಲಬುರ್ಗಾ: ಲೋಕಸಭಾ ಚುನಾವಣಾ ಕರ್ತವ್ಯವನ್ನು ನಿರ್ಭೀತಿಯಿಂದ ಎದುರಿಸಬೇಕು ಎಂದು ತಹಸೀಲ್ದಾರ್ ವೈ.ಬಿ.ನಾಗಠಾಣ ಹೇಳಿದರು.

ಪಟ್ಟಣದ ಸಪ್ರ ದರ್ಜೆ ಕಾಲೇಜಿನಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಮತಗಟ್ಟೆಗಳ ಅಧಿಕಾರಿಗಳು, ಸಿಬ್ಬಂದಿಯ 2ನೇ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಯೋಜಿತ ಸಿಬ್ಬಂದಿ, ಚುನಾವಣಾ ಆಯೋಗ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪಾಲಿಸಬೇಕು ಎಂದರು.

ಚುನಾವಣಾ ಮಾಸ್ಟರ್ ಟ್ರೇನರ್ ಗಂಗಾಧರ ಕುರಟ್ಟಿ ಸಿಬ್ಬಂದಿಗೆ ಮತಯಂತ್ರಗಳ ಕಾರ್ಯ ನಿರ್ವಹಣೆ, ಅಣಕು ಮತದಾನ, ಮತಗಟ್ಟೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನಗಳು, ಮತದಾನದ ಸಾಮಗ್ರಿ, ಅರ್ಜಿ ನಮೂನೆಗಳನ್ನು ಭರ್ತಿಮಾಡುವ ವಿಧಾನ, ವಿವಿಪ್ಯಾಟ್ ಮತ್ತು ಮತದಾನ ಖಾತ್ರಿ ಕುರಿತು ತರಬೇತಿ ನೀಡಿದರು.

ತರಬೇತಿ ಹೊಂದಿದ 10 ಜನ ಮಾಸ್ಟರ್ ಟ್ರೇನರ್, 20 ಸೆಕ್ಟರ್ ಆಫೀಸರ್‌ಗಳನ್ನು 10 ಕೊಠಡಿಗಳಿಗೆ ತರಬೇತಿ ನೀಡಲು ನಿಯೋಜಿಸಲಾಗಿತ್ತು. ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು 304ರಂತೆ 4 ತಂಡ ರಚನೆ ಮಾಡಿ, 1216 ಜನ ಪಿಆರ್‌ಒ, ಎಪಿಆರ್‌ಒಗಳಿಗೆ ಮಾಹಿತಿ ನೀಡಲಾಯಿತು. ವೈದ್ಯಕೀಯ ತಂಡ ರಚಿಸಲಾಗಿತ್ತು. ಇಡಿಸಿ ವಿತರಣಾ ಕೇಂದ್ರ ತೆರೆಯಲಾಗಿತ್ತು.

ಸಹಾಯಕ ಚುನಾವಣಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕಿ ಶಬಾನಾ ಶೇಖ್, ಕುಕನೂರು ತಹಸೀಲ್ದಾರ್ ನೀಲಪ್ರಭಾ, ಉಪ ಚುನಾವಣಾಧಿಕಾರಿ ವಿಜಯ ಕುಮಾರ್ ಗುಂಡೂರ್, ದಾದಾಪೀರ್ ಇತರರು ಇದ್ದರು.