ಯಲಬುರ್ಗಾ: ಭಕ್ತಶ್ರೇಷ್ಠ ಕನಕದಾಸ ಜಯಂತಿ ಅರ್ಥಪೂರ್ಣ ಆಚರಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಕನಕದಾಸ ಜಯಂತಿ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಥಳೀಯ ಬಯಲು ರಂಗಮಂದಿರದಲ್ಲಿ ನ.18ರಂದು ತಾಲೂಕಾಡಳಿತದಿಂದ ಜಯಂತಿ ಹಮ್ಮಿಕೊಳ್ಳಲಾಗಿದೆ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದಕ್ಕೂ ಮುಂಚೆ ಕನಕದಾಸ ವೃತ್ತಕ್ಕೆ ಮಾಲಾರ್ಪಣೆ ಮಾಡಲಾಗುವುದು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನಕದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸಮುದಾಯದವರು ಸಹಕಾರ ನೀಡುವ ಮೂಲಕ ಜಯಂತಿ ಯಶಸ್ಸಿಗೆ ಸಹಕರಿಸಬೇಕು ಎಂದರು.
ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ವೀರನಗೌಡ ಬಳೂಟಗಿ ಮಾತನಾಡಿ, ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಿಂದ ಕನಕದಾಸ ವೃತ್ತದವರೆಗೆ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಸಮಾರಂಭಕ್ಕೆ ತಾಲೂಕಾಡಳಿತ ಜತೆ ಸಮುದಾಯ ಕೂಡ ಕೈಜೋಡಿಸಲಿದೆ ಎಂದರು.
ತಾಪಂ ಇಒ ಸಂತೋಷ್ ಪಾಟೀಲ್, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಸದಸ್ಯರಾದ ರೇವಣಪ್ಪ ಹಿರೇಕುರುಬರ, ಹನುಮಂತ ಭಜಂತ್ರಿ, ಮುಖಂಡರಾದ ಗದ್ದೆಪ್ಪ ಕುಡಗುಂಟಿ, ಬಾಲಚಂದ್ರ ಸಾಲಭಾವಿ, ಯಲ್ಲಪ್ಪ ಹೊಸಮನಿ, ಶಿವು ರಾಜೂರ, ಯಲ್ಲಪ್ಪ ಹುನಗುಂದ, ರಮೇಶ ದಂಡಿನ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.