More

    ಚಿಕ್ಕಜಾತ್ರೆಗೆ ಸಕಲ ಸಿದ್ಧತೆ ಕೈಗೊಳ್ಳಿ

    ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ 5 ವರ್ಷಗಳ ನಂತರ ನಡೆಯಲಿರುವ ಚಿಕ್ಕಜಾತ್ರೆ (ಸಂಕ್ರಾಂತಿ ಜಾತ್ರೆ)ಗೆ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ಎನ್. ಮಹೇಶ್ ಸೂಚಿಸಿದರು.


    ಬಿಳಿಗಿರಿರಂಗನಬೆಟ್ಟದ ಲೊಕೋಪಯೋಗಿ ಇಲಾಖೆಯ ಪ್ರವಾಸಿಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 2017 ರಲ್ಲಿ ಚಿಕ್ಕ ಜಾತ್ರೆ ನಡೆದಿತ್ತು. ನಂತರ ದೇಗುಲದ ಜೀರ್ಣೋದ್ಧಾರ ಹಾಗೂ ಕೋವಿಡ್ ಹಿನ್ನೆಲೆಯಲ್ಲಿ 5 ವರ್ಷದಿಂದ ನಡೆದಿಲ್ಲ. ಈ ಬಾರಿ ಬೆಟ್ಟಕ್ಕೆ ಹೆಚ್ಚಿನ ಜನರು ಬರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಬೇಕು. ಯಳಂದೂರು ಹಾಗೂ ಚಾಮರಾಜನಗರದಿಂದ ಕೆಎಸ್‌ಆರ್‌ಟಿಸಿ ವತಿಯಿಂದ ಸೂಕ್ತ ಬಸ್ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು, ಶೌಚಗೃಹಗಳು, ಸೂಕ್ತ ಬಂದೋಬಸ್ತ್ ಒದಗಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.


    ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, ಜ.14 ರಿಂದ 17ರವರೆಗೆ ಜಾತ್ರಾ ಕೈಂಕರ್ಯಗಳು ನಡೆಯುತ್ತವೆ. ಇಲ್ಲಿಗೆ ಯಳಂದೂರು, ಚಾಮರಾಜನಗರ, ಮೈಸೂರು, ಗುಂಡ್ಲುಪೇಟೆ, ಕೊಳ್ಳೇಗಾಲದಿಂದ 100 ಬಸ್‌ಗಳನ್ನು ಓಡಿಸಲು ಕ್ರಮ ವಹಿಸಲಾಗುವುದು. ಇಲ್ಲಿನ ರಸ್ತೆ ಕಿರಿದಾಗಿದ್ದು ವಾಹನದಟ್ಟಣೆ ತಡೆಗಟ್ಟಲು ಸಾಧ್ಯವಾದಷ್ಟು ದ್ವಿಚಕ್ರವಾಹನ ಸವಾರರು ಬಸ್‌ನಲ್ಲೇ ತೆರಳಬೇಕು. ಜಾತ್ರೆಯಲ್ಲಿ ಸ್ವಚ್ಛತೆ, ಕುಡಿಯುವ ನೀರು, ಆಂಬುಲೆನ್ಸ್ ಸೇವೆಯನ್ನು ಸಿದ್ಧವಾಗಿಡಬೇಕು. ನಿರಂತರವಾಗಿ ವಿದ್ಯುತ್ ಪೂರೈಸಲು ಕ್ರಮವಹಿಸಬೇಕು. ವಿದ್ಯುತ್ ಕಂಬಗಳನ್ನು ಬದಲಿಸುವ ಕಾರ್ಯಗಳನ್ನು ಬೇಗ ಮುಗಿಸಬೇಕು. ಬೆಟ್ಟಕ್ಕೆ ಬರಲು ಮುರಾರ್ಜಿ ದೇಸಾಯಿ ವಸತಿ ಶಾಲೆಯ ರಸ್ತೆಯನ್ನು ದುರಸ್ತಿಗೊಳಿಸಬೇಕು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಶೀಘ್ರದಲ್ಲೇ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು. ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಸೀಲ್ದಾರ್ ಆನಂದಪ್ಪನಾಯಕ್, ಎಸಿಎಫ್ ಮಹದೇವಯ್ಯ, ತಾಪಂ ಇಒ ಉಮೇಶ್ ಪಪಂ ಮುಖ್ಯಾಧಿಕಾರಿ ಮಲ್ಲೇಶ್, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್, ಪಾರುಪತ್ತೇದಾರ ರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts