ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ 2019ರ ಫೆಬ್ರವರಿಯಲ್ಲಿ ನಡೆದಿದ್ದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ವೇಳೆ ಸಂಭವಿಸಿದ್ದ ಅಗ್ನಿ ಅವಘಡಕ್ಕೆ ಸಂಬಂಧಿಸಿದ ತನಿಖಾ ಪ್ರಗತಿ ವರದಿಯನ್ನು 1 ತಿಂಗಳಲ್ಲಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಅಗ್ನಿ ಅವಘಡ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲು ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ.ವಿ. ಅತ್ರಿ ಹಾಗೂ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಸರ್ಕಾರ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಈ ನಿರ್ದೇಶನ ನೀಡಿತು.
ಅಗ್ನಿ ಅನಾಹುತದ ಬಗ್ಗೆ ದೂರು ದಾಖಲಾಗಿದ್ದರೂ ಪೊಲೀಸರು ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದರು. ದೂರಿನ ಸಂಬಂಧ ತನಿಖೆ ನಡೆಸಲಾಗಿದ್ದು, ಈಗಾಗಲೇ ವರದಿ ಸಹ ಸಲ್ಲಿಕೆಯಾಗಿದೆ ಎಂದು ಸರ್ಕಾರಿ ವಕೀಲರು ಪ್ರತಿಕ್ರಿಯಿಸಿದರು. ಅದಕ್ಕೆ ನ್ಯಾಯಪೀಠ, ಹಾಗಿದ್ದರೆ ತನಿಖಾ ಪ್ರಗತಿ ವರದಿಯನ್ನು 1 ತಿಂಗಳಲ್ಲಿ ಕೋರ್ಟ್ಗೆ ಸಲ್ಲಿಸಿ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಮನವಿ ಏನು?
ಯಲಹಂಕ ವಾಯುನೆಲೆಯಲ್ಲಿ 2019ರ ಫೆ.20ರಿಂದ 24ರವರೆಗೆ ಏರೋ ಇಂಡಿಯಾ ಶೋ ನಡೆದಿತ್ತು. ಫೆ.23ರಂದು ರ್ಪಾಂಗ್ ಸ್ಥಳದಲ್ಲಿ ಅಗ್ನಿ ದುರಂತ ಸಂಭವಿಸಿ 300ಕ್ಕೂ ಹೆಚ್ಚು ಕಾರುಗಳು ಸುಟ್ಟಿದ್ದವು. ಸಂಘಟಕರು ನಿಯಮಗಳನ್ನು ಪಾಲಿಸದ ಹಾಗೂ ಸುರಕ್ಷತಾ ಕ್ರಮ ಅಳವಡಿಕೊಳ್ಳದ ಕಾರಣ ಈ ಅನಾಹುತ ಸಂಭವಿಸಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸುವಂತೆ ಏಕಸದಸ್ಯ ನ್ಯಾಯಾಂಗ ಆಯೋಗವನ್ನು ಹೈಕೋರ್ಟ್, ನೇಮಿಸಬೇಕು. ಘಟನೆ ಸಂಬಂಧ ಈವರೆಗೆ ಕೈಗೊಂಡಿರುವ ಕ್ರಮಗಳ ಸಮಗ್ರ ವರದಿ ಸಲ್ಲಿಸುವಂತೆ ಕೇಂದ್ರ ರಕ್ಷಣಾ ಸಚಿವಾಲಯ, ಎಚ್ಎಎಲ್ ಹಾಗೂ ರಾಜ್ಯದ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಆಕ್ಷೇಪಣೆ ಸಲ್ಲಿಸಲು ಎಚ್ಎಎಲ್ಗೆ ಸೂಚನೆ
ಎಚ್ಎಎಲ್ ಪರ ವಕೀಲರು ವಾದ ಮಂಡಿಸಿ, ಅರ್ಜಿಯಲ್ಲಿ ಎಚ್ಎಎಲ್ ಸಂಸ್ಥೆಯನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಘಟನೆಯಲ್ಲಿ ಸಂಸ್ಥೆಯ ಪಾತ್ರವಿಲ್ಲ. ಏರ್ಶೋ ಏರ್ಪಡಿಸಲು ಸಹಕಾರ ನೀಡಿ, ವೈಮಾನಿಕ ಕಂಪನಿಗಳ ನಡುವಿನ ವಹಿವಾಟಿನ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಲಾಗಿದೆಯಷ್ಟೇ ಎಂದು ವಿವರಿಸಿದರು. ಈ ಬಗ್ಗೆ ಆಕ್ಷೇಪಣಾ ಪತ್ರ ಸಲ್ಲಿಸಲು ಎಚ್ಎಎಲ್ ಪರ ವಕೀಲರಿಗೆ ನ್ಯಾಯಪೀಠ ನಿರ್ದೇಶಿಸಿತು.