ಯಲಬುರ್ಗಾ: ತಾಲೂಕಿನಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಶಾಲಾ ಅಡುಗೆ ಕೋಣೆ, ರಾಜೀವ್‌ಗಾಂಧಿ ಸೇವಾ ಕೇಂದ್ರ, ಸಂಜೀವಿನಿ ಸಂಘದ ಕೋಳಿ ಫಾರ್ಮ್ ಹಾಗೂ ತಿಪ್ಪನಾಳದಲ್ಲಿ ಜೆಜೆಎಂ ಕಾಮಗಾರಿ ಸ್ಥಳಕ್ಕೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿರುವ ಹಳೆಯ ಕೈಬೋರ್‌ಗಳನ್ನು ದುರಸ್ತಿ ಹಾಗೂ ಚಾಲ್ತಿಯಲ್ಲಿರುವ ಬೋರ್‌ಗಳನ್ನು ಸ್ವಚ್ಛಗೊಳಿಸಬೇಕು. ಜಾನುವಾರುಗಳಿಗೆ ಅನುಕೂಲವಾಗುಂತೆ ಕಲ್ಪಿಸಬೇಕು. ಜೆಜೆಎಂ ಯೋಜನೆ ನೀರು ಸಮರ್ಪಕವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಿಇಒ ರಾಹುಲ್ ರತ್ನಂ ಪಾಂಡೇಯ ಸೂಚಿಸಿದರು.
ನಿತ್ಯ ಕುಡಿವ ನೀರು ಸರಬರಾಜು ಆಗುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು. ಬಂಡಿಯಲ್ಲಿ ನಿರ್ಮಾಣವಾಗುತ್ತಿರುವ ರಾಜೀವ್‌ಗಾಂಧಿ ಸೇವಾ ಕೇಂದ್ರ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿ, ಕಾಮಗಾರಿ ಗುಣಮಟ್ಟದಿಂದ ನಡೆಸಬೇಕು ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಹಿಳೆಯರು ಸ್ವಾವಲಂಬಿಗಳಾಗಲು ಕೋಳಿ ಸಾಕಾಣಿಕೆ ಮಾಡಿರುವುದು ಸಂತಸದ ವಿಚಾರ. ಇದೇ ರೀತಿ ತಾಲೂಕಿನಲ್ಲಿ ಕೋಳಿ ಫಾರ್ಮ್ ಮಾಡಿ, ಶಾಲೆಗಳಿಗೆ ಮೊಟ್ಟೆ ವಿತರಣೆ ಮಾಡಿದರೆ ಆರ್ಥಿಕವಾಗಿ ಸಬಲರಾಗಲು ಅನುಕೂಲವಾಗುತ್ತದೆ ಎಂದರು. ಬಳಿಕ ಕಡಬಲಕಟ್ಟಿಯಲ್ಲಿ ಜೆಜೆಎಂ ಕಾಮಗಾರಿ ಪರಿಶೀಲಿಸಿದರಲ್ಲದೆ ಕೂಡಲೇ ಗ್ರಾಪಂಗೆ ಹಸ್ತಾಂತರಿಸುವಂತೆ ಆರ್‌ಡಬ್ಲುೃಎಸ್ ಇಲಾಖೆ ಎಇಇ ರಿಜ್ವಾನಾ ಬೇಗಂ, ಇಂಜಿನಿಯರ್ ಮಹೇಶ್‌ಗೆ ತಿಳಿಸಿದರು. ಹಿರೇಅರಳಿಹಳ್ಳಿಯಲ್ಲಿ ನರೇಗಾದಡಿ ನಡೆಯುತ್ತಿರುವ ಶಾಲಾ ಅಡುಗೆ ಕೋಣೆ ನೋಡಿ ಕಾಮಗಾರಿ ಗುಣಮಟ್ಟದಿಂದ ನಡೆದಿದೆ. ಇದೇ ರೀತಿ ಎಲ್ಲ ಶಾಲಾಭಿವೃದ್ಧಿ ಕಾಮಗಾರಿಗಳು ಆಗಬೇಕು ಎಂದರು.
ಜಿಪಂ ಯೋಜನಾ ನಿರ್ದೇಶಕ ಪ್ರಕಾಶ.ವಿ., ತಾಪಂ ಇಒ ಸಂತೋಷ ಪಾಟೀಲ್, ಎಡಿಪಿಸಿ ಮಹಾಂತಸ್ವಾಮಿ, ಪಿಡಿಒಗಳಾದ ಸೋಮಪ್ಪ ಪೂಜಾರ, ಫಯಾಜ್, ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಇತರರಿದ್ದರು.