More

    ಪದವಿ ಶಿಕ್ಷಣಕ್ಕೆ ನೆರವಾದ ನರೇಗಾ ಯೋಜನೆ

    ಯಲಬುರ್ಗಾ: ಪದವಿ ಶಿಕ್ಷಣಕ್ಕೆ ಹಣ ಹೊಂದಿಸಲು ಪರಿತಪಿಸುತ್ತಿದ್ದ ಬಡಕುಟುಂಬದ ವಿದ್ಯಾರ್ಥಿನಿಗೆ ನರೇಗಾ ಕೈಹಿಡಿದಿದೆ. ಶುಲ್ಕ ಕಟ್ಟಲು ಖಾತ್ರಿ ಯೋಜನೆ ಕೈಡಿದಿದ್ದು, ಶಿಕ್ಷಣ ಮುಂದುವರಿಸಲು ಭರವಸೆ ಮೂಡಿಸಿದೆ.

    ಯಲಬುರ್ಗಾದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಓದುತ್ತಿರುವ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ವಿದ್ಯಾರ್ಥಿನಿ ಸುನಿತಾ ಬಸವರಾಜ ಬಿಂದಗಿ ತನ್ನ ಪದವಿ ಶಿಕ್ಷಣಕ್ಕಾಗಿ ಮನೆಯಲ್ಲಿ ಶುಲ್ಕ (ಹಣ) ಕೇಳದೆ ಗ್ರಾಪಂ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಪಾಲಕರ ಸಹಾಯ ಪಡೆಯದೆ ತಾನೇ ದುಡಿದು ತನ್ನ ದಾಖಲಾತಿ, ಪುಸ್ತಕ ಖರೀದಿ, ಬಸ್‌ಪಾಸ್ ವ್ಯವಸ್ಥೆಗೆ ನರೇಗಾ ಕೂಲಿ ಹಣ ಸಹಕಾರಿಯಾಗಿರುವುದು ವಿಶೇಷ.

    ಬಿಎ ತೃತೀಯ ವರ್ಷದಲ್ಲಿ ಓದುತ್ತಿರುವ ಸುನಿತಾ ಕೆಲಸಕ್ಕೂ ಸೈ.. ಓದಿನಲ್ಲೂ ಸೈ ಎನಿಸಿಕೊಂಡಿದ್ದಾಳೆ. ಬಿರುಬಿಸಿಲಿಗೆ ಹೆದರದೆ ಕೂಲಿಕಾರರ ಜತೆಗೂಡಿ ವಿದ್ಯಾರ್ಥಿನಿ ನರೇಗಾದಡಿ ಕೈಗೊಂಡ ನಾಲಾ ಸುಧಾರಣೆ ಕಾಮಗಾರಿ ಕೆಲಸಕ್ಕೆ ಹೋಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.

    ಇದನ್ನೂ ಓದಿ: ವಿಜಯಾನಂದ ಟ್ರಾವೆಲ್ಸ್​ಗೆ ಟಾಟಾ ಬಸ್ ಹಸ್ತಾಂತರ: ಶಿವಾ ಸಂಕೇಶ್ವರ ಅವರಿಗೆ ಕೀ ನೀಡಿದ ಕೆ.ಗುರುಪ್ರಸಾದ್

    ಸುನಿತಾಳದು ಮೂಲ ಕೃಷಿ ಕುಟುಂಬವಾಗಿದ್ದು, ಜಮೀನಲ್ಲಿ ಬೆಳೆದ ದವಸ ಧಾನ್ಯದಿಂದ ಜೀವನ ನಡೆಸಬೇಕಿದೆ. ಮನೆಯಲ್ಲಿ ಸುನಿತಾಳ ತಂದೆ, ತಾಯಿ, ತಮ್ಮ, ಅಜ್ಜಿ ವಾಸಿಸುತ್ತಿದ್ದಾರೆ. ಸಹೋದರ ಪಿಯುಸಿ ಓದುತ್ತಿದ್ದು, ಆತನ ಶಿಕ್ಷಣಕ್ಕೂ ನರೇಗಾ ಕೂಲಿಹಣ ಉಪಯೋಗಿಸಲಾಗುತ್ತಿದೆ. ಇವರ ಮನೆಯಲ್ಲಿ ಮೂವರು ಕೆಲಸಕ್ಕೆ ಹೋಗುತ್ತಿದ್ದು, ಕುಟುಂಬ ನಿರ್ವಹಣೆಗೆ ಉದ್ಯೋಗ ಖಾತ್ರಿ ನೆರವಾಗಿದೆ.

    ಗ್ರಾಮೀಣ ಪ್ರದೇಶದ ಬಡ ಮಕ್ಕಳು ಶಿಕ್ಷಣ ಮುಂದುವರಿಸಲು ನರೇಗಾ ಕೈಹಿಡಿದಿದೆ. ನಮ್ಮ ಮಗಳನ್ನು ಪಿಯುಸಿ ಮುಗಿದ ಬಳಿಕ ಮದುವೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸುನಿತಾಳಿಗೆ ಓದುವ ಆಸಕ್ತಿ ಇದಿದ್ದರಿಂದ ಹಣ ಹೊಂದಿಸಲು ಸಾಧ್ಯವಾಗದೇ ಇದ್ದಾಗ ನಮ್ಮ ಜತೆ ನರೇಗಾ ಕೆಲಸಕ್ಕೆ ಬಂದಿದ್ದರಿಂದ ಕಾಲೇಜು ಶಿಕ್ಷಣಕ್ಕೆ ಶುಲ್ಕ ಕಟ್ಟಲು ಸಹಾಯವಾಯಿತು. ರೈತರ ಬದುಕು ಕಟ್ಟಿಕೊಳ್ಳಲು ನರೇಗಾ ಖಾತ್ರಿಯಾಗಿದೆ ಎಂದು ಸುನಿತಾಳ ತಂದೆ ಬಸವರಾಜ ಬಿಂದಗಿ ಹರ್ಷ ವ್ಯಕ್ತಪಡಿಸಿದರು.

    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾದಡಿ ಕೈಗೊಳ್ಳಲಾಗುವ ಕಾಮಗಾರಿಯಲ್ಲಿ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೆಲಸದಲ್ಲಿ ಹೆಚ್ಚಾಗಿ ಪದವೀಧರ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಶಿಕ್ಷಣದ ಖರ್ಚು ನೋಡಿಕೊಳ್ಳುತ್ತಿರುವುದು ಮೆಚ್ಚುಗೆ ಕೆಲವಾಗಿದೆ. ಅದರಂತೆ ಪದವೀಧರ ವಿದ್ಯಾರ್ಥಿನಿ ಸುನಿತಾಳ ಶಿಕ್ಷಣಕ್ಕೆ ನರೇಗಾ ನೆರವಾಗಿದ್ದು, ಗಮನ ಸೆಳೆದಿದೆ.

    ಸಂತೋಷ್ ಪಾಟೀಲ್, ತಾಪಂ ಇಒ ಯಲಬುರ್ಗಾ

    ಉದ್ಯೋಗ ಖಾತ್ರಿ ಹಣದಿಂದ ನನ್ನ ಬಿಎ ಅಡ್ಮಿಶನ್, ಪುಸ್ತಕ ಖರೀದಿ ಹಾಗೂ ಬಸ್‌ಪಾಸ್ ಮಾಡಿಸಿಕೊಳ್ಳಲು ಅನುಕೂಲವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನರೇಗಾ ತುಂಬಾ ಆಸರೆಯಾಗಿದೆ. ನನ್ನಂತೆ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಿದೆ.
    ಸುನಿತಾ ಬಿಂದಗಿ, ನರೇಗಾ ಕೆಲಸದಲ್ಲಿ ತೊಡಗಿಕೊಂಡ ಪದವೀಧರೆ, ಚಿಕ್ಕಮ್ಯಾಗೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts