ಕೇವಲ ರಾಜಕೀಯ ಲಾಭಕ್ಕಾಗಿ ನೀರಾವರಿ ವಿಚಾರಗೋಷ್ಠಿ – ಶಾಸಕ ಹಾಲಪ್ಪ ಆಚಾರ್ ಟೀಕೆ

ಯಲಬುರ್ಗಾ: ರೈತಪರ ಕಾಳಜಿ, ವಿಚಾರವಿಲ್ಲದವರು ನೀರಾವರಿ ಯೋಜನೆ ಕುರಿತ ವಿಚಾರಗೋಷ್ಠಿ ಮಾಡುತ್ತಿರುವುದು ಕೇವಲ ರಾಜಕೀಯ ಲಾಭಕ್ಕಾಗಿ ಎಂದು ಶಾಸಕ ಹಾಲಪ್ಪ ಆಚಾರ್ ಟೀಕಿಸಿದರು.

ಮಳೆ ಬೆಳೆಯಿಲ್ಲದೆ ಕ್ಷೇತ್ರದಲ್ಲಿ ಬರಗಾಲ ಉಂಟಾಗಿ ಜನರು ಶೋಷಣೆ ಅನುಭವಿಸುತ್ತಿದ್ದಾರೆ. ರೈತಪರ ಕಾಳಜಿ ಇಲ್ಲದ ಅಧಿಕಾರ ಕಳೆದುಕೊಂಡು ಹತಾಶರಾದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಈಗ ನೀರಾವರಿ ಬಗ್ಗೆ ಕಾಳಜಿ ತೋರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ನೀರಾವರಿ ವಿಚಾರಗೋಷ್ಠಿ ಮಾಡುತ್ತಿರುವುದು ಜನರ ದಿಕ್ಕು ತಪ್ಪಿಸುವುದೇ ವಿನಃ ಇದರಲ್ಲಿ ಬೇರೆ ಯಾವುದೇ ಅರ್ಥವಿಲ್ಲ. ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಜನರಿಗೆ ಬರೀ ಸುಳ್ಳು ಭರವಸೆ ನೀಡಿದ್ದಾರೆ. ಈಗ ನೀರಾವರಿಯ ಬಗ್ಗೆ ಜ್ಞಾನೋದಯವಾಗಿದೆ. ಅಧಿಕಾರದಲ್ಲಿದ್ದಾಗ ನೀರಾವರಿಗೆ ಒಂದು ನಯಾ ಪೈಸೆ ಬಿಡುಗಡೆಗೊಳಿಸಿಲ್ಲ. ಈಗಿನ ಮೈತ್ರಿ ಸರ್ಕಾರವು ಜಿಲ್ಲೆಯ ಶಾಸಕರ ಒತ್ತಾಯಕ್ಕೆ ಸ್ಪಂದಿಸಿ ಕೊಪ್ಪಳ ಏತ ನೀರಾವರಿಗಾಗಿ 210 ಕೋಟಿ ರೂ. ಬಿಡುಗಡೆ ಮಾಡಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಕ್ಷೇತ್ರ ಹಿಂದುಳಿಯಲು ಕಾಂಗ್ರೆಸ್ ಕಾರಣ ಎಂದು ಜರಿದರು.

ಬಿಜೆಪಿ ತಾಲೂಕು ಅಧ್ಯಕ್ಷ ರತನ್ ದೇಸಾಯಿ, ಮುಖಂಡರಾದ ಬಸವಲಿಂಗಪ್ಪ ಭೂತೆ, ನವೀನ್‌ಕುಮಾರ ಗುಳಗಣ್ಣವರ್, ಸಿ.ಎಚ್.ಪಾಟೀಲ್, ಶಿವನಗೌಡ ಬನ್ನಪ್ಪಗೌಡ್ರ, ಅರವಿಂದಗೌಡ ಪಾಟೀಲ್, ವಿಶ್ವನಾಥ ಮರಿಬಸಪ್ಪನವರ್, ಶರಣಪ್ಪ ಈಳಿಗೇರ್, ಸುಧಾಕರ್ ದೇಸಾಯಿ, ಕಳಕಗೌಡ ಪಾಟೀಲ್, ಈರಪ್ಪ ಕುಡಗುಂಟಿ, ಅಯ್ಯನಗೌಡ ಕೆಂಚಮ್ಮನವರ್, ಸಿದ್ರಾಮೇಶ ಬೆಲೇರಿ, ಕೊಟ್ರಪಪ ಮುತ್ತಾಳ ಮತ್ತಿತರರಿದ್ದರು.

ಭೂತದ ಬಾಯಲ್ಲಿ ಭಗವದ್ಗೀತೆ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯ 1 ಮತ್ತು 2ನೇ ಹಂತದ ಕಾಮಗಾರಿಗೆ 1,100 ಕೋಟಿ ರೂ.ಅನುದಾನವನ್ನು ಆಡಳಿತ್ಮಾತಕವಾಗಿ ಮಂಜೂರು ಮಾಡಿ, ಈ ಯೋಜನೆಗೆ ಚಾಲನೆ ನೀಡಿದ್ದರು. ನೀರಾವರಿಯ ಬಗ್ಗೆ ಮಾತನಾಡುವವರು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಂತೆ ಎಂದು ಶಾಸಕ ಹಾಲಪ್ಪ ಆಚಾರ್ ಲೇವಡಿ ಮಾಡಿದರು.

Leave a Reply

Your email address will not be published. Required fields are marked *