ಯಲಬುರ್ಗಾ: ತಾಲೂಕಿನ ಮುಧೋಳ, ಕರಮುಡಿ, ಬಂಡಿ ಮತ್ತು ಬಳೂಟಗಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಮತ್ತು ನಾನಾ ಯೋಜನೆಗಳಡಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿ ಸ್ಥಳಕ್ಕೆ ಜಿಪಂ ಯೋಜನಾ ನಿರ್ದೇಶಕ ವಿ.ಪ್ರಕಾಶ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಮುಧೋಳದಲ್ಲಿ ಮಹಿಳಾ ಸ್ವಸಹಾಯ ಸಂಘದ ಕೋಳಿ ಸಾಕಣೆ ಘಟಕದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ನಾನಾ ಕಾಮಗಾರಿ ಆರಂಭಿಸಿ ಕೂಲಿಕಾರರಿಗೆ ಕೆಲಸ ಕೊಡಬೇಕು ಎಂದು ಸೂಚಿಸಿದರು.
ಮುಧೋಳದಲ್ಲಿ ನಾಲೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಕಾರ್ಮಿಕರಿಂದ ಕೆಲಸದ ಮಾಹಿತಿ ಪಡೆದರು. ಪ್ರತಿದಿನ ಕೂಲಿಕಾರರು ಎಷ್ಟು ಜನ ಬರುತ್ತಾರೆ? ಯಾವ ವಿಧದ ಕೆಲಸ ಕೊಡುತ್ತಿರಿ? ಎಂದು ಕೇಳಿದ ಅವರು, ಕೆಲಸಗಾರರಿಗೆ ಸರಿಯಾದ ಕೂಲಿ ದೊರೆಯುವಂತೆ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದರು.
ತಾಪಂ ಇಒ ಸಂತೋಷ ಪಾಟೀಲ್, ಪಶು ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ ಚೂರಿ, ಎನ್‌ಆರ್‌ಎಲ್‌ಎಂ ತಾಲೂಕು ಸಂಯೋಜಕರಾದ ಉದಯಕುಮಾರ, ಜಾಕೀರ್ ಹುಸೇನ್, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ತಾಂತ್ರಿಕ ಸಹಾಯಕ ವಿಜಯಕುಮಾರ, ಬಿಎಫ್‌ಟಿ ಗುರುಬಸಯ್ಯ, ಡಿಇಒ ಮೈಲಾರಿ ಇತರರಿದ್ದರು.