ಅಂಬೇಡ್ಕರ್ ಭಾರತದ ಮಹಾನ್ ಸಾಧಕ: ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಬಣ್ಣನೆ, ಸಂವಿಧಾನ ಶಿಲ್ಪಿಯ 128ನೇ ಜಯಂತಿ

ಯಲಬುರ್ಗಾ: ಭಾರತ ಕಂಡ ಮಹಾನ್ ಸಾಧಕರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೊದಲಿಗರು ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು. ಪಟ್ಟಣದ ಹಳೇ ಪಪಂ ಕಚೇರಿ ಆವರಣದಲ್ಲಿ ಛಲವಾದಿ ಮಹಾಸಭಾ ತಾಲೂಕು ಘಟಕ ಗುರುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರರ 128ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಷ್ಟ-ಕಾರ್ಪಣ್ಯಗಳನ್ನು ಮೆಟ್ಟಿನಿಂತು, ಉನ್ನತ ಶಿಕ್ಷಣ ಪಡೆದು ಯಶಸ್ವಿ ನಾಯಕರಾಗಿ ಹೊರಹೊಮ್ಮಿದ ಮಹಾನ್ ಸಾಧಕರು ಅಂಬೇಡ್ಕರ್. ಸಮಾಜದಲ್ಲಿ ಎಲ್ಲ ಸಮುದಾಯದವರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ಒಳ್ಳೆಯ ಜೀವನ ನಡೆಸಲು ಅವರು ನೀಡಿದ ಸಂವಿಧಾನದಿಂದ ಸಾಧ್ಯವಾಗಿದೆ. ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಿ, ಉತ್ತಮ ಸಂಸ್ಕಾರ ರೂಢಿಸಿಕೊಂಡು ಮುಂದೆ ಸಾಗಬೇಕು ಎಂದು ಸಲಹೆ ನೀಡಿದರು.
ಸಂಶೋಧಕ ವಿಠ್ಠಲ್ ವಗ್ಗನ್‌ನವರ್ ಮಾತನಾಡಿ, ಅನ್ನ, ಅಧಿಕಾರ, ಶಿಕ್ಷಣ ಹಾಗೂ ಆತ್ಮಾಭಿಮಾನವನ್ನು ಅಂಬೇಡ್ಕರರು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಜ್ಞಾನ ಸಾಮ್ರಾಜ್ಯವನ್ನು ವಿಶ್ವಕ್ಕೆ ಪಸರಿಸಿದ ಮಹಾನ್ ಚೇತನ ಅವರಾಗಿದ್ದಾರೆ ಎಂದು ಬಣ್ಣಿಸಿದರು. ಸಂಶೋಧಕ ವಿಠ್ಠಲ್ ವಗ್ಗನ್‌ನವರ್ ಮಾತನಾಡಿ, ಸಾಹಿತಿ ಎಸ್.ಎಲ್.ಬೈರಪ್ಪ ಅವರು ಹಿಂದು ಧಾರ್ಮಿಕ ಗ್ರಂಥಗಳು ಈ ದೇಶದ ಸಂವಿಧಾನ ಆಗಬೇಕು ಎಂದು ಹೇಳಿದ್ದು ಸರಿಯಲ್ಲ. ಭಾರತದ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ತಪ್ಪು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಜಿಪಂ ಮಾಜಿ ಸದಸ್ಯ ಸಿ.ಎಚ್.ಪಾಟೀಲ್ ಮಾತನಾಡಿದರು. ಛಲವಾದಿ ಮಹಾಸಭಾದ ಗೌರವಾಧ್ಯಕ್ಷ ಸಿದ್ದಪ್ಪ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ತಾಲೂಕು ಅಧ್ಯಕ್ಷ ಅಂದಾನಗೌಡ ಪಾಟೀಲ್, ಛಲವಾದಿ ಮಹಾಸಭಾ ಅಧ್ಯಕ್ಷ ಬಾಲರಾಜ ಛಲವಾದಿ, ಮುಖಂಡರಾದ ಬಸವಲಿಂಗಪ್ಪ ಭೂತೆ, ಭರಮಪ್ಪ ಬೆಲ್ಲದ್, ಮೈಬುಸಾಬ ಮಕಾನ್‌ದಾರ್, ಪುಟ್ಟರಾಜ ಪೂಜಾರ್, ಡಿ.ಕೆ.ಪರಶುರಾಮ್, ಶಂಕರ್ ಕಟ್ಟಿ, ಅಖ್ತರ್ ಸಾಬ್ ಖಾಜಿ, ಛತ್ರಪ್ಪ ಛಲವಾದಿ, ಕನಕೇಶ ಪೇಂಟರ್, ಶಂಕರ್ ಜಕ್ಕಲಿ, ಗದ್ದೆಪ್ಪ ಕುಡಗುಂಟಿ, ತಿಪ್ಪಣ್ಣ ಮ್ಯಾಗೇರಿ, ವಿಜಯ ಜಕ್ಕಲಿ, ಪಪಂ ಸದಸ್ಯರು ಇದ್ದರು. ಇದಕ್ಕೂ ಮುನ್ನ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕಾರ್ಯಕ್ರಮದ ವೇದಿಕೆವರೆಗೆ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಯಿತು. ಈ ವೇಳೆ ಮಹಿಳೆಯರು, ಯುವಕರು ಸಂಭ್ರಮದಿಂದ ಹೆಜ್ಜೆ ಹಾಕಿದರು.