ಯಲಬುರ್ಗಾ: ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಂಡರೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ ಎಂದು ಪಪಂ ಸದಸ್ಯೆ ಡಾ.ನಂದಿತಾ ಶಿವನಗೌಡ ದಾನರೆಡ್ಡಿ ಹೇಳಿದರು.
ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಧರ್ಮಸ್ಥಳ ಸಂಸ್ಥೆ ಮಹಿಳೆಯರಿಗೆ ಆರ್ಥಿಕತೆ ನೆರವು ನೀಡಿ ಸ್ವಾವಲಂಬಿ ಬದುಕಿಗೆ ಆದ್ಯತೆ ನೀಡಿದೆ. ಸಾಲ ಸೌಲಭ್ಯದಿಂದ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಧರ್ಮಾಧಿಕಾರಿ ಹೆಗ್ಗಡೆ ಶ್ರಮ ಸಾಕಷ್ಟಿದೆ. ಕೆರೆ ಅಭಿವೃದ್ಧಿ, ಶಿಕ್ಷಣ, ದೇವಸ್ಥಾನಗಳ ಜೀರ್ಣೋದ್ಧಾರ, ಬಡವರಿಗೆ ಆರ್ಥಿಕ ನೆರವು ಕಲ್ಪಿಸಲು ಸಂಸ್ಥೆ ನೆರವಾಗಿದೆ ಎಂದರು.
ಗಂಗಾವತಿಯ ವಕೀಲೆ ಬಿ.ಎಂ.ರಾಜೇಶ್ವರಿ ಸುರೇಶ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವ ಪದ್ಧತಿ ಕಡಿಮೆಯಾಗಿದೆ. ಕಾರಣ ಇಡೀ ಕುಟುಂಬ ಮೊಬೈಲ್‌ನಲ್ಲಿ ಮುಳುಗಿದೆ. ಹೆಚ್ಚು ಸಮಯ ಸಾಮಾಜಿಕ ಜಾಲತಾಣದಲ್ಲಿ ಕಳೆಯುವುದರಿಂದ ಬದುಕು ಹಾಳಾಗುತ್ತಿದೆ. ಮೊಬೈಲ್ ಒಳ್ಳೆಯದಕ್ಕೆ ಉಪಯೋಗಿಸಿದರೆ ಜೀವನಕ್ಕೆ ಅನುಕೂಲವಾಗುತ್ತದೆ ಎಂದರು.
ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ, ಸಂಸ್ಥೆಯ ಯೋಜನಾಧಿಕಾರಿ ಟಿ.ಸತೀಶ, ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ ನಂದಿಹಾಳ, ಜಿಲ್ಲಾ ಜನಜಾಗೃತಿ ಸದಸ್ಯರಾದ ಶಕುಂತಲಾದೇವಿ ಮಾಲಿಪಾಟೀಲ್, ಶರಣಬಸಪ್ಪ ದಾನಕೈ, ಪಪಂ ಮಾಜಿ ಅಧ್ಯಕ್ಷೆ ಜಯಶ್ರೀ ಅರಕೇರಿ, ಸಿಬ್ಬಂದಿ ಇತರರಿದ್ದರು.