ತಾಪಂ ಇಒ ಡಾ.ಡಿ.ಮೋಹನ್ ಗ್ರಾಪಂ ಅಧಿಕಾರಿಗೆ ಸೂಚನೆ
ಯಲಬುರ್ಗಾ: ಕುಡಿವ ನೀರಿನ ಸಮಸ್ಯೆ ಉಂಟಾಗಿರುವ ತಾಲೂಕಿನ ಗಾಣದಾಳ ಗ್ರಾಮಕ್ಕೆ ನಿತ್ಯ ನಾಲ್ಕು ಟ್ಯಾಂಕರ್ ನೀರು ಪೂರೈಕೆ ಮಾಡಬೇಕು ಎಂದು ತಾಪಂ ಇಒ ಡಾ.ಡಿ.ಮೋಹನ್ ಹಾಗೂ ಆರ್ಡಬ್ಲುೃಎಸ್ ಇಲಾಖೆಯ ಎಇಇ ಎ.ಎಂ.ತಿರಕನಗೌಡ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ಸಂದರ್ಭ ಮಾತನಾಡಿದ ತಾಪಂ ಇಒ ಡಾ.ಡಿ.ಮೋಹನ್, ಗ್ರಾಮದಲ್ಲಿರುವ ನೀರಿನ ಅಭಾವ ತಪ್ಪಿಸಲು ಎರಡ್ಮೂರು ಕೊಳವೆಬಾವಿ ಕೊರೆಯಿಸಿದರೂ ನೀರು ಲಭ್ಯವಾಗಿಲ್ಲ. ಗ್ರಾಮದಲ್ಲಿ ಖಾಸಗಿ ಬೋರ್ವೆಲ್ ಕೂಡ ಇಲ್ಲ. ಇದರಿಂದ ಜನತೆ ನೀರಿಗಾಗಿ ಪರದಾಡುವಂತಾಗಿದೆ. ಈ ಮುಂಚೆ ಇಲ್ಲಿನ ಪರಿಸ್ಥಿತಿ ಮನಗಂಡು ನಿತ್ಯ ಎರಡು ಟ್ಯಾಂಕರ್ ನೀರು ಪೂರೈಲಾಗುತ್ತಿತ್ತು. ಆದರೂ ಕೊರತೆ ನೀಗುತ್ತಿಲ್ಲ. ಹೀಗಾಗಿ ಇನ್ಮುಂದೆ ದಿನಕ್ಕೆ ನಾಲ್ಕು ಟ್ಯಾಂಕರ್ ನೀರನ್ನು ಪೂರೈಸಲು ಸೂಚಿಸಲಾಗಿದೆ.
ಗ್ರಾಮದಲ್ಲಿ ಪಿಯು ಕಾಲೇಜು, ಪ್ರಾಥಮಿಕ, ಪ್ರೌಢ ಶಾಲೆ, ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮತ್ತು ಆಸ್ಪತ್ರೆಗೆ ಪ್ರತ್ಯೇಕ ನೀರಿನ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಲಾಗುವುದು. ಗ್ರಾಮಸ್ಥರು ನೀರನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.
ಗಾಣದಾಳ ಗ್ರಾಪಂ ವ್ಯಾಪ್ತಿಯ ತಿಪ್ಪನಾಳ, ಹಿರೇವಡ್ರಕಲ್, ಕಟಗಿಹಳ್ಳಿಯಲ್ಲಿ ನೀರಿನ ಸಮಸ್ಯೆಯನ್ನು ಆಲಿಸಿದರು. ಆರ್ಡಬ್ಲುೃಎಸ್ ಇಲಾಖೆ ಎಇಇ ಎ.ಎಂ.ತಿರಕನಗೌಡ, ಪಿಡಿಒ ಜಮಾಲ್ಸಾಬ ಗ್ರಾಪಂ ಸದಸ್ಯರು, ಸಾರ್ವಜನಿಕರು ಇದ್ದರು.