ಯಲಬುರ್ಗಾ: ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಲಾಗಿದ್ದು, ಕ್ಷೇತ್ರಕ್ಕೆ ಒಂದು ವರ್ಷದಲ್ಲಿ 14 ಪ್ರೌಢ ಶಾಲೆಗಳನ್ನು ಮಂಜೂರು ಮಾಡಲಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಉರ್ದು ಪ್ರೌಢ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮಂಜೂರಾದ ಪ್ರೌಢ ಶಾಲೆಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ತಲಾ 2.50 ಕೋಟಿ ರೂ. ಅನುದಾನ ನೀಡಲಾಗಿದೆ. 6 ಜೂನಿಯರ್ ಕಾಲೇಜು, ಮೂರು ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಒಟ್ಟು 17 ವಿವಿಧ ವಸತಿ ಶಾಲೆಗಳು ಕ್ಷೇತ್ರದಲ್ಲಿವೆ. 65ಕ್ಕೂ ಹೆಚ್ಚು ಪ್ರೌಢಶಾಲೆ, 56 ಎಲ್‌ಕೆಜಿ, 25 ಆಂಗ್ಲ ಮಾಧ್ಯಮ ಶಾಲೆಗಳಿವೆ. ಪ್ರಾಥಮಿಕ, ಪ್ರೌಢಶಾಲೆ ಹಾಗೂ ವಸತಿ ನಿಲಯಗಳಿಗೆ ಮೂಲ ಸೌಕರ್ಯ ಒದಗಿಸಲು ಮುಂದಿನ ಶೈಕ್ಷಣಿಕ ವರ್ಷದಲ್ಲಿ 20 ಕೋಟಿ ರೂ. ಮಂಜೂರು ಮಾಡಿಸಲಾಗುವುದು ಎಂದರು.
ತಳಕಲ್‌ನಲ್ಲಿ ಈಗಾಗಲೇ ಕೌಶಲಾಭಿವೃದ್ಧಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೇ 150 ಕೋಟಿ ರೂ.ವೆಚ್ಚದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ-2ರ ಕಟ್ಟಡ ಕಾಮಗಾರಿ ಶೀಘ್ರ ಪ್ರಾರಂಭವಾಗಲಿದೆ. ಇದರಿಂದ ಪ್ರತಿವರ್ಷ ಐದು ಸಾವಿರ ಯುವಕರಿಗೆ ಉದ್ಯೋಗ ಹಾಗೂ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ನಂತರ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ಶಾಲೆ, ಮುಧೋಳ, ಹಿರೇ ಅರಳಿಹಳ್ಳಿಯಲ್ಲಿ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಅಭಿವೃದ್ಧಿಗೆ ಅನುದಾನ: ಚಿಕ್ಕೊಪ್ಪದ ಉಪ ಎಪಿಎಂಸಿ ಮಾರುಕಟ್ಟೆಗೆ 25 ಕೋಟಿ ರೂ., ಕೋಲ್ಡ್ ಸ್ಟೊರೇಜ್ ನಿರ್ಮಾಣಕ್ಕೆ 11.50 ಕೋಟಿ ರೂ., ಯಲಬುರ್ಗಾದಿಂದ ಬಂಡಿವರೆಗಿನ ರಸ್ತೆ ಕಾಮಗಾರಿಗೆ 19 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. 300 ಕೋಟಿ ರೂ. ವೆಚ್ಚದಲ್ಲಿ ಸಂಕನೂರು-ಮ್ಯಾದನೇರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಲಿದೆ. 50 ಕೋಟಿ ರೂ. ವೆಚ್ಚದಲ್ಲಿ ವಿವಿಧ ಗ್ರಾಮದಲ್ಲಿ ರಸ್ತೆ ನಿರ್ಮಾಣವಾಗಲಿದೆ. ಪಟ್ಟಣಕ್ಕೆ ಶೀಘ್ರ ಬಿಎಸ್ಸಿ ನಸಿರ್ಂಗ್ ಕಾಲೇಜು ಪ್ರಾರಂಭಕ್ಕೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಆರಂಭವಾಗಲಿದೆ ಎಂದು ರಾಯರಡ್ಡಿ ತಿಳಿಸಿದರು.
ಪಿಡಬ್ಲುೃಡಿ ಇಇ ಪಿ.ಹೇಮಂತರಾಜ, ಎಇಇ ಬಿ.ಮಲ್ಲಿಕಾರ್ಜುನ, ಡಿಡಿಪಿಐ ಶ್ರೀಶೈಲ ಬಿರಾದಾರ, ಬಿಇಒ ಸೋಮಶೇಖರಗೌಡ ಪಾಟೀಲ್, ಪಪಂ ಮುಖ್ಯಾಧಿಕಾರಿ ನಾಗೇಶ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ ಸಕ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ಬಿ.ಎಂ.ಶಿರೂರು, ಶರಣಪ್ಪ ಗಾಂಜಿ, ಆನಂದ ಉಳ್ಳಾಗಡ್ಡಿ, ಡಾ.ಶಿವನಗೌಡ ದಾನರಡ್ಡಿ, ಕೆರಿಬಸಪ್ಪ ನಿಡಗುಂದಿ, ಮಲ್ಲಿಕಾರ್ಜುನ ಜಕ್ಕಲಿ, ಹನುಮಂತ ಭಜಂತ್ರಿ, ಎಂ.ಎಫ್.ನದಾಫ್, ಶರಣಮ್ಮ ಪೂಜಾರ, ಜಯಶ್ರೀ ಕಂದಕೂರ ಇತರರಿದ್ದರು.