ಯಲಬುರ್ಗಾ: ಪ್ರಸ್ತುತ ಜನರಲ್ಲಿ ಕೆಲಸದ ಒತ್ತಡದಿಂದ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ಒತ್ತಡದ ಬದುಕಿಗೆ ಆಯುರ್ವೇದ ಮದ್ದು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಸಿ. ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಯುಷ್ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಚೇರಿ ಕೆಲಸ ಕಾರ್ಯ ನಿರ್ವಹಿಸುವ ದಾವಂತದಲ್ಲಿ ಸಿಬ್ಬಂದಿ ಹೆಚ್ಚು ಒತ್ತಡಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಇದರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಆರೋಗ್ಯ ಸಮತೋಲನ ಕಾಪಾಡಲು 2017ರಲ್ಲಿ ಮಾನಸಿಕ ಆರೋಗ್ಯ ಕಾಯ್ದೆ ಜಾರಿಗೆ ತರಲಾಗಿದೆ. ನ್ಯಾಯಾಲಯ ಸಿಬ್ಬಂದಿ ಮತ್ತು ವಕೀಲರು ಇಂಥ ಶಿಬಿರಗಳಲ್ಲಿ ಚಿಕಿತ್ಸೆ ಪಡೆಯುವ ಅವಶ್ಯವಿದೆ. ಎಲ್ಲರೂ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಜೆ.ರಂಗಸ್ವಾಮಿ ಮಾತನಾಡಿ, ಆಯುರ್ವೇದ ಚಿಕಿತ್ಸೆ ಪಡೆಯುವುದರಿಂದ ಉತ್ತಮವಾಗಿ ಆರೋಗ್ಯ ಕಾಪಾಡಿಕೊಳ್ಳಬಹುದು. ಒತ್ತಡಗಳನ್ನು ಬದಿಗಿಟ್ಟು ಆರೋಗ್ಯವಂತರಾಗಿರಲು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದರು. ವಕೀಲರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಬೇಲೇರಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪರ್ವತಗೌಡ ಹಿರೇಗೌಡರ ಮಾತನಾಡಿದರು.
ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಸಿಮರದ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ವಕೀಲರ ಸಂಘದ ಕಾರ್ಯದರ್ಶಿ ಈರಣ್ಣ ಕೋಳೂರ, ಆಯುಷ್ ಆಡಳಿತ ವೈದ್ಯಾಧಿಕಾರಿ ವಿ.ಆರ್.ತಾಳಿಕೋಟಿ, ತಜ್ಞವೈದ್ಯ ವಿವೇಕ ವಾಗ್ಲೆ, ಶಿಲ್ಪಾ, ಪುಷ್ಪಾ, ಡಾ.ವಿಜಯಲಕ್ಷ್ಮೀ, ಡಾ.ದೀಪಾ, ನ್ಯಾಯಾಲಯ ಸಿಬ್ಬಂದಿ ರಾಘವೇಂದ್ರ, ವಿನಾಯಕ ಹಾಗೂ ವಕೀಲರು, ಆಯುಷ್ ಇಲಾಖೆ ಸಿಬ್ಬಂದಿ ಇದ್ದರು.