ಯಲಬುರ್ಗಾ: ಕೃಷಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನುವುಗಾರರಿಗೆ ಮಾಸಿಕ ಕನಿಷ್ಠ ಹತ್ತು ಸಾವಿರ ರೂ. ಗೌರವಧನ ನಿಗದಿಪಡಿಸುವಂತೆ ಒತ್ತಾಯಿಸಿ ತಾಲೂಕು ರೈತ ಅನುವುಗಾರರ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ತಹಸೀಲ್ದಾರ್ ಶ್ರೀಶೈಲ ತಳವಾರ್‌ಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಕಲ್ಲಪ್ಪ ಕರಿಗೌಡರ್ ಮಾತನಾಡಿ, ರಾಜ್ಯದ ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನುವುಗಾರರಿಗೆ ಮಾಸಿಕವಾಗಿ ಕನಿಷ್ಠ 10 ಸಾವಿರ ರೂ. ಗೌರವ ಧನ ನಿಗದಿಪಡಿಸಬೇಕು. ರಾಜ್ಯಾದ್ಯಂತ ನಡೆಯುವ ಬೆಳೆ ಸರ್ವೇ, ನಷ್ಟದ ಸರ್ವೇ ಹಾಗೂ ಮಣ್ಣು ಪರೀಕ್ಷೆ ಸೇರಿದಂತೆ ನಾನಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ರೈತರ ಕೃಷಿ ಚಟುವಟಿಕೆಗಳಿಗೆ ಸಲಹೆ ಸೂಚನೆ ನೀಡುವುದರ ಜತೆಗೆ ಸರ್ಕಾರ ಮತ್ತು ಇಲಾಖೆಗೆ ನೆರವಾಗಿ ಕೆಲಸ ಮಾಡುತ್ತಿದ್ದಾರೆ. ದಶಕಗಳ ಕಾಲದಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಅನುವುಗಾರರನ್ನು ತೆಗೆದು ಹಾಕುವುದರಿಂದ ವಿವಿಧ ಸರ್ವೇ ಕೆಲಸಕ್ಕೆ ತೊಂದರೆಯಾಗಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ನಿರ್ಧಾರದಿಂದ ಅನೇಕ ಯೋಜನೆಗಳು ಕುಂಠಿತಗೊಂಡಿದ್ದು, ತಕ್ಷಣ ಸರ್ಕಾರ ಮಧ್ಯ ಪ್ರವೇಶಿಸಿ ಅನುವುಗಾರರನ್ನು ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಈರಪ್ಪ ಕಮ್ಮಾರ, ಖಲೀಮ್ ಹಿರೇಮನಿ, ಯಮನೂರ ಮುಧೋಳ, ಹುಸೇನಸಾಬ್ ದಮ್ಮೂರು, ಮಹಾಂತೇಶ ಶಾಖಾಪೂರ ಇದ್ದರು.