ಯಲಬುರ್ಗಾ: ಕಲೆ, ಸಂಗೀತ ಉಳಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸಿ ಎಂದು ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಮ್ಯಾದನೇರಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ, ಜನಪದ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸುಮಧುರ ಸಂಗೀತ ಗಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತ, ಅಧ್ಯಾತ್ಮ ಲೋಕ ಬೆಳಗಿದ ಪಂಚಾಕ್ಷರಿ ಗವಾಯಿಗಳು ಮತ್ತು ಹಾನಗಲ್ ಕುಮಾರೇಶ್ವರ ಅವರನ್ನು ಸ್ಮರಿಸಬೇಕು. ಜನಪದ ಸೊಗಡು, ಶಾಸ್ತ್ರೀಯ ಸಂಗೀತ, ಕಲೆ ಮತ್ತು ಸಾಹಿತ್ಯವನ್ನು ಪೋಷಣೆ ಮಾಡುವ ಕಲಾವಿದರಿಗೆ ಗೌರವ ಕೊಡಬೇಕು. ರಾಜ ಮಹಾರಾಜರ ಕಾಲದಿಂದಲೂ ಸಂಗೀತಕ್ಕೆ ಆದ್ಯತೆ ನೀಡುತ್ತಾ ಬರಲಾಗಿದೆ. ನೆಮ್ಮದಿ ಜೀವನಕ್ಕೆ ಸಂಗೀತ ರಾಮಬಾಣವಾಗಿದೆ. ಹಲವಾರು ರೋಗಗಳಿಗೆ ಸಂಗೀತ ಔಷಧಿಯಾಗಿದೆ. ಸಮಾಜಮುಖಿ ಕಾರ್ಯದಲ್ಲಿ ತೊಡಗಿದವರು ಜೀವನದಲ್ಲಿ ದೊಡ್ಡ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ. ಮಕ್ಕಳಿಗೆ ಪಾಲಕರು ಸಂಸ್ಕೃತಿ ಸಂಸ್ಕಾರ ಕಲಿಸದೇ ಹೋದರೆ ಅನಾಥಾಶ್ರಮಕ್ಕೆ ಸೇರಬೇಕಾಗುತ್ತದೆ ಎಂದರು.
ಜಿಲ್ಲಾ ಖಜಾನೆ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಂ.ದೇವರಮನಿ, ನಿವೃತ್ತ ಉಪನ್ಯಾಸಕರಾದ ದ್ಯಾಮಣ್ಣ ಹೂಗಾರ, ಯಮನಪ್ಪ ಪುರದ, ಆದಯ್ಯಸ್ವಾಮಿ ಹಿರೇಮಠ, ಗ್ರಾಪಂ ಮಾಜಿ ಉಪಾಧ್ಯಕ್ಷ ಸುಭಾಷ ಜಿರ್ಲಿ, ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಜನಪದ ಕಲಾ ಸಂಘದ ಅಧ್ಯಕ್ಷ ಫಕೀರಪ್ಪ ಹೊಸೂರು, ಕಾರ್ಯದರ್ಶಿ ಡಿ.ಎಸ್.ಪೂಜಾರ, ಕಲಾವಿದರಾದ ರಾಮಪ್ಪ ಪೂಜಾರ, ಎಂ.ನಾರಾಯಣಪ್ಪ ಮಾಡಶಿವಾರ, ವೀರಪ್ಪ ಬಿಸರಹಳ್ಳಿ, ಶೇಖರಗೌಡ ಪೂಜಾರ, ಹನುಮೇಶ ನಾಯಕ, ಮಂಜುನಾಥ ಕಟ್ಟಿಮನಿ, ರಾಮಪ್ಪ ಕಡೆಮನಿ, ಮಂಜುನಾಥ ಆಗೋಲಿ, ಹೊನ್ನಪ್ಪ ಭಾರತಗಿ, ಗ್ಯಾನೇಶ ಬಡಿಗೇರ, ಪಂಪಾಪತಿ, ರಮೇಶ, ಉಮೇಶ ನಾಯಕ, ಎಸ್.ಕೆ.ದಾನಕೈ, ಶಿಕ್ಷಕ ಶೇಖರಪ್ಪ ಮೇಟಿ ಇತರರಿದ್ದರು