ಸನ್ಯಾಸ ದೀಕ್ಷೆ ಪಡೆದ ಮೂವರು ಯುವಕರು

ಭದ್ರಾವತಿ: ಜೈನ ಸಮಾಜದ ಇಂಜಿನಿಯರಿಂಗ್ ಪದವೀಧರ ಭದ್ರಾವತಿಯ ಜಿನೇಶ್​ಕುಮಾರ್ ಜೈನ್, ಆಂಧ್ರದ ಭರತ್​ಕುಮಾರ್ ಹಾಗೂ ವಿಜಯಪುರದ ಹಸ್ತಿಮಲ್ ಅವರು 15 ಸಂತರು ಹಾಗೂ 5 ಸಾಧಿ್ವುರು ಸೇರಿ ಸಾವಿರಾರು ಜನರ ಸಮ್ಮುಖದಲ್ಲಿ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದರು.

ನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಿದ್ದ ಸನ್ಯಾಸತ್ವ ಸ್ವೀಕಾರ ಕಾರ್ಯಕ್ರಮದ ಅಂತಿಮ ದಿನವಾದ ಬುಧವಾರ ಜೈನಮುನಿಗಳಾದ ಶ್ರೀ ವಿಜಯ್ ಅಭಯಚಂದ್ರ ಸೂರಿಶ್ವರ್ ಜೀ ಹಾಗೂ ಹೀರ್​ಚಂದ್ರ ಸೂರಿಶ್ವರ್ ಜೀ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಸನ್ಯಾಸ ದೀಕ್ಷೆ ನೀಡಲಾಯಿತು.

ಲೌಕಿಕ ಜೀವನ ತೊರೆದು ಸನ್ಯಾಸತ್ವ ಸ್ವೀಕರಿಸಿದ ನಗರದ ಭೂತನಗುಡಿಯ ದಿನೇಶ್ ಜೈನ್ ಹಾಗೂ ರಾಜುಲ್​ದೇವಿ ಅವರ ಪುತ್ರ ಜಿನೇಶ್​ಕುಮಾರ್ ಜೈನ್ ಅವರನ್ನು ಗುರುಗಳು ಖೀಮಾ ವಿಜಯ್ ಜೀ ಮಹಾರಾಜ್ ಸಾಹೇಬ್ ಎಂದು ನಾಮಕರಣ ಮಾಡಿದರೆ, ಭರತ್ ಕುಮಾರ್ ಅವರನ್ನು ಭೂವನ್ ತಿಲಕ್ ವಿಜಯ್ ಜೀ ಮಹಾರಾಜ್ ಸಾಹೇಬ್ ಎಂದು, ಹಸ್ತಿಮಲ್ ಅವರನ್ನು ಹರ್ಷ್ ವಿಜಯ್ ಜೀ ಮಹಾರಾಜ್ ಸಾಹೇಬ್ ಎಂದು ನಾಮಕರಣ ಮಾಡಿದರು.

ಇಲ್ಲಿನ ಜೈನ ಸಮುದಾಯದ ಬಂಧುಗಳು ಒಗ್ಗಟ್ಟಿನಿಂದ ಇರುವುದಕ್ಕೆ 3 ದಿನಗಳ ಕಾಲ ನಡೆದ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಸಮುದಾಯದಲ್ಲಿರುವ ಒಳಪಂಗಡಗಳೆಲ್ಲವನ್ನೂ ವಿಶ್ವಾಸದಿಂದ ಕಾಣುವ ನಿಮ್ಮೆಲ್ಲರ ಗುಣ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಯಿತು ಎಂದು ಗುರು ಹೀರ್​ಚಂದ್ರ ಸೂರಿಶ್ವರ್ ಜೀ ಹೇಳಿದರು.

3 ದಿನಗಳ ಕಾಲ ನಡೆದ ಸನ್ಯಾಸ ದೀಕ್ಷಾ ಕಾಯರ್åಕ್ರಮಕ್ಕೆ ರಾಜಸ್ಥಾನ ಸೇರಿ ರಾಜ್ಯದ ದಾವಣಗೆರೆ, ವಿಜಯಪುರ, ಹಾವೇರಿ, ಚಳ್ಳಕೆರೆ, ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಸಮಾಜದ ಮುಖಂಡರು, ಬಂಧುಗಳು, ಸಾರ್ವಜನಿಕರು ಆಗಮಿಸಿ ಮುನಿಗಳ ಆಶೀರ್ವಾದ ಪಡೆದು ನೂತನ ದೀಕ್ಷಾರ್ಥಿಗಳಿಗೆ ಶುಭ ಕೋರಿದರು. ಕಾರ್ಯಕ್ರಮದ ನಂತರ ದೀಕ್ಷೆ ಸ್ವೀಕರಿಸಿದ ದೀಕ್ಷಾರ್ಥಿಗಳು, ಮುನಿಗಳು, ಸಾದ್ವಿಗಳು ಹಾಗೂ ಸಂತರೊಂದಿಗೆ ಬೀರೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಿದರು.

 

Leave a Reply

Your email address will not be published. Required fields are marked *