ಸಿದ್ದಾಪುರ: ಸಂಘಟನೆಗಳನ್ನು ಉಳಿಸಿಕೊಂಡರೆ ಮಾತ್ರ ಕಲೆ ಉಳಿಯುತ್ತದೆ. ನಮ್ಮ ಬದುಕಿಗೆ ಬೇಕಾಗುವ ಹಲವಾರು ಮೌಲ್ಯಗಳನ್ನು ಬೋಧಿಸುವ ಕಲೆಯು ಒಂದು ಉತ್ತಮ ಶಿಕ್ಷಕ. ಯಕ್ಷಗಾನದ ಸಾಮರ್ಥ್ಯ ಅನನ್ಯವಾದುದು ಎಂದು ಹಿರಿಯ ವಕೀಲ ಜೆ.ಪಿ.ಎನ್. ಹೆಗಡೆ ಹರಗಿ ಹೇಳಿದರು.
ತಾಲೂಕಿನ ಇಟಗಿ ರಾಮೇಶ್ವರ ದೇವಾಲಯಸ ಸಭಾಂಗಣದಲ್ಲಿ ಕಲಾ ಭಾಸ್ಕರ ಸಂಸ್ಥೆ ಇಟಗಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಯಕ್ಷೋತ್ಸವ-2024ರ ಸಮರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳನ್ನು ಸಾಧ್ಯವಾದಷ್ಟು ಕಲಾ ಪ್ರಪಂಚಕ್ಕೆ ಕರೆತರುವ ಕೆಲಸವೂ ಆಗಬೇಕಾಗಿದೆ. ಈ ಸಂದಿಗ್ಧ ಕಾಲಘಟ್ಟದಲ್ಲಿ ಸಾಂಸ್ಕೃತಿಕವಾದ ತಿಳಿವಳಿಕೆ ಮಾತ್ರ ನಮ್ಮ ತನ ಉಳಿಸುತ್ತದೆ ಎಂದರು.
ಇಟಗಿ ಕೃಷಿ ಪರಿವಾರದ ಅಧ್ಯಕ್ಷ ಗೋವಿಂದರಾಜ ಹೆಗಡೆ ತಾರಗೋಡು, ಗ್ರಾಪಂ ಸದಸ್ಯ ಮಹೇಶ ನಾಯ್ಕ ಐಗೋಡು, ಸೀತಾರಾಮಚಂದ್ರ ದೇವಾಲಯದ ಅಧ್ಯಕ್ಷ ರಾಮಚಂದ್ರ ಎನ್. ಹೆಗಡೆ ಮುಸೆಗಾರು, ಇತರರಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಮದ್ದಳೆ ವಾದಕ ಮಂಜುನಾಥ ಹೆಗಡೆ ಕಂಚೀಮನೆ ಅವರನ್ನು ಸನ್ಮಾನಿಸಲಾಯಿತು.
ಕಲಾ ಭಾಸ್ಕರ ಸಂಸ್ಥೆ ಅಧ್ಯಕ್ಷ ಮಹಾಬಲೇಶ್ವರ ಭಟ್ಟ ಇಟಗಿ, ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಹಾಗೂ ನಾರಾಯಣ ಭಟ್ಟ ಹೊನ್ನಮ್ಮ ದೇವಸ್ಥಾನ ಕಾರ್ಯಕ್ರಮ ನಿರ್ವಹಿಸಿದರು.
ನಂತರ ಕಡಂದಲೆ ರಾಮರಾಯ ವಿರಚಿತ ‘ಹನುಮದ್ವಿಲಾಸ ರಾಮಾಂಜನೇಯ’ ಯಕ್ಷಗಾನ ಪ್ರರ್ಶನಗೊಂಡಿತು.
ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ಮಂಜುನಾಥ ಹೆಗಡೆ ಕಂಚಿಮನೆ, ನಾಗಭೂಷಣರಾವ್ ಕೇಡಲಸರ ಸಹಕರಿಸಿದರು.
ಪಾತ್ರಧಾರಿಗಳಾಗಿ ನಿರಂಜನ ಜಾಗನಳ್ಳಿ, ಷಣ್ಮುಖ ಗೌಡ ಬಿಳೆಗೋಡು, ಪ್ರಣವ ಭಟ್ಟ ಶಿರಳಗಿ, ಇಟಗಿ ಮಹಾಬಲೇಶ್ವರ, ನಿತಿನ್ ಹೆಗಡೆ ದಂಟಕಲ್,ಆದಿತ್ಯ ಹೆಗಡೆ ಹೊನ್ನೆಹದ್ದ, ಮಹಾಬಲೇಶ್ವರ ಗೌಡ ಹಾರೆಕೊಪ್ಪ ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.