More

  ಹೊರಟಿತು ಯಕ್ಷ ಪಯಣ: ಕರಾವಳಿಯಲ್ಲಿನ್ನು ಚೆಂಡೆ ಮದ್ದಳೆ ಕಲರವ

  ರಾಜೇಶ್ ಶೆಟ್ಟಿ ದೋಟ ಮಂಗಳೂರು

  ಕರಾವಳಿಯಲ್ಲಿ ಈ ಬಾರಿಯ ಯಕ್ಷಪಯಣಕ್ಕೆ ಮುನ್ನುಡಿ ಬರೆಯಲಾಗಿದೆ. ಇನ್ನು ಆರು ತಿಂಗಳು ನಾಡಿನೆಲ್ಲೆಡೆ ಚೆಂಡೆ, ಮದ್ದಳೆಗಳ ಸದ್ದು ಅನುರಣಿಸಲಿದೆ. ಕೆಲವೊಂದು ಮೇಳಗಳು ಈಗಾಗಲೇ ತಿರುಗಾಟ ಆರಂಭಿಸಿದ್ದು, ಈ ತಿಂಗಳಲ್ಲಿ ಬಹುತೇಕ ಎಲ್ಲ ಮೇಳಗಳು ಯಾನ ಆರಂಭಿಸಲಿವೆ.

  ತೆಂಕು-ಬಡಗಿನ ಸುಮಾರು 33 ವೃತ್ತಿಪರ ಮೇಳಗಳು ತಿರುಗಾಟಕ್ಕೆ ಅಣಿಯಾಗಿವೆ. ಎಲ್ಲ ಮೇಳಗಳೂ ಕಾಲಮಿತಿ ಪ್ರದರ್ಶನಕ್ಕೆ ಆದ್ಯತೆ ನೀಡಿದ್ದು, ಆಯೋಜಕರ ಅಪೇಕ್ಷೆ ಮೇರೆಗೆ ಪೂರ್ಣರಾತ್ರಿ ಪ್ರದರ್ಶನವನ್ನೂ ನೀಡಲಿದೆ.

  ಕಟೀಲಿನ ಆರೂ ಮೇಳಗಳು ಡಿ.7ರಂದು ದಿಗ್ವಿಜಯ ಆರಂಭಿಸಲಿದೆ. ಧರ್ಮಸ್ಥಳ ಮೇಳ ನ.19ರಿಂದ ಡಿ.1ರವರೆಗೆ ಕ್ಷೇತ್ರದಲ್ಲಿ ಸೇವೆಯಾಟ ಪ್ರದರ್ಶಿಸಿ ಡಿ.2ರಂದು ತಿರುಗಾಟ ಆರಂಭಿಸಲಿದೆ. ಹನುಮಗಿರಿ ಮೇಳ ನ.19ರಂದು ತಿರುಗಾಟ ಆರಂಭಿಸಲಿದೆ. ಪೌರಾಣಿಕ ಹಿನ್ನೆಲೆಯ ‘ಇಂದ್ರಪ್ರಸ್ಥ’ ಈ ಬಾರಿಯ ನೂತನ ಪ್ರಸಂಗ. ಪಾವಂಜೆ ಮೇಳ ನ.24ರಂದು ತಿರುಗಾಟಕ್ಕೆ ಮುನ್ನುಡಿ ಇಡಲಿದೆ.

  ಗೆಜ್ಜೆಗಿರಿ ಎರಡನೇ ವರ್ಷ: ಗೆಜ್ಜೆಗಿರಿಯ ಎರಡನೇ ವರ್ಷದ ಗೆಜ್ಜೆಸೇವೆ ನ.16ರಂದು ಶ್ರೀ ಕ್ಷೇತ್ರದಲ್ಲಿ ‘ಅಶ್ವಮೇಧ’ದೊಂದಿಗೆ ಆರಂಭಗೊಂಡಿದೆ. ‘ಮನ್ಮಥ ಸುಂದರಿ’, ‘ಗರೋಡಿದ ಸತ್ಯೊಲು’, ‘ಧರ್ಮನೆಲೆ ಧರ್ಮಚಾವಡಿ’, ‘ಪ್ರಚಂಡ ಮಹಿಷಾಸುರ’ ಪ್ರಸಂಗ ಪ್ರದರ್ಶಿಸಲಿದೆ.
  ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು ನ.20ರಂದು ತಿರುಗಾಟ ಆರಂಭಿಸಲಿದೆ. ಡಿ.ಮನೋಹರ ಕುಮಾರ್, ಬೋಳಾರ ಸುಬ್ಬಯ್ಯ ಶೆಟ್ಟಿ, ಕೃಷ್ಣ ರೈ ನೀರ್ಚಾಲು, ಸಂದೇಶ್ ಬಡಗಬೆಳ್ಳೂರು ಮೇಳದಲ್ಲಿದ್ದಾರೆ. ಮಿಜಾರು ತಿಮ್ಮಪ್ಪ, ಅಶ್ವಥ್ ಆಚಾರ್ಯ ಮೇಳಕ್ಕೆ ಸೇರ್ಪಡೆಗೊಂಡಿದ್ದಾರೆ. ಬಾಚಕೆರೆ ಮೇಳ ಈ ಬಾರಿ ‘ಶ್ರೀ ಬಾಚಕೆರೆ ಕ್ಷೇತ್ರ ಮಹಾತ್ಮೆ’, ‘ಬ್ರಹ್ಮ ಮುಗೇರೆರ್’, ‘ಗುಳಿಗ ಶಿವ ಗುಳಿಗ’, ‘ಬೆರ್ಮೆರ್ ನಾಗಬೆರ್ಮೆರ್’, ‘ಪಡುಮಲೆ ಕ್ಷೇತ್ರ ಮಹಾತ್ಮೆ’, ‘ಶ್ರೀ ಮಲೆತ ಬೊಲ್ಪು’ ಪ್ರಸಂಗ ಪ್ರದರ್ಶಿಸಲಿದೆ.

  See also  ಯಕ್ಷಗಾನವನ್ನು ಕಡೆಗಣಿಸಿದ ಸರ್ಕಾರಗಳು: ಅಕಾಡೆಮಿ ಅಧ್ಯಕ್ಷ ಪ್ರೊ.ಹೆಗಡೆ ಬೇಸರ

  ತುಳು ಪ್ರಸಂಗಗಳು: ಬೆಳ್ಳಿಹಬ್ಬ ಸಂಭ್ರಮದಲ್ಲಿರುವ ಸಸಿಹಿತ್ಲು ಮೇಳ ನ.24ರಂದು ತಿರುಗಾಟ ಆರಂಭಿಸಲಿದೆ. ಭಾಗವತರಾಗಿ ಹೆಬ್ರಿ ಗಣೇಶ್ ಕುಮಾರ್, ಧನಂಜಯ ಕೊಲ, ಚೆಂಡೆಯಲ್ಲಿ ಅಡೂರು ಲಕ್ಷ್ಮೀನಾರಾಯಣ ರಾವ್, ಮುಮ್ಮೇಳದಲ್ಲಿ ಸರಪಾಡಿ ಅಶೋಕ್ ಶೆಟ್ಟಿ, ಗುಡ್ಡಪ್ಪ ಸುವರ್ಣ ಪಂಜ, ಸುಂದರ ಬಂಗಾಡಿ, ರವಿಕುಮಾರ್ ಸುರತ್ಕಲ್, ಸಂತೋಷ್ ಕುಲಶೇಖರ ಮತ್ತಿತರರು ಇದ್ದಾರೆ. ‘ಅರ್ಧಸತ್ಯ’, ‘ಮಹಿಮೆದ ಮಾಣಿಕ್ಯ’, ‘ಶ್ರೀ ದೇವಿ ಮಹಿಮೆ’, ‘ಬೊಳ್ಳಿ ತೊಟ್ಟಿಲ್’ ಈ ಬಾರಿಯ ಕಥಾನಕ. ಬಪ್ಪನಾಡು ಮೇಳ ಈ ತಿಂಗಳಲ್ಲಿ ತಿರುಗಾಟ ಆರಂಭಿಸಲಿದ್ದು, ‘ನಾಡೂರ ನಾಗಬನ’, ‘ಶಿವದೂತ ಗುಳಿಗೆ’, ‘ಧರ್ಮದೈವ ಪಂಜುರ್ಲಿ’, ‘ನವಿಲೂರ ನಾಗಮಣಿ’, ‘ಸಿಂಧೂರ ಸಿರಿಗೌರಿ’, ‘ಪರಕೆದ ಪಲ್ಲಂಕಿ’ ಈ ಬಾರಿಯ ಪ್ರಸಂಗಗಳು. ದಿನೇಶ್ ಶೆಟ್ಟಿಗಾರ್ ಕೋಡಪದವು, ಸುಬ್ಬು ಸಂಟ್ಯಾರ್ ಮೇಳದಲ್ಲಿದ್ದಾರೆ.

  ಬಡಗುತಿಟ್ಟು: ಬಡಗಿನ ಸಾಲಿಗ್ರಾಮ ಮೇಳ 56ನೇ ವರ್ಷದ ನ.24ರಂದು ತಿರುಗಾಟ ಆರಂಭಿಸಲಿದೆ. ದೇವದಾಸ್ ಈಶ್ವರಮಂಗಲ ವಿರಚಿತ ‘ಸತ್ಯಂ ಶಿವಂ ಸುಂದರಂ’, ನಂದೀಶ್ ಶೆಟ್ಟಿ ಬಿಲ್ಲಾಡಿ ವಿರಚಿತ ‘ನೀಲ ಗಗನದೊಳು’ ನೂತನ ಕಥಾನಕ. ಮಂದಾರ್ತಿ ಐದೂ ಮೇಳಗಳ ತಿರುಗಾಟ ನ.18ರಂದು ಆರಂಭಗೊಳ್ಳಲಿದೆ. ಕಮಲಶಿಲೆ ಮೇಳ ನ.1ರಂದು ತಿರುಗಾಟ ಆರಂಭಿಸಿದೆ. ಹಿರಿಯಡ್ಕ ಮೇಳದ 16ನೇ ವರ್ಷದ ತಿರುಗಾಟ ಈಗಾಗಲೇ ಆರಂಭಗೊಂಡಿದೆ.

  ಬೋಳಾರ ಮೇಳ ಮರುಹುಟ್ಟು

  ಬೋಳಾರ ಹಳೆಕೋಟೆ ಶ್ರೀ ಮಾರಿಯಮ್ಮ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಡಿ.9ರಂದು ತಿರುಗಾಟ ಆರಂಭಿಸಲಿದೆ. 1940ರಲ್ಲಿ ತಿರುಗಾಟ ಸ್ಥಗಿತಗೊಳಿಸಿದ ಮೇಳ 83 ವರ್ಷಗಳ ಬಳಿಕ ಅದೇ ಹೆಸರಿನಿಂದ ಗೆಜ್ಜೆಸೇವೆ ನೀಡಲು ಮುಂದಾಗಿದೆ. ‘ಸಮರ ಸನಾತನಿ’, ‘ಶ್ರೀ ಬೋಳಾರ ಕ್ಷೇತ್ರ ಮಹಾತ್ಮೆ’, ‘ಛಲದಂಕ ಉತ್ತಂಕ’, ‘ಬಂಡಿ ದೈವ ಪಿಲ್ಚಂಡಿ’ ಪ್ರಸಂಗಗಳನ್ನು ಸಂಯೋಜನೆ ಮಾಡಲಾಗಿದೆ. ಹಿರಿಯ ಭಾಗವತ ನಾರಾಯಣ ಶಬರಾಯ, ಮುಮ್ಮೇಳದಲ್ಲಿ ಶಿವರಾಮ ಜೋಗಿ ಬಿ.ಸಿ ರೋಡ್, ಮಿಜಾರು ತಿಮ್ಮಪ್ಪ, ಅಪ್ಪುಕುಂಞಿ ಮಣಿಯಾಣಿ, ಬಾಲಕೃಷ್ಣ ಶೆಟ್ಟಿ ಮಂಗಲ್ಪಾಡಿ ಮತ್ತಿತರರು ಇರಲಿದ್ದಾರೆ.

  See also  ಹಂತ ಹಂತವಾಗಿ ಸ್ವಾಮಿನಾಥನ್ ವರದಿ ಜಾರಿ

  ಎರಡೂ ಮೇಳದಲ್ಲಿ!

  ಹಾಸ್ಯ ಕಲಾವಿದರಾದ ಮಿಜಾರು ತಿಮ್ಮಪ್ಪ ಅವರ ಹೆಸರು ಬೆಂಕಿನಾಥೇಶ್ವರ ಹಾಗೂ ಬೋಳಾರ ಮೇಳದಲ್ಲಿದೆ. ಕಡಬ ದಿನೇಶ್ ರೈ ಹೆಸರು ಗೆಜ್ಜೆಗಿರಿ ಹಾಗೂ ಬಾಚಕೆರೆ ಮೇಳದಲ್ಲಿದೆ.

  ಬಡಗಿನಲ್ಲಿ ಹೊಸ ಡೇರೆ ಮೇಳ

  ಬಡಗುತಿಟ್ಟಿನಲ್ಲಿ ಈ ಬಾರಿ ಶಿರಿಯಾರ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ಯಕ್ಷಗಾನ ಮಂಡಳಿ ನ.21ರಿಂದು ತಿರುಗಾಟ ಆರಂಭಿಸಲಿದೆ. ಜಲವಳ್ಳಿ ವಿದ್ಯಾಧರ ರಾವ್, ನೀಲ್ಕೊಡ ಶಂಕರ ಹೆಗಡೆ, ರಮೇಶ ಭಂಡಾರಿ, ಕೆಕ್ಕಾರ ಆನಂದ ಭಟ್, ರಾಘವ ಪಡಿಯಾರ ಮುಮ್ಮೇಳದಲ್ಲಿದ್ದು, ಹಿಮ್ಮೇಳದಲ್ಲಿ ಶಂಕರ ಭಟ್ ಬ್ರಹ್ಮೂರ, ಸಂತೋಷ ಕುಮಾರ ಆರ್ಡಿ, ಶಶಾಂಕ ಆಚಾರ್ಯ, ಸುಜನಕುಮಾರ ಹಾಲಾಡಿ ಮತ್ತಿತರರು ಇರಲಿದ್ದಾರೆ. ‘ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ’, ‘ಸಾಗರ ಸಂಗಮ’ ಪ್ರಸಂಗ ಪ್ರದರ್ಶಿಸಲಿದ್ದಾರೆ.

  ಕಳೆದ ಬಾರಿ ಕಾಲಮಿತಿ ಪ್ರದರ್ಶನಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಅಭೂತಪೂರ್ವವಾಗಿತ್ತು. ತಿರುಗಾಟ ಆರಂಭ ಕಲಾವಿದರಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಜೀವನೋಪಾಯಕ್ಕೆ ಬೇರೆ ವೃತ್ತಿಯನ್ನು ಅವಲಂಭಿಸಿದ್ದ ಕಲಾವಿದರಿಗೆ ತಿರುಗಾಟದಿಂದ ಆರ್ಥಿಕ ಚೈತನ್ಯ ದೊರೆಯಲಿದೆ.
  – ಗಿರೀಶ್ ಸಾಲ್ಯಾನ್
  ಕಟೀಲು ಮೇಳದ ಕಲಾವಿದ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts