ಈ ವರ್ಷದ ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಮಂಗಳ

ಮಂಗಳೂರು/ಕುಂದಾಪುರ: ಕರಾವಳಿ, ಮಲೆನಾಡು, ಅರೆಮಲೆನಾಡು ಭಾಗಗಳಲ್ಲಿ ದೀಪಾವಳಿಯಿಂದ ಈ ವೈಶಾಖದವರೆಗೆ ಯಕ್ಷಪ್ರಭೆ ಬೆಳಗಿದ ತೆಂಕು- ಬಡಗಿನ 40ರಷ್ಟು ಮೇಳಗಳ ಕಲಾವಿದರು ಗೆಜ್ಜೆ ಬಿಚ್ಚುವ ದಿನ ಸನಿಹ…

ಮೇ 25ರಂದೇ ಪತ್ತನಾಜೆ. ವೃಷಭ ಸಂಕ್ರಮಣದಿಂದ 10ನೇ ದಿನದಂದು ಸಾಂಪ್ರದಾಯಿಕವಾಗಿ ಗೆಜ್ಜೆ ಬಿಚ್ಚುವ ದಿನ. ಆದರೆ ಆಗಲೇ ಹನುಮಗಿರಿ, ಸಸಿಹಿತ್ಲು ಸಹಿತ ಕೆಲ ಮೇಳಗಳು ತಿರುಗಾಟವನ್ನು ಬೇಗನೆ ನಿಲ್ಲಿಸಿಯಾಗಿದೆ. ಇನ್ನೆರಡು ದಿನದಲ್ಲಿ ದೇಂತಡ್ಕ ಮೇಳವೂ ತಿರುಗಾಟ ನಿಲ್ಲಿಸುತ್ತಿದೆ. ಪ್ರಮುಖ ಮೇಳಗಳನ್ನು ಬಿಟ್ಟರೆ ಉಳಿದ ಹಲವು ಮೇಳಗಳಿಗೆ ಬೇಡಿಕೆ ಕಡಿಮೆ ಆಗಿದ್ದು, ಇದಕ್ಕೆ ಕಾರಣ ಎಂಬ ಮಾತು ಕೇಳಿಬರುತ್ತಿದೆ.
ಕರಾವಳಿಯಲ್ಲಿ ಪ್ರಮುಖವಾಗಿ ಸೇವೆಯಾಟಗಳನ್ನು ಆಡುವ ಕಟೀಲಿನ ಆರು ಮೇಳಗಳಲ್ಲಿ ಆರನೇ ಮತ್ತು ಮೂರನೇ ಮೇಳ ಈಗಾಗಲೇ 100ಕ್ಕೂ ಹೆಚ್ಚು ಶ್ರೀದೇವಿ ಮಹಾತ್ಮೆೃ ಆಡಿದ್ದಾಗಿದೆ. ಪತ್ತನಾಜೆಗೆ ಮೊದಲು ಎಲ್ಲ ಮೇಳಗಳೂ 100 ದೇವಿಮಹಾತ್ಯ್ಮೆ ಮೀರಲಿವೆ. ಹರಕೆ ಬಯಲಾಟಗಳಲ್ಲಿ ದೇವಿಮಹಾತ್ಮೆೃಗೆ ಅಗ್ರಸ್ಥಾನವಾದರೆ ಉಳಿದಂತೆ ಶ್ರೀದೇವಿ ಲಲಿತೋಪಾಖ್ಯಾನ, ಕಟೀಲು ಕ್ಷೇತ್ರ ಮಹಾತ್ಮೆೃ ನಂತರದ ಸ್ಥಾನದಲ್ಲಿ ಬರುತ್ತವೆ. ಕಟೀಲು ಮೇಳದಲ್ಲಿ ಕಲಾವಿದರ ಅದಲು ಬದಲು ಮಾಡುವ ಬೆಳವಣಿಗೆ ಈ ವರ್ಷವೂ ಮುಂದುವರಿದಿದೆ, ಭಾಗವತ ಪಟ್ಲ ಸತೀಶ್ ಶೆಟ್ಟಿ ಈ ಬಾರಿ ನಾಲ್ಕರಿಂದ 1ನೇ ಮೇಳಕ್ಕೆ ಬಂದಿದ್ದಾರೆ.

ರೈಸಿದ ತುಳು ಯಕ್ಷಗಾನ: ಮಂಗಳಾದೇವಿ ಮೇಳ, ಸುಂಕದಕಟ್ಟೆ ಮೇಳ, ಬಪ್ಪನಾಡು ಮೇಳ, ಸಸಿಹಿತ್ಲು ಮೇಳ ಮುಖ್ಯವಾಗಿ ತುಳು ಪ್ರಸಂಗಗಳಿಗೆ ಒತ್ತು ನೀಡುತ್ತಾ ಬಂದಿವೆ. ಈ ಬಾರಿಯೂ ತುಳು ಪ್ರಸಂಗಗಳು ತಮ್ಮದೇ ಪ್ರೇಕ್ಷಕ ವರ್ಗ ಹೊಂದಿದ್ದು ಜನಮೆಚ್ಚುಗೆಗೆ ಪಾತ್ರವಾಗಿವೆ. ಬನತಬಂಗಾರ್, ಬೊಳ್ಳಿದ ಬೊಲುಗಡೆ, ಪರಕೆದ ಪಿಂಗಾರ, ಗೆಜ್ಜೆದ ಪೂಜೆಯಂತಹ ಪ್ರಸಂಗಗಳು ಜನಪ್ರಿಯವಾಗಿವೆ.
ಕಟೀಲು ಮೇಳ, ಮಂದಾರ್ತಿ ಮೇಳ ಬಿಟ್ಟರೆ ಉಳಿದೆಲ್ಲ ಮೇಳಗಳು ಕಾಲಮಿತಿಯನ್ನೂ ಆಡಲು ಹಿಂದೆ ಮುಂದೆ ನೋಡಿಲ್ಲ. ಕೆಲ ಮೇಳಗಳು ಕಾಲಮಿತಿಯನ್ನೇ ನೆಚ್ಚಿಕೊಂಡರೆ ಇನ್ನು ಕೆಲವು ಕಾಲಮಿತಿ, ರಾತ್ರಿಪೂರ್ತಿ ಎರಡೂ ಶೈಲಿಗೂ ಒಗ್ಗಿಕೊಂಡಿವೆ. ಹಿರಿಯಡಕ ಮೇಳದವರು ಬಡಗು-ತೆಂಕು ಎರಡೂ ಶೈಲಿಯನ್ನು ಆಡಿದ್ದಾರೆ.

ಕಣ್ಮರೆಯಾದ ಕಲಾವಿದರು:  ಈ ಬಾರಿಯೂ ಹಲವು ಯಕ್ಷಕಲಾವಿದರು, ನಿವೃತ್ತರು, ಹವ್ಯಾಸಿಗಳು ನಿಧನರಾಗಿದ್ದಾರೆ. ಉಡುಗೋಡು ಚಂದ್ರಹಾಸ್ ಯಕ್ಷರ ಂಗದಲ್ಲೇ ಕುಸಿದುಬಿದ್ದು ಮೃತರಾದರು. ಸೌಕೂರು ಮೇಳದ ಯುವಕಲಾವಿದರಾದ ಪ್ರಸನ್ನ ಆಚಾರ್ಯ ಮತ್ತು ದಿನೇಶ್ ಮಡಿವಾಳ ಬೈಕ್ ಅಪಘಾತದಲ್ಲಿ ದುರ್ಮರಣವನ್ನಪ್ಪಿದ್ದು ಖೇದಕರ. ರವಿರಾಜ್ ಆಚಾರ್ಯ ಜನ್ಸಾಲೆ ಕಂಡ್ಲೂರಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದರು. ಇನ್ನು ಹಿರಿಯ ಭಾಗವತ ಅಗರಿ ರಘುರಾಮ ರಾವ್, ನೆಬ್ಬೂರು ನಾರಾಯಣ ಭಾಗವತರು, ಅನಂತರಾಮ ಬಂಗಾಡಿ, ಹಿರಿಯ ವೇಷಧಾರಿ ಜಲವಳ್ಳಿ ವೆಂಕಟೇಶ್ ರಾವ್ ತೀರಿಕೊಂಡಿದ್ದಾರೆ.

ಎಡನೀರು ಮೇಳ ಶುಭಂ:  ಒಳ್ಳೆಯ ಕಲಾವಿದರು, ಕಡಿಮೆ ವೀಳ್ಯವಿದ್ದ ಹೆಸರಾಂತ ಎಡನೀರು ಮೇಳ ಈ ವರ್ಷವೇ ಕೊನೇ ಎಂದು ಘೋಷಿಸಿದ್ದು, ಯಕ್ಷಪ್ರಿಯರಿಗೆ ಶಾಕಿಂಗ್ ನ್ಯೂಸ್. ಆದಾಯ ಕಡಿಮೆ ಎನ್ನುವ ಕಾರಣ ನೀಡಿ ಮೇಳವನ್ನು ನಿಲ್ಲಿಸಲಾಗುತ್ತಿದೆ.

ಮಾರಣಕಟ್ಟೆ ಮತ್ತೊಂದು ಮೇಳ:  ಮರಳು ತೆಗೆಯಲು ಪರವಾನಗಿ ಸಿಗದಿರುವುದು ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರಿಗಷ್ಟೇ ಸೀಮಿತವಾಗಿರದೆ ಯಕ್ಷಗಾನಕ್ಕೂ ಬಿಸಿ ಮುಟ್ಟಿಸಿದೆ! ಮೀನುಗಾರಿಕೆ ಹಿನ್ನಡೆ, ಮರಳು ಬರ ಆರ್ಥಿಕ ಸಂಕಷ್ಟಕ್ಕಷ್ಟೇ ಸೀಮಿತವಾಗಿರದೆ ಯಕ್ಷಗಾನ ಮೇಳಗಳ ಮೇಲೂ ಆಗಿರುವುದು ವಿಶೇಷ.
ಈ ವರ್ಷದ ತಿರುಗಾಟದಲ್ಲಿ ಯಕ್ಷಗಾನ ಮೇಳಗಳು ಸಿಹಿ ಕಹಿ ಎರಡನ್ನೂ ಉಂಡಿವೆ. ಒಂದು ಕಡೆ ಹಿರಿಯ ಹಾಗೂ ಕಿರಿಯ ಯಕ್ಷಗಾನ ಕಲಾವಿದರನ್ನು ಕಳೆದುಕೊಂಡರೆ, ಚುನಾವಣೆ ನೀತಿ ಸಂಹಿತೆ, ಮರಳು ವಹಿವಾಟು ಇಲ್ಲದಿರುವುದು ಯಕ್ಷಗಾನದ ಮೇಲೆ ಕರಿನೆರಳು ಬೀರಿದೆ. ಬಡಗುತಿಟ್ಟಿನ ಮೂರು ಮೇಳಗಳಿಗೆ ಒಟ್ಟು 250 ಬಯಲಾಟ ಸಿಕ್ಕಿರುವುದು ಮೂಡಿಸಿದ ಹೊಸ ಭರವಸೆ.
ಈ ವರ್ಷ ಮೂರು ಡೇರೆ ಮೇಳ ಹಾಗೂ ಕರಾವಳಿ ಮತ್ತು ಘಟ್ಟದ ಒಟ್ಟು 15 ಬಯಲಾಟ ಮೇಳಗಳು ತಿರುಗಾಟದ ಪರದೆ ಎಳೆಯಲು ಸಿದ್ಧವಾಗಿದ್ದು, ಮುಂದಿನ ವರ್ಷ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸೇವೆಗೆ ಮತ್ತೊಂದು ಮೇಳ ಸೇರಿಕೊಳ್ಳಲಿದೆ. ಹಾಗೆಯೇ ವಿದ್ಯಾಧರ ಜಲವಳ್ಳಿ ಕಲಾ ಬಳಗ ಮೇಳ ಸಮಯ ಮಿತಿಯಲ್ಲಿ ತಿರುಗಾಟ ಆರಂಭಿಸಲಿದೆ.

ಮಂದಾರ್ತಿ(5), ಮಾರಣಕಟ್ಟೆ(2), ಕಮಲಶಿಲೆ(2), ಸಿಗಂದೂರು, ಆಜ್ರಿ ಚೋಮನಮನೆ ಮೇಳ, ಹಾಲಾಡಿ, ಹಾಗೂ ಡೇರೆ ಮೇಳಗಳಾದ ಶ್ರೀ ಗುರುನಂರಸಿಂಹ ಯಕ್ಷಗಾನ ಮೇಳ ಸಾಲಿಗ್ರಾಮ, ಶ್ರೀ ಅನಂತಪದ್ಮನಾಭ ಮೇಳ ಪೆರ್ಡೂರು ಮತ್ತು ವಿದ್ಯಾಧರ ಜಲವಳ್ಳಿ ಯಕ್ಷಬಳಗ ಸೇರಿ, ಧರ್ಮಸ್ಥಳ ಮೇಳದ ಆಟವಲ್ಲದೆ ತೆಂಕುತಿಟ್ಟಿನ ಬಯಲಾಟ ಮೇಳಗಳ ಆಟ ಕೂಡ ಜಿಲ್ಲೆಯಲ್ಲಿ ನಡೆದಿದೆ. ಬಯಲಾಟ ಮೇಳಗಳು ಹರಕೆ ರೂಪದಲ್ಲಿ ನಡೆದರೆ, ಡೇರೆ ಮೇಳಗಳೂ ಹೆಚ್ಚಿನ ಹರಕೆ ಸೇವೆ ಸಲ್ಲಿಸಿವೆ.

ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಆಗಿಲ್ಲ. ಚುನಾವಣೆ ನೀತಿ ಸಂಹಿತೆ ಯಕ್ಷಗಾನ ಪ್ರದರ್ಶನಕ್ಕೆ ಸಮಸ್ಯೆ ಆಗುತ್ತಿದೆ ಎನ್ನುವ ಸುದ್ದಿಯಾಗಿದ್ದು ಬಿಟ್ಟರೆ ಪ್ರದರ್ಶನಕ್ಕೆ ಏನೂ ಸಮಸ್ಯೆ ಆಗಲಿಲ್ಲ. ಬೇರೆ ಬೇರೆ ಕಾರಣದಿಂದ ಕಳೆದ ವರ್ಷಕ್ಕಿಂತ ಈ ವರ್ಷ ಏಳೆಂಟು ಆಟ ಕಡಿಮೆ ಮಾಡಲಾಗಿದ್ದು, ಮೀನುಗಾರಿಕೆ ಹಿನ್ನೆಡೆ ಹಾಗೂ ಮರಳು ಸಿಗದೆ ಕನ್ಸ್‌ಸ್ಟ್ರಕ್ಷನ್ ಇಲ್ಲದೆ ಆರ್ಥಿಕ ರೊಟೇಶನ್ ಆಗದಿರುವುದು ಯಕ್ಷಗಾನದ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರಿದೆ.
– ಕಿಶನ್ ಹೆಗ್ಡೆ ಪಳ್ಳಿ, ಯಜಮಾನರು, ಸಾಲಿಗ್ರಾಮ ಮೇಳ