ಮುಂದಿನ ವಾರದಿಂದ ಚೆಂಡೆ ಮದ್ದಳೆ ಝೇಂಕಾರ!

-ಹರೀಶ್ ಮೋಟುಕಾನ, ಮಂಗಳೂರು
ಕರಾವಳಿಯಲ್ಲಿ ಪತ್ತನಾಜೆ ಬಳಿಕ ತಿರುಗಾಟ ನಿಲ್ಲಿಸಿದ್ದ ಯಕ್ಷಗಾನ ಮೇಳಗಳು ದೀಪಾವಳಿ ಬಳಿಕ ಹೊಸ ಹುರುಪಿನೊಂದಿಗೆ ಯಕ್ಷಪ್ರೇಮಿಗಳನ್ನು ರಂಜಿಸಲು ಸಜ್ಜಾಗಿವೆ. ಮುಂದಿನ ವಾರದಿಂದ ಶುರುವಾಗಿ ಸುಮಾರು 180 ದಿನಗಳಲ್ಲಿ ಪ್ರತಿರಾತ್ರಿ ಭಾಗವತರ ಗಣಪತಿ ಸ್ತುತಿಯೊಂದಿಗೆ ಚೆಂಡೆ, ಮದ್ದಳೆಯ ಝೇಂಕಾರ ಅನುರಣಿಸಲಿದೆ.
ವೃತ್ತಿಪರ ಮೇಳಗಳು ಹೊಸ ಪ್ರಸಂಗ, ಕಲಾವಿದರು, ವೇಷಭೂಷಣ, ರಂಗಸ್ಥಳದೊಂದಿಗೆ ತಿರುಗಾಟಕ್ಕೆ ಸಿದ್ಧತೆ ನಡೆಸಿವೆ. ದೇವಸ್ಥಾನಗಳಿಂದ ಹೊರಡುವ ಹರಕೆ ಮೇಳಗಳೂ ಪೌರಾಣಿಕ ಪ್ರಸಂಗದೊಂದಿಗೆ ಯಕ್ಷರಾತ್ರಿ ಅನಾವರಣಗೊಳಿಸಲು ಅಣಿಯಾಗಿವೆ. ದ.ಕ, ಉಡುಪಿ, ಉ.ಕ, ಕಾಸರಗೋಡು ಜಿಲ್ಲೆಗಳಲ್ಲಿ 45ಕ್ಕೂ ಅಧಿಕ ಯಕ್ಷಗಾನ ಮೇಳಗಳು ಮುಂದಿನ ಆರು ತಿಂಗಳ ಕಾಲ ತಿರುಗಾಟ ನಡೆಸಲಿವೆ. ಕಾಲಮಿತಿ, ರಾತ್ರಿಯಿಡೀ ಆಟಕ್ಕೆ ಮೇಳಗಳ ಕಲಾವಿದರು ಸಿದ್ಧರಾಗಿದ್ದಾರೆ.
ತೆಂಕುತಿಟ್ಟಿನಲ್ಲಿ ಈ ಸಲವೂ ಪೂರ್ಣಪ್ರಮಾಣದ ಟೆಂಟ್ ಮೇಳ ಇಲ್ಲ. ದೇವಸ್ಥಾನಗಳಿಂದ ಹೊರಡುವ ಬಯಲಾಟ ಮತ್ತು ಹರಕೆ ಮೇಳಗಳದ್ದೇ ಇಲ್ಲಿ ಪ್ರಾಬಲ್ಯ. ಬಡಗಿನಲ್ಲಿ ಹರಕೆ ಮೇಳಗಳ ಜತೆ ಪೆರ್ಡೂರು ಮತ್ತು ಸಾಲಿಗ್ರಾಮ ಟೆಂಟ್ ಮೇಳಗಳಾಗಿ ಹೊಸ ಸಾಮಾಜಿಕ, ಕಾಲ್ಪನಿಕ ಪ್ರಸಂಗದೊಂದಿಗೆ ಹೊರಡಲಿವೆ.

ಹೊಸ ಪ್ರಸಂಗಗಳು:  ಕೆಲವು ಯಕ್ಷಗಾನ ಮೇಳಗಳು ಪ್ರೇಕ್ಷಕರಿಗೆ ಹೊಸತನ್ನು ನೀಡಲು ಮುಂದಾಗಿವೆ. ಈ ನಿಟ್ಟಿನಲ್ಲಿ ಪ್ರೇಕ್ಷಕ ವರ್ಗವನ್ನು ಸೆಳೆಯುವ ಪ್ರಸಂಗಗಳನ್ನು ಸಿದ್ಧಪಡಿಸಿಕೊಂಡಿವೆ. ಕಲಾವಿದರು ಯಕ್ಷ ರಸದೌತಣ ಉಣಬಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹನುಮಗಿರಿ ಮೇಳ ಈ ವರ್ಷ ತಾರಾನಾಥ ವರ್ಕಾಡಿ ವಿರಚಿತ ‘ಮಾಯಾ ವಿಹಾರಿ’ ಪ್ರಸಂಗ ಪ್ರದರ್ಶನಕ್ಕೆ ಸಜ್ಜಾಗಿದೆ. ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸರಪಾಡಿ ಮೇಳ ಪ್ರಶಾಂತ್ ಸಿ.ಕೆ.ವಿರಚಿತ ‘ಸತ್ಯೊದ ಪುರ್ಪ’, ಸುಬ್ಬು ಸಂಟ್ಯಾರು ವಿರಚಿತ ‘ಬೂಡುದ ಬಂಗಾರ, ಉದಯ ಕುಮಾರ್ ಕುಂಜತ್ತೂರು ವಿರಚಿತ ‘ಕಾನದ ಉಳ್ಳಾಲ್ದಿ’ ಪ್ರದರ್ಶನ ನೀಡಲಿದೆ.
ಬೆಂಕಿನಾಥೇಶ್ವರ ಮೇಳದಲ್ಲಿ ಈ ವರ್ಷ ನಾಲ್ಕು ಹೊಸ ಪ್ರಸಂಗಗಳ ಇರಲಿವೆ. ವಿಜಿತ್ ಕುಮಾರ್ ಆಕಾಶಭವನ ವಿರಚಿತ ‘ಶ್ರೀ ದೇವಿ ಅಗ್ನಿ ಕಲ್ಲುರ್ಟಿ’ ಹಾಗೂ ‘ಗುರು ಪುಣ್ಣಮೆ’, ಸುರೇಶ್ ಕುಲಾಲ್ ಅಂಡಿಗದ್ದೆ ವಿರಚಿತ ‘ಮಹಿಮೆದ ಮಲೆ ಜುಮಾದಿ’ ಹಾಗೂ ಉದಯ ಕುಂಜತ್ತೂರು ವಿರಚಿತ ‘ಬಂಡಿದ ಪಿಲಿಚಂಡಿ’ ಪ್ರಸಂಗಗಳನ್ನು ಆಡಿ ತೋರಿಸಲಿದೆ. ಸಸಿಹಿತ್ಲು ಮೇಳದ ಕಲಾವಿದರು ಈ ವರ್ಷ ಎಂ.ಕೆ.ರಮೇಶ್ ಆಚಾರ್ಯ ವಿರಚಿತ ‘ಛತ್ರಪತಿ’ ಎನ್ನುವ ನೂತನ ಪ್ರಸಂಗಕ್ಕೆ ಬಣ್ಣಹಚ್ಚಲಿದ್ದಾರೆ.
ಬಡಗು ತಿಟ್ಟಿನಲ್ಲಿ ಶ್ರೀ ಹಟ್ಟಿಯಂಗಡಿ ಮೇಳ ‘ಶ್ರೀ ಹಟ್ಟಿಯಂಗಡಿ ಕ್ಷೇತ್ರ ಮಹಾತ್ಮೆ’, ‘ಮಂತ್ರ ಮಯೂರಿ’, ‘ವರ್ಣ ನಿರ್ಯಾಣ’ ‘ಕಚ್ಚೂರು ಮಾಲ್ತಿ ದೇವಿ ಮಹಾತ್ಮೆ’, ಸಾಲಿಗ್ರಾಮ ಮೇಳ ‘ಕಸ್ತೂರಿ ತಿಲಕ’, ‘ಚಕ್ರ ಪೌರ್ಣಮಿ’, ‘ಕೃಷ್ಣ ದಾಸಿ’, ‘ದ್ರುವ ಸಾರಿಕೆ’, ಪೆರ್ಡೂರು ಮೇಳದಿಂದ ‘ಶತಮಾನಂ ಭವತಿ’, ‘ಪೂರ್ವಿ ಕಲ್ಯಾಣ’ ‘ಚಂದ್ರಲೇಖ’ ಹೊಸ ಪ್ರಸಂಗಗಳನ್ನು ಪ್ರದರ್ಶಿಸಲಿದೆ.

ಕಟೀಲು ಬುಕ್ಕಿಂಗ್‌ಗೆ 25 ವರ್ಷ !:  ಮುಂದಿನ ಪತ್ತನಾಜೆ ತನಕ ಕಟೀಲಿನ ಆರು ಮೇಳಗಳು ಶ್ರೀದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ ಸಹಿತ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸಲಿವೆ. 10 ಸಾವಿರಕ್ಕೂ ಅಧಿಕ ಆಟ ಬುಕ್ಕಿಂಗ್ ಆಗಿವೆ. ಸೇವಾದಾರರು ಈಗ ಬುಕ್ಕಿಂಗ್ ಮಾಡಿದರೆ ಆಟ ಆಡಿಸಲು 25 ವರ್ಷ ಕಾಯಬೇಕು. ಬಡಗಿನ ಮಂದಾರ್ತಿಯಲ್ಲಿ ಐದು ಮೇಳಗಳಿದ್ದು, ಇಲ್ಲಿಯೂ ಹಲವು ವರ್ಷಗಳಿಗೆ ಆಟ ಬುಕ್ಕಿಂಗ್ ಆಗಿವೆ.

ತಿರುಗಾಟ ಯಾವಾಗ ಆರಂಭ?:  ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳು ಡಿ.2ರಂದು ಸೇವೆಯಾಟದೊಂದಿಗೆ ಈ ಬಾರಿಯ ತಿರುಗಾಟ ಆರಂಭಿಸಲಿದೆ. ಧರ್ಮಸ್ಥಳ ಮೇಳ ನ.14ರಂದು ಸೇವೆಯಾಟದೊಂದಿಗೆ ಹೊರಡಲಿದೆ. ಹನುಮಗಿರಿ ಮೇಳ 21ರಂದು ಸೇವೆಯಾಟದೊಂದಿಗೆ ಹೊರಡಲಿದೆ. ಕಳವಾರು ಶ್ರೀ ಬೆಂಕಿನಾಥೇಶ್ವರ ಮೇಳ 27, ಬಾಚಕೆರೆ ಮೇಳ 26ರಂದು ಹೊರಡಲಿದೆ. ಬಡಗಿನ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದ್ದು 19ರಿಂದ ತಿರುಗಾಟ ಶುರು. ಪೆರ್ಡೂರು ಮೇಳ 12ರಂದು ತಿರುಗಾಟ ಆರಂಭಿಸಲಿದೆ. ಸಾಲಿಗ್ರಾಮ ಮೇಳದ ತಿರುಗಾಟ 15ರಂದು ಆರಂಭ. ಕಮಲಶಿಲೆ ಮೇಳ 17, ಆಜ್ರಿ ಮೇಳ 17, ಮಾರಣಕಟ್ಟೆ ಮೇಳ 18, ಹಾಲಾಡಿ ಮೇಳ 26, ಸೌಕೂರು ಮೇಳ 19, ಅಮೃತೇಶ್ವರಿ ಮೇಳ 17, ಹಟ್ಟಿಯಂಗಡಿ ಮೇಳ 11ರಂದು ತಿರುಗಾಟ ಆರಂಭಿಸಲಿವೆ.