ಉತ್ತರಕನ್ನಡ: ಇತ್ತೀಚೆಗೆ ಯಕ್ಷಗಾನ ಕಲಾವಿದರಿಬ್ಬರು ವೇಷ ಧರಿಸಿಕೊಂಡೇ ಸರ್ವರ್ ಥರ ಹೋಟೆಲ್ನಲ್ಲಿ ಮಸಾಲೆದೋಸೆ ನೀಡಿರುವ ವಿಡಿಯೋ ವೈರಲ್ ಆಗಿರುವುದು ಯಕ್ಷಗಾನಪ್ರಿಯರಲ್ಲಿ ಅನೇಕರಿಗೆ ಗೊತ್ತಿರುವಂಥ ವಿಚಾರವೇ. ಇದೀಗ ಅದೇ ಮಸಾಲೆದೋಸೆ ಅರ್ಥಾತ್ ಆ ಪ್ರಕರಣ ಮತ್ತೆ ಚರ್ಚೆಯ ರೂಪದಲ್ಲಿ ಮುನ್ನೆಲೆಗೆ ಬಂದಿದೆ. ಏಕೆಂದರೆ ಹಾಗೆ ವೇಷ ಧರಿಸಿಕೊಂಡು ಹೋಟೆಲ್ನಲ್ಲಿ ದೋಸೆ ನೀಡಿದ್ದ ಕಲಾವಿದರಿಬ್ಬರು ಆ ಕುರಿತು ಮಾತನಾಡಿದ್ದಾರೆ. ಪ್ರಕರಣದ ಹಿನ್ನೆಲೆಯನ್ನು ವಿವರಿಸಿರುವ ಅವರು ಅದಕ್ಕೆ ಸಂಬಂಧಿಸಿದಂತೆ ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಜೀವಾವಧಿ ಶಿಕ್ಷೆಗೊಳಗಾಗಿದ್ದವ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿ; 3 ವರ್ಷಗಳ ಕಾಲ ಸಿಗದೇ ಇರಲು ಹೀಗೆ ಮಾಡಿದ್ದ…
ಅಂದು ಹೋಟೆಲ್ನಲ್ಲಿ ವೇಷ ಧರಿಸಿ ಮಸಾಲೆದೋಸೆ ನೀಡಿದ್ದ ಆ ಕಲಾವಿದರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದವರು. ಅವರಲ್ಲಿ ಒಬ್ಬರು ಭಾಸ್ಕರ ಗಾಂವ್ಕರ ಬಿದ್ರೆಮನೆ ಹಾಗೂ ಇನ್ನೊಬ್ಬರು ಸದಾಶಿವ ಭಟ್ಟ ಮಳವಳ್ಳಿ. ಇವರಿಬ್ಬರು ಈ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಹೋಟೆಲೊಂದರಲ್ಲಿ ಯಕ್ಷಗಾನ ವೇಷ ಧರಿಸಿ ಸರ್ವರ್ ರೀತಿಯಲ್ಲಿ ಮಸಾಲೆದೋಸೆಯನ್ನು ನೀಡಿದ್ದರು. ಇದರ ವಿಡಿಯೋ ವೈರಲ್ ಆಗಿದ್ದು, ವೇಷ ಹಾಕಿಕೊಂಡು ಯಕ್ಷಗಾನ ಕಲಾವಿದರು ಹೀಗೆ ಮಸಾಲೆ ದೋಸೆ ನೀಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಮಹಾರಾಷ್ಟ್ರದ ನಾಗ್ಪುರದಲ್ಲಿ ನಾವು ಯಕ್ಷಗಾನ ನೃತ್ಯ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದೆವು. ಅದೇ ವೇಳೆ ಕಾರ್ಯಕ್ರಮ ಆಯೋಜಕರ ಹೋಟೆಲ್ ಉದ್ಘಾಟನೆಯೂ ಇತ್ತು. ಆಯೋಜಕರು ಗೌರವಪೂರ್ವಕವಾಗಿ ಮಸಾಲೆದೋಸೆಯನ್ನು ನಮ್ಮಿಂದ ಅತಿಥಿಗಳಿಗೆ ಕೊಟ್ಟು ಹೋಟೆಲ್ ಉದ್ಘಾಟಿಸಿದ್ದಾರೆ. ಕಲೆ ಮತ್ತು ಕಲಾವಿದರನ್ನು ಗೌರವದಿಂದಲೇ ಕಂಡಿದ್ದಾರೆ. ಹೀಗೆ ದೋಸೆ ನೀಡುವಂತಾಗಿದ್ದು ಅಚಾತುರ್ಯವೇ ಹೊರತು ಪೂರ್ವನಿಯೋಜಿತವಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಅಲ್ಲದೆ, ಇದರಿಂದ ಯಕ್ಷಗಾನ ಅಭಿಮಾನಿಗಳಿಗೆ ಬೇಸರವಾಗಿದ್ದಲ್ಲಿ ವಿಷಾದಿಸುತ್ತೇವೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಯಾವ ಗುಂಪಿನ ರಕ್ತದವರಿಗೆ ಕೋವಿಡ್ ಸೋಂಕು ತಗುಲುವ ಸಾಧ್ಯತೆ ಅಧಿಕ?; ಇಲ್ಲಿದೆ ನೋಡಿ ಮಾಹಿತಿ…
ವೈರಲ್ ಆದ ವಿಡಿಯೋ ನೋಡಿ ಪೂರ್ವಾಪರ ವಿಚಾರಿಸದೆ ಅನಗತ್ಯವಾಗಿ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಿಷಯ ಅರಿಯದೆ ಈ ರೀತಿ ತೇಜೋವಧೆಗೆ ಮುಂದಾಗಿರುವುದು ಸರಿಯಲ್ಲ ಎಂದಿರುವ ಈ ಕಲಾವಿದರು, ಯಕ್ಷಗಾನದಲ್ಲಿ ಅಪಸವ್ಯಗಳು ಹೊಸದೇನಲ್ಲ. ಲುಂಗಿ ಡಾನ್ಸ್, ಪಾಶ್ಚಾತ್ಯ ಕುಸ್ತಿ, ಸಿನಿಮಾ ಹಾಡು, ಕೋಳಿ ಅಂಕ ಇತ್ಯಾದಿ ಯಕ್ಷಗಾನೇತರವಾದ ವಿಷಯಗಳು ಯಕ್ಷರಂಗಕ್ಕೆ ಬಂದುಹೋಗಿವೆ. ಅನೇಕ ಜಾಹೀರಾತು ಮತ್ತಿತರೆಡೆ ಯಕ್ಷಗಾನ ಬಳಸಿಕೊಳ್ಳಲಾಗುತ್ತಿದೆ. ಆದರೆ ಆ ವಿಷಯಗಳ ಕುರಿತು ಯಾರೂ ಚಕಾರವೆತ್ತುತ್ತಿಲ್ಲ ಎಂದು ತಮ್ಮ ಬೇಸರ ಹೊರಹಾಕಿದ್ದಾರೆ.
ಯಕ್ಷಗಾನದಲ್ಲಿ ಯಾರು, ಏನೇ ತಪ್ಪು ಮಾಡಿದರೂ ಭೇದ-ಭಾವವಿಲ್ಲದೆ ಚರ್ಚಿಸಿ ನಿರ್ಣಯ ನೀಡಬೇಕು. ಯಕ್ಷಗಾನ ಅಕಾಡೆಮಿಯಿಂದ ಅಥವಾ ಪ್ರಾಜ್ಞರಿಂದ ನಿರ್ದಿಷ್ಟವಾದ ಚೌಕಟ್ಟು ನಿರ್ಮಿಸುವ ಅಗತ್ಯವಿದೆ. ಮುಂದೆ ಯಕ್ಷಗಾನದಲ್ಲಿ ಅಪಸವ್ಯಗಳು ನಡೆಯದಂತೆ ಕಟ್ಟುನಿಟ್ಟಿನ ಚೌಕಟ್ಟು ರೂಪಿಸಲು ಈ ಮಸಾಲೆದೋಸೆ ಪ್ರಕರಣವೇ ನಾಂದಿಯಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.