ದೇಶದ ಸಂಸ್ಕೃತಿ, ಆಚಾರವನ್ನು ಪ್ರೀತಿಸಿ

ಶೃಂಗೇರಿ: ಸಂಸ್ಕೃತಿ ಎಂದರೆ ಸೇವಾ ಭಾವ. ಈ ಇಚ್ಛಾಶಕ್ತಿಯನ್ನು ಯುವಪೀಳಿಗೆ ಬೆಳೆಸಿಕೊಳ್ಳಬೇಕು. ದೇಶದ ಜನತೆ, ಸಂಸ್ಕೃತಿ, ಆಚಾರಗಳನ್ನು ನಾವು ಪ್ರೀತಿಸಬೇಕು ಎಂದು ಯಕ್ಷಗಾನ ಕಲಾವಿದ ಜನಾರ್ದನ ಮಂಡಗಾರು ಹೇಳಿದರು.

ಶೃಂಗೇರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೂರ್ವಜರು ನಮಗಾಗಿ ಸಾಕಷ್ಟು ಮೌಲ್ಯಗಳನ್ನು ಬಿಟ್ಟುಹೋಗಿದ್ದಾರೆ. ಅವುಗಳಲ್ಲಿ ಒಂದಾದ ಪ್ರಾಚೀನವಾದ ಭಾರತೀಯ ಸಂಸ್ಕೃತಿ ಬಗ್ಗೆ ಶ್ರದ್ಧೆಯಿರಬೇಕು. ನಮಗೆ ನಾವೇ ರೋಲ್ ಮಾಡೆಲ್ ಆಗಬೇಕು ಎಂದು ತಿಳಿಸಿದರು.

ಹುಡುಗಾಟದ ಬದುಕು ವ್ಯರ್ಥ. ಹುಡುಕಾಟದ ಬದುಕು ಸಾರ್ಥಕ. ಹಾಗಾಗಿ ಯುವಕರು ಹಿಂಸಾತ್ಮಕ ಚಟುವಟಿಕೆಯಿಂದ ದೂರವಿದ್ದು, ಸಾಹಿತ್ಯಕ ಬದುಕನ್ನು ತಮ್ಮದಾಗಿಸಿಕೊಂಡು ಜ್ಞಾನರ್ಜನೆ ಮಾಡಿಕೊಳ್ಳಬೇಕು. ಇಂದಿನ ಬಹಳಷ್ಟು ಯುವಕರು ಹಳ್ಳಿಯ ನೆಮ್ಮದಿ ಕೃಷಿ ಬದುಕಿನಿಂದ ದೂರವಾಗುತ್ತಿದ್ದಾರೆ. ಆಧುನಿಕತೆಯ ವ್ಯಾಮೋಹದಿಂದ ಹೊರಬಂದು ಗ್ರಾಮೀಣ ಬದುಕನ್ನು ಪ್ರೀತಿಸುವಂತೆ ಸಲಹೆ ನೀಡಿದರು.

ರಾಜೀವ್ ಗಾಂಧಿ ಪರಿಸರದ ಪ್ರಾಚಾರ್ಯ ಸಚ್ಚಿದಾನಂದ ಉಡುಪ ಮಾತನಾಡಿ, ಶಿಕ್ಷಣ ಎಂದರೆ ವಿಷಯಗಳ ಅಧ್ಯಯನ. ಸೃಷ್ಟಿಯ ಜೀವಿಗಳಲ್ಲಿ ಮಾನವ ಅತಿ ಶ್ರೇಷ್ಠ. ಸಮಾಜದಲ್ಲಿ ಗುರುಗಳಿಗೆ ವಿಶೇಷ ಸ್ಥಾನವಿದೆ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತೀರ್ಣಗೊಂಡವರು ಜೀವನದಲ್ಲೂ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಯುವಶಕ್ತಿ ದೇಶದ ಸಂಸ್ಕೃತಿ ಉಳಿಸಿ, ದೇಶಭಕ್ತಿ ಮೆರೆಯಬೇಕು ಎಂದು ಹೇಳಿದರು.