ಯಕ್ಷರಂಗದ ‘ದಶಾವತಾರಿ’ಗೆ ಶ್ರೇಷ್ಠ ಕಿರೀಟ

ಯಕ್ಷಗುರು ಸಂಜೀವಗೆ ಪಾರ್ತಿಸುಬ್ಬ ಪ್ರಶಸ್ತಿ | ಕಲಾಸೇವಕನಿಗೆ ಪ್ರತಿಷ್ಠಿತ ಗೌರವ

ಪ್ರಶಾಂತ ಭಾಗ್ವತ, ಉಡುಪಿ
ಯಕ್ಷಲೋಕದ ಅಪ್ರತಿಮ ಪ್ರತಿಭೆ, ಹಲವು ದಾಖಲೆಗಳ ಸರದಾರ, ವಿದೇಶದಲ್ಲೂ ಯಕ್ಷಗಾನ ಕಲೆ ಬಿತ್ತರಿಸಿದ, ಪ್ರಯೋಗಶೀಲ ಕಲಾವಿದರೂ ಆದ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಗುರು ಸುವರ್ಣ ಎಂದೇ ಕರೆಯಲ್ಪಡುವ ಸಂಜೀವ ಅವರು, ಯಕ್ಷಗಾನದ ಹಿಮ್ಮೇಳ ಹಾಗೂ ಮುಮ್ಮೇಳ ಎರಡರಲ್ಲೂ ಎತ್ತಿದ ಕೈ. ಯಕ್ಷಗಾನದ ಎಲ್ಲ ಪ್ರಕಾರದ ಪಾತ್ರಗಳನ್ನೂ ನಿರ್ವಹಿಸಿರುವ ಅವರು ದಶಾವತಾರಿ ಎಂಬ ಖ್ಯಾತಿಯನ್ನೂ ಗಳಿಸಿದವರು.

UDP-14-4A-Sanjeev

ಯಕ್ಷ ಶಿಕ್ಷಣ

1955ರ ಸೆ. 12ರಂದು ಉಡುಪಿ ತಾಲೂಕಿನ ಬನ್ನಂಜೆ ಸಮೀಪದ ಮೂಡನಿಡಂಬೂರು ಗ್ರಾಮದಲ್ಲಿ ತಂದೆ ಸೂರು ಪೂಜಾರಿ, ತಾಯಿ ಸೀತು ಪೂಜಾರ್ತಿ ಅವರ ಕೊನೆಯ ಮಗನಾಗಿ ಜನಿಸಿದರು. ಪ್ರಾಥಮಿಕ ಯಕ್ಷ ಶಿಕ್ಷಣವನ್ನು ಭಾಗವತ ಗುಂಡಿಬೈಲು ನಾರಾಯಣ ಶೆಟ್ಟಿ, ಮೆಟ್ಟಲ್​ ಕೃಷ್ಣಯ್ಯ ಶೆಟ್ಟಿ ಮತ್ತು ಮಾರ್ಗೋಳಿ ಗೋವಿಂದ ಸೇರಿಗಾರ್​ ಅವರಿಂದ ಕಲಿತರು. 1971-74ರ ವರೆಗೆ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನದ ಪ್ರತಿಯೊಂದು ಅಂಗವನ್ನೂ ಕಲಿತರು.

ಯಕ್ಷ ಪ್ರಾಂಶುಪಾಲ

ಸಾಲಿಗ್ರಾಮ, ಹಿರಿಯಡ್ಕ, ಗೋಳಿಗರಡಿ ಮೇಳಗಳಲ್ಲಿ ವಿವಿಧ ವೇಷಧಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 1982ರಲ್ಲಿ ಡಾ. ಶಿವರಾಮ ಕಾರಂತ ನಿರ್ದೇಶನದ ಯಕ್ಷಗಾನ ಕೇಂದ್ರದ ವ್ಯವಸಾಯಿ ಮೇಳ ಯಕ್ಷರಂಗಕ್ಕೆ ಸೇರ್ಪಡೆಯಾದರು. 1984ರಲ್ಲಿ ಯಕ್ಷಗಾನ ಕೇಂದ್ರದ ಗುರುಗಳಾಗಿ ನೇಮಕಗೊಂಡರು. 2006ರಿಂದ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಲಾವಿದನ ವಿಶೇಷತೆ

ಸಂಸ್ಕೃತದಲ್ಲಿ ಯಕ್ಷಗಾನ ಪ್ರಯೋಗ, ಮರಾಠಿ ರಂಗಭೂಮಿಯಲ್ಲಿ ಯಕ್ಷಗಾನ ಸಂಯೋಜನೆ, ಹೊಸ್ತೋಟ ಮಂಜುನಾಥ ಭಾಗವತರ ಚಿತ್ರಪಟ ರಾಮಾಯಣ ಪ್ರಸಂಗ ಪ್ರದರ್ಶನ, ಹಿಂದಿಯಲ್ಲಿ ಯಕ್ಷಗಾನ ರೂಪಕ, ಷೇಕ್ಸ್​ ಪೀಯರ್​ನ ಮ್ಯಾಕ್​ ಬೆತ್​ ನಾಟಕಕ್ಕೆ ನೃತ್ಯ ನಿರ್ದೇಶನ, ನ್ಯೂಯಾರ್ಕ್​ನಲ್ಲಿ ಭಗವದ್ಗೀತೆ ರೂಪಕದ ನಿರ್ದೇಶನ, ಲಂಡನ್​ನ 42 ಶಾಲೆಗಳಲ್ಲಿ ಕಲೆ, ಸಂಗೀತ, ಸಂಸ್ಕೃತಿ, ನೃತ್ಯ ಅಭಿನಯದ ತರಬೇತಿ ನೀಡಿದ್ದಾರೆ. ಭರತನಾಟ್ಯಂ, ಕೂಡಿಯಾಟ್ಟಂ, ಯೋಗ ಕಲಾಭ್ಯಾಸದಲ್ಲೂ ಪರಿಣತರು.

UDP-14-4-Sanjeev
ಯಕ್ಷಗಾನ ತರಬೇತಿ ನೀಡುತ್ತಿರುವ ಸಂಜೀವ ಸುವರ್ಣ.

ಪ್ರಶಸ್ತಿಗಳು

2010ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2020ರಲ್ಲಿ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಹಲವಾರು ಜಿಲ್ಲಾ ಮಟ್ಟದ ಪ್ರಶಸ್ತಿಗಳೂ ಲಭಿಸಿದೆ.

ಕಷ್ಟಕ್ಕೆ ಮಿಡಿಯುವ ಹೃದಯವಂತ

ಅರ್ಹತೆಯಿದ್ದರೂ ಶಾಲೆಯಿಂದ ವಿಮುಖರಾದ 800ಕ್ಕೂ ಅಧಿಕ ಮಕ್ಕಳಿಗೆ ಶಾಲಾ ಶಿಕ್ಷಣದೊಂದಿಗೆ ಜಾತಿ-ಮತವಿಲ್ಲದೆ ಯಕ್ಷಗಾನ ಕಲಿಸಿದ್ದು ಸುವರ್ಣ ಅವರ ಹೆಗ್ಗಳಿಕೆ. ಅನಾಥ ಮಕ್ಕಳೇ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕೊರಗ ಸಮಾಜಕ್ಕೆ ಪ್ರಥಮ ಬಾರಿಗೆ ಯಕ್ಷಗಾನ ಕಲಿಸಿರುವುದು ವಿಶೇಷ. ಬುದ್ಧಿಮಾಂದ್ಯ ಮಕ್ಕಳಿಗೂ ಯಕ್ಷಗಾನ ಕಲಿಸಿ, ಅವರಿಂದ ಆರು ಪ್ರದರ್ಶನವನ್ನೂ ಮಾಡಿಸಿದ್ದಾರೆ. ಬಡವರಿಗೆ ಮನೆ ಕಟ್ಟಿಸಲು ನೆರವು ಕೊಡಿಸುವುದು, ಅನಾರೋಗ್ಯ ಪೀಡಿತ ಬಡವರಿಗೆ ವೈದ್ಯರಿಂದ ಉಚಿತ ಚಿಕಿತ್ಸೆ ಕೊಡಿಸುವುದು ಇವರ ಸಮಾಜಮುಖಿ ಕೆಲಸವಾಗಿದೆ.

UDP-14-4B-Sanjeev

ವಿದೇಶಿಗರಿಗೂ ಯಕ್ಷಗಾನ ತರಬೇತಿ

ಯಕ್ಷಗಾನ ಸಂಪ್ರದಾಯದ ಎಲ್ಲ ಮಜಲುಗಳು, ನಶಿಸಿ ಹೋಗಿರುವಂತಹ ರಂಗಕ್ರಿಯೆಗೆ ಪುನರ್ಜೀವನ, ಭಾರತದ ಉದ್ದಗಲಕ್ಕೂ ನ್ಯಾಷನಲ್​ ಸ್ಕೂಲ್​ ಆಫ್ ಡ್ರಾಮಾದ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿದ್ದಾರೆ. ಸಿಕ್ಕಿಂ, ಮಣಿಪುರ. ಮಧ್ಯಪ್ರದೇಶ, ಕಾಶಿ, ವಾರಣಾಸಿ ಹೀಗೆ ಅನೇಕ ರಾಜ್ಯಗಳಲ್ಲಿ ಮತ್ತು 52 ವಿದೇಶಗಳಲ್ಲಿ ಯಕ್ಷಗಾನ ತರಬೇತಿ ನೀಡಿದ್ದಾರೆ. ಜರ್ಮನಿಯ ಕ್ಯಾತ್ರಿನ್​ ಎಂಬ ಮಹಿಳೆ ಮಂಗಳೂರಿನಲ್ಲಿ ಕನ್ನಡ ಕಲಿತು ಇವರಲ್ಲಿ ಮೂರು ವರ್ಷ ಯಕ್ಷಗಾನ ಅಭ್ಯಾಸ ಮಾಡಿದ್ದಾರೆ. ಫ್ರಾನ್ಸ್ ನ ಅನಿತಾ ಹೆರ್​ ಎಂಬವರೂ ಸುವರ್ಣ ಅವರ ಮನೆಗೇ ಬಂದು ಯಕ್ಷಗಾನ ಕಲಿತಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲಿ ಪಾರ್ತಿಸುಬ್ಬ ಪ್ರಶಸ್ತಿಗಿಂತ ಅತ್ಯುನ್ನತವಾದ ಹಾಗೂ ದೊಡ್ಡದಾದ ಇನ್ನೊಂದು ಪ್ರಶಸ್ತಿ ಇಲ್ಲ. ಅಂತಹ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಒಂದು ಕಾಲದಲ್ಲಿ ನಮ್ಮಂತಹ ಸಮುದಾಯದ ಜನರಿಗೆ ದೇವಸ್ಥಾನಗಳ ಯಕ್ಷಗಾನ ಮೇಳಗಳಲ್ಲಿ ಅವಕಾಶವೇ ಇರಲಿಲ್ಲ. ಅಂತಹ ಸಮುದಾಯದವನಾದ ನನಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ದೇವರ ವರಪ್ರಸಾದ ಎಂದೇ ಭಾವಿಸಿದ್ದೇನೆ.

UDP-14-4C-Sanjeev

| ಸಂಜೀವ ಸುವರ್ಣ. ಯಕ್ಷಗುರು, ಉಡುಪಿ

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…