ಶಿವಮೊಗ್ಗ: ನಗರದ ಭಾರದ್ವಾಜ್ ಸ್ಪಿರಿಚ್ಯುಯಲ್ ಸಲ್ಯೂಷನ್‌ನಿಂದ ಕೋಟೆ ರಸ್ತೆಯ ಶನೈಶ್ಚರ ದೇವಸ್ಥಾನದಲ್ಲಿ ಮಾ.27ರಿಂದ ಮಾ.29ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ 108 ಕಲಶಗಳ ಕುಂಭಾಭಿಷೇಕ, ಶನಿ ಶಾಂತಿಯಾಗ ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಸಂತೋಷ್ ಭಾರದ್ವಾಜ್ ಹೇಳಿದರು.
ಮಾ.29ರ ಅಮಾವಾಸ್ಯೆಯಂದು ಸಾಮೂಹಿಕ ಶನಿ ಶಾಂತಿಯಾಗ ನಡೆಯಲಿದೆ. 30ಕ್ಕೂ ಹೆಚ್ಚು ಋತ್ವಿಜರು, ನಾಲ್ಕು ದ್ರವ್ಯಗಳೊಂದಿಗೆ 10 ಸಾವಿರಕ್ಕೂ ಹೆಚ್ಚು ಆಹುತಿಯನ್ನು ಯಾಗದ ಮೂಲಕ ನೀಡಲಿದ್ದಾರೆ. ಬೆಳಗ್ಗೆ 8ಕ್ಕೆ ಆರಂಭವಾಗುವ ಯಾಗ ಮಧ್ಯಾಹ್ನ 12ಕ್ಕೆ ಮುಕ್ತಾಯವಾಗಲಿದೆ. ಬಳಿಕ ಮೈಸೂರಿನ ಅರ್ಜುನ ಅವಧೂತ ಮಹಾರಾಜರು ಆಶೀರ್ವಚನ ನೀಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
27ರ ಸಂಜೆ ಸಾಗರದ ಸುಮುಖ ಯಕ್ಷಗಾನ ಕಲಾ ತಂಡವರು ಶನಿಮಹಾತ್ಮೆ ಯಕ್ಷಗಾನ ಪ್ರಸ್ತುತಪಡಿಸುವರು. 28ರ ಬೆಳಗ್ಗೆ 9 ರಿಂದ ಸಾಮೂಹಿಕ ಕುಂಭಾಭಿಷೇಕ ನಡೆಯಲಿದೆ. ಅರಸೀಕೆರೆಯ ಶ್ರೀ ಸತೀಶ್ ಶರ್ಮಾಜೀ ಮಹಾರಾಜ್ ಸಾನ್ನಿಧ್ಯ ವಹಿಸುವರು. ಸಂಜೆ 6ಕ್ಕೆ ರಾಗರಂಜನಿ ಟ್ರಸ್ಟ್‌ನಿಂದ ಭಕ್ತಿ ಸಂಜೆ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. 29ರ ಸಂಜೆ ಹರಿಕಥೆ ಕೀರ್ತನಕಾರರಾದ ಮಂಜುನಾಥ್ ಅವರಿಂದ ಶನಿಕಥಾ ಶ್ರವಣ ನಡೆಯಲಿದೆ. ಮಾಹಿತಿಗೆ (ಮೊ.9035333699) ಸಂಪರ್ಕಿಸುವಂತೆ ತಿಳಿಸಿದರು.
ಅರ್ಚಕರಾದ ಶರತ್‌ಭಟ್, ಮಧುಸೂದನ್ ಭಟ್ ಹಾಗೂ ಟ್ರಸ್ಟಿ ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿದ್ದರು.