ಮೈಸೂರು: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ರಂಗೇರಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ ಕೃಷ್ಣದತ್ತ ಚಾಮರಾಜ ಪಡೆಯರ್ ಬುಧವಾರ ಬೃಹತ್ ಮೆರವಣಿಯಲ್ಲಿ ಶಕ್ತ ಪ್ರದರ್ಶನ ಮಾಡುವ ಮೂಲಕ ಉಮೇದುವಾರಿಕೆ ದಾಖಲಿಸಿದರು.
ಯದುವೀರ ಅವರಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಹಾಲಿ ಸಂಸದ ಪ್ರತಾಪ್ ಸಿಂಹ, ಡಾ.ರವಿ ಪ್ರಕಾಶ್ ಸಾಥ್ ನೀಡಿದರು.
ಯದುವೀರ ಅವರು ಜ್ಯೋತಿಷಿಯೊಬ್ಬರು ನೀಡಿದ ಸಲಹೆಯಂತೆ ಶುಭ ದಿನ ಎಂದು ಸೋಮವಾರವೇ ನಾಮಪತ್ರ ಸಲ್ಲಿಸಿದ್ದರು. ಇದೀಗ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರು ಹಾಗೂ ಎರಡು ಪಕ್ಷದ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಯಲ್ಲಿ ಸಾಗಿ ಶಕ್ತಿ ಪ್ರದರ್ಶನದ ಮೂಲಕ ಮತ್ತೊಮ್ಮೆ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಎರಡು ಸೆಟ್ ನಾಮಪತ್ರ ಸಲ್ಲಿಸಿದರು. ನಾಮಪತ್ರದ ಜತೆಗೆ ಮತದಾರರ ಗುರುತಿನಪತ್ರ, ಆದಾಯ ಪ್ರಮಾಣ ಪತ್ರ, ಬಿ ಫಾರ್ಮ್‌ಗಳನ್ನು ಸಲ್ಲಿಸಿದರು.