ಮೇಲುಕೋಟೆ: ಆಂಡಾಳ್ ಅವತಾರದ ತಿರುವಾಡಿಪ್ಪೂರಂ ದಿನವಾದ ಬುಧವಾರ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಮಹಾಲಕ್ಷ್ಮೀ ಯದುಗಿರಿನಾಯಕಿ ಅಮ್ಮನವರ ವರ್ಧಂತಿ ವೈಭವದಿಂದ ನೆರವೇರಿತು. ಇಡೀ ದಿನ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಸ್ರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
ಮಹಾಲಕ್ಷ್ಮೀ ಆಂಡಾಳ್ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದ ದಿನದ ಪ್ರತೀಕವಾಗಿ ತಿರುವಾಡಿಪ್ಪೂರಂ ಭಾರತದ ಎಲ್ಲ ವೈಷ್ಣವ ದೇವಾಲಯಗಳಲ್ಲಿ ಆಚರಿಸಲ್ಪಡುತ್ತಿದ್ದು, ಮೇಲುಕೋಟೆಯಲ್ಲಿ ತಿರುವಾಡಿಪ್ಪೂರಂ ಅಮ್ಮನವರ ವರ್ಧಂತಿ ವೈಭವದಿಂದ ನೆರವೇರುತ್ತಾ ಬಂದಿದೆ. ಮಹೋತ್ಸವಕ್ಕೆ ಮೂರನೇ ಸ್ಥಾನೀಕ ಆರ್.ಶ್ರೀನಿವಾಸನ್ ಮೆರುಗು ತಂದುಕೊಡಲು ಶ್ರಮಿಸಿದ್ದರು. ಅವರ ನಂತರ ಪುತ್ರರಾದ ಕೋವಿಲ್ ನಂಬಿ ಮುಕುಂದನ್ ಹಾಗೂ ಪ್ರಸನ್ನಕುಮಾರ್ ಮಹೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದು, ಈ ವರ್ಷವೂ ಅನೂಚಾನ ಪರಂಪರೆಯನ್ನು ಮುಂದುವರಿಸಿ ತಿರುವಾಡಿಪ್ಪೂರಂ ವೈಭವದ ಆಚರಣೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮಹೋತ್ಸವದ ಅಂಗವಾಗಿ ಕಲ್ಯಾಣನಾಯಕಿ ಅಮ್ಮನವರಿಗೆ ಬೆಳಗ್ಗೆ 8ಗಂಟೆಗೆ ಬೆಳ್ಳಿಯ ದೊಡ್ಡ ಆದಿಶೇಷವಾಹನೋತ್ಸವ ದಿವ್ಯಪ್ರಬಂಧಪಾರಾಯಣ ಹಾಗೂ ಮಂಗಳವಾದ್ಯದೊಂದಿಗೆ ನೆರವೇರಿತು. ನಂತರ ದ್ವಾದಶಾರಾಧನೆಯೊಂದಿಗೆ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು. ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ತಿರುವಾಡಿಪ್ಪೂರಂ ಕಾರ್ಯಕ್ರಮದ ಅಂಗವಾಗಿ ಕಲ್ಯಾಣನಾಯಕಿ ಅಮ್ಮನವರಿಗೆ ಮಂಗಳವಾರ ರಾತ್ರಿ ಬಂಗಾರದ ಚಿಕ್ಕಶೇಷಾಲಂಕಾರದೊಂದಿಗೆ ಉತ್ಸವ ನೆರವೇರಿತು. ವರ್ಧಂತಿ ಮಹೋತ್ಸವದ ಅಂಗವಾಗಿ ಅಮ್ಮನವರ ಸನ್ನಿಧಿಯ ಆವರಣವನ್ನು ತಳಿರು ತೋರಣಗಳಿಂದ ಆಕರ್ಷಕವಾಗಿ ಸಿಂಗಾರ ಮಾಡಲಾಗಿತ್ತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.