More

    ಯಡೂರಿನ ಗೋ ಕೈಲಾಸ; ವಿಶಿಷ್ಟ ಸ್ವರೂಪದ ವಿಶಾಳಿ ಜಾತ್ರೆ

    ಶತಮಾನಗಳ ಇತಿಹಾಸವಿರುವ ವೀರಭದ್ರಕ್ಷೇತ್ರಗಳಲ್ಲಿ ಯಡೂರು ಕೂಡ ಒಂದು. ಮುಂಬೈ ಕರ್ನಾಟಕ ಭಾಗದ ಈ ಕ್ಷೇತ್ರದಲ್ಲಿ ಪ್ರತಿ ವರ್ಷ ನಡೆಯುವ ಜಾತ್ರೆ ಮೂರ್ನಾಲ್ಕು ರಾಜ್ಯಗಳ ಜನರನ್ನು ಸೆಳೆಯುತ್ತದೆ. ಇಲ್ಲಿ ಈ ವರ್ಷ ವಿನೂತನವಾದ ಗೋ ಕೈಲಾಸದ ಉದ್ಘಾಟನೆ ನೆರವೇರಲಿದೆ. ತನ್ನಿಮಿತ್ತ ಬರಹವಿದು.

    ಜಾತ್ರೆ-ರಥೋತ್ಸವಗಳು ನಮ್ಮ ನೆಲದ ಸಾಂಸ್ಕೃತಿಕ, ಧಾರ್ವಿುಕ ಪರಂಪರೆಯ ಹೆಗ್ಗುರುತುಗಳು. ಗ್ರಾಮೀಣಪ್ರದೇಶಗಳಲ್ಲಿ ಪರಸ್ಪರ ಸೌಹಾರ್ದತೆ, ಸಾಮರಸ್ಯವನ್ನು ಹೆಚ್ಚಿಸುವ ಇಂಥ ಉತ್ಸವಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಳಕಳಿಯನ್ನು ಎತ್ತಿಹಿಡಿಯುತ್ತಿರುವುದು ಮತ್ತೊಂದು ವಿಶೇಷ. ಈ ಹಿನ್ನೆಲೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರು ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರೆಯ ಸಂದರ್ಭದಲ್ಲಿ ಹೊಸ ಯೋಜನೆಯೊಂದು ರೂಪುಗೊಂಡಿದೆ.

    ಯಡೂರಿನ ಗೋ ಕೈಲಾಸ; ವಿಶಿಷ್ಟ ಸ್ವರೂಪದ ವಿಶಾಳಿ ಜಾತ್ರೆಮುಂಬೈ ಕರ್ನಾಟಕ ಭಾಗದ ಬೃಹತ್ ಜಾತ್ರೆಗಳಲ್ಲೊಂದಾದ ಯಡೂರ ವಿಶಾಳಿ ಜಾತ್ರೆಗೆ ಮೂರ್ನಾಲ್ಕು ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಶ್ರೀಕ್ಷೇತ್ರದ ಧರ್ಮಾಧ್ಯಕ್ಷರಾಗಿರುವ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಸಾಮಾಜಿಕ ಬದಲಾವಣೆಗೆ ಪೂರಕವಾಗಿ ‘ಗೋ ಕೈಲಾಸ’ ಎಂಬ ನೂತನ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ. ಭಾರತೀಯ ಗೋಸಂತತಿಯನ್ನು ರಕ್ಷಿಸಬೇಕೆಂಬ ಉದ್ದೇಶದಿಂದ ಶಿವಾಗಮಗಳ ಆಧಾರದಲ್ಲಿ ಶಾಸ್ತ್ರಸಮ್ಮತವಾಗಿ ‘ಗೋ ಕೈಲಾಸ’ವನ್ನು ಸ್ಥಾಪಿಸಲಾಗಿದ್ದು, ಜಾತ್ರೆಯ ಸಂದರ್ಭದಲ್ಲಿ ಇದು ಲೋಕಾರ್ಪಣೆಯಾಗಲಿದೆ.

    33 ಕೋಟಿ ದೇವತೆಗಳನ್ನು ಪೂಜಿಸಿದ ಫಲ ಒಂದು ಗೋವಿನ ಪೂಜೆಯಿಂದ ದೊರೆಯುತ್ತದೆ ಎಂಬ ನಂಬಿಕೆ ಇದೆ. ಇಂತಹ ಗೋವುಗಳು ಸಾಕ್ಷಾತ್ ಶಿವನ ಪಂಚಮುಖಗಳಿಂದ ಸೃಷ್ಟಿಗೊಂಡಿವೆ ಎಂದು ಶಿವಾಗಮಗಳಲ್ಲಿದೆ. ಸದ್ಯೋಜಾತ ಮುಖದಿಂದ ಕಪಿಲವರ್ಣದ ನಂದಾ, ವಾಮದೇವ ಮುಖದಿಂದ ಕಪ್ಪುವರ್ಣದ ಭದ್ರಾ, ಅಘೊರ ಮುಖದಿಂದ ಬಿಳಿ ವರ್ಣದ ಸುರಭಿ, ತತ್ಪುರುಷ ಮುಖದಿಂದ ಧೂಮ್ರವರ್ಣದ ಸುಶೀಲ, ಈಶಾನ ಮುಖದಿಂದ ಕೆಂಪುವರ್ಣದ ಸುಮನ ಎಂಬ ಐದು ಹಸುಗಳು ಉದ್ಭವಿಸಿವೆ.

    ಇತ್ತೀಚಿನ ದಿನಗಳಲ್ಲಿ ಕೇವಲ ಹಾಲಿನ ಉತ್ಪನ್ನಕ್ಕಾಗಿ ವಿದೇಶಿ ತಳಿಗಳನ್ನು ಕಂಡುಕೊಂಡಿರುವವರಿಗೆ ಪವಿತ್ರವಾದ ಈ ದೇಸಿ ತಳಿಗಳ ಮಹತ್ವ ತಿಳಿದಿಲ್ಲ. ಆ ಕಾರಣಕ್ಕಾಗಿ ದೇಸಿ ತಳಿಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಶ್ರೀಶೈಲ ಜಗದ್ಗುರುಗಳು ಶ್ರೇಷ್ಠವಾದ ಪಂಚವರ್ಣದ ಗೋವುಗಳನ್ನು ಸಂರಕ್ಷಿಸುವ ನೂತನ ಗೋ ಕೈಲಾಸ ಸ್ಥಾಪನೆಗೆ ಮುಂದಾಗಿದ್ದಾರೆ.

    ಗೋ ಕೈಲಾಸದ ವಿಶೇಷತೆಗಳು: ದೇಸಿ ಗೋವುಗಳ ರಕ್ಷಣೆಯ ಬಗ್ಗೆ ಇತ್ತೀಚೆಗೆ ಸಾಕಷ್ಟು ಸಂಘಸಂಸ್ಥೆಗಳು ಆಸಕ್ತಿ ವಹಿಸುತ್ತಿವೆ. ಆದರೆ ಯಡೂರು ಶ್ರೀಕಾಡದೇವರ ಮಠದ ವತಿಯಿಂದ ಸ್ಥಾಪನೆಗೊಳ್ಳುತ್ತಿರುವ ಗೋ ಕೈಲಾಸವು ಸಂಪೂರ್ಣ ವಿಭಿನ್ನವಾಗಿದೆ. ಕೃಷ್ಣಾನದಿಯ ದಂಡೆಯಲ್ಲಿರುವ ಶ್ರೀಮಠದ ವಿಶಾಲ ಪ್ರದೇಶದಲ್ಲಿ ನಿರ್ವಣಗೊಂಡಿರುವ ಗೋ ಕೈಲಾಸದಲ್ಲಿ ಹಸುಗಳನ್ನು ಕಟ್ಟುವುದಿಲ್ಲ, ಬಂಧಿಸುವುದಿಲ್ಲ, ಕೊಟ್ಟಿಗೆಯಲ್ಲಿ ಕೂಡಿಹಾಕುವುದಿಲ್ಲ. ಬದಲಾಗಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವಂತೆ ವ್ಯವಸ್ಥೆ ಮಾಡಲಾಗಿದೆ.

    ನೈಸರ್ಗಿಕವಾಗಿ ಮೇವು ಸ್ವೀಕರಿಸಿ, ನದಿಯಲ್ಲಿ ನೀರು ಕುಡಿಯುವುದು ಹಾಗೂ ತಮಗೆ ನೀಡುವ ಆಹಾರವನ್ನು ತಮಗಿಷ್ಟ ಬಂದಾಗ, ತಮಗಿಷ್ಟ ಬಂದಷ್ಟು ಸ್ವೀಕರಿಸುವುದಕ್ಕೆ ಅವಕಾಶವಿದೆ. ಈಗಾಗಲೇ ಶ್ರೀಮಠದ ಗೋಶಾಲೆಯಲ್ಲಿರುವ ಐವತ್ತಕ್ಕೂ ಹೆಚ್ಚಿನ ಗೋವುಗಳೊಂದಿಗೆ ಪಾರಂಪರಿಕ ಪಂಚವರ್ಣದ ಗೋವುಗಳನ್ನು ಬಿಡಲಾಗುತ್ತದೆ. ಗೋ ಕೈಲಾಸದ ಮಧ್ಯದಲ್ಲಿ ಪಂಚಮುಖ ಪರಮೇಶ್ವರನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಐದು ಸುತ್ತುಗಳಲ್ಲಿ ಐದು ಗೋವುಗಳನ್ನು ಪೂಜಿಸಿ, ಅಂತಿಮವಾಗಿ ಪಂಚಮುಖ ಪರಮೇಶ್ವರನನ್ನು ಪೂಜಿಸಲು ಸಾರ್ವಜನಿಕರಿಗೆ ಅವಕಾಶವಿರುತ್ತದೆ.

    ಪಂಚ ಗೋವುಗಳ ಪೂಜೆ ಮತ್ತು ಅವುಗಳ ಗೋಮಯದಿಂದ ತಯಾರಾಗುವ ವಿಭೂತಿ, ಭಸಿತ, ಭಸ್ಮ, ಕ್ಷಾರ, ರಕ್ಷ ಎಂಬ ಐದು ಬಗೆಯ ವಿಭೂತಿಗಳು ಮನುಷ್ಯನ ದಾರಿದ್ರ್ಯನ್ನು ನಾಶಮಾಡಿ ಸಂಪತ್ತನ್ನು ನೀಡುತ್ತವೆ ಎಂಬ ನಂಬಿಕೆಯಿದೆ. ಮನುಷ್ಯನ ಹಲವು ರೋಗಗಳನ್ನು ನಾಶಪಡಿಸುವ ವೈಜ್ಞಾನಿಕ ಮಹತ್ವ ಹೊಂದಿದ್ದು, ಈ ಕಾರಣಕ್ಕಾಗಿ ಮುಂದಿನ ದಿನಗಳಲ್ಲಿ ಶಾಸ್ತ್ರಬದ್ಧವಾಗಿ ವಿಭೂತಿಯನ್ನು ತಯಾರಿಸುವ ಉದ್ದೇಶವನ್ನು ಶ್ರೀಮಠ ಹೊಂದಿದೆ. ವಿಶೇಷ ಪರಿಕಲ್ಪನೆಯಿಂದ ಸ್ಥಾಪನೆಗೊಂಡಿರುವ ಗೋ ಕೈಲಾಸವನ್ನು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಜಾತ್ರಾಮಹೋತ್ಸವದ ಕೊನೆಯ ದಿನ (ಜ. 25) ಲೋಕಾರ್ಪಣೆ ಮಾಡಲಿದ್ದಾರೆ.

    ರಥೋತ್ಸವ: ಶ್ರೀಕಾಡದೇವರ ಮಠದ ಧರ್ವಧ್ಯಕ್ಷರಾಗಿರುವ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರಿಂದ ಯಡೂರು ಕ್ಷೇತ್ರವು ಸರ್ವಾಂಗೀಣ ಅಭಿವೃದ್ಧಿ ಕಂಡಿದೆ. ಧಾರ್ವಿುಕ ಮಹತ್ವವುಳ್ಳ ಈ ಕ್ಷೇತ್ರವನ್ನು ಅವರು ಸಾಂಸ್ಕೃತಿಕವಾಗಿ, ಸರ್ವತೋಮುಖವಾಗಿ ಬೆಳೆಸಿದ್ದಾರೆ. ಜ. 24ರಂದು ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮತ್ತು ಧರ್ಮ ಸಮಾರಂಭ ನಡೆಯಲಿದೆ. 25ರಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿವಿಧ ಮುಖಂಡರು, ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ನೂತನ ಯಾತ್ರಿನಿವಾಸಕ್ಕೆ ಸಚಿವೆ ಶಶಿಕಲಾ ಜೊಲ್ಲೆಯವರು ಅಡಿಗಲ್ಲು ಇಡಲಿದ್ದಾರೆ. ನೆರೆಸಂತ್ರಸ್ತರ ಗೃಹನಿರ್ವಣ ಕಾಮಗಾರಿಗೆ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಚಾಲನೆ ನೀಡಲಿದ್ದಾರೆ. ಅಂದು ಸಂಜೆ ಹೂಟಗಿ ಬೃಹನ್ಮಠದ ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಲಕ್ಷಾಂತರ ಜನರ ಸಮಕ್ಷಮದಲ್ಲಿ ವಿಶಾಳಿ ಜಾತ್ರೆಯ ಮಹಾರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

    ಯಡೂರಿನ ಗೋ ಕೈಲಾಸ; ವಿಶಿಷ್ಟ ಸ್ವರೂಪದ ವಿಶಾಳಿ ಜಾತ್ರೆವಿಶ್ವಚೇತನ ಪ್ರಶಸ್ತಿ

    ಪ್ರತಿವರ್ಷ ಓರ್ವ ವಿಶ್ವಮಟ್ಟದ ಸಾಧಕರಿಗೆ ನೀಡಲಾಗುವ ‘ವಿಶ್ವಚೇತನ ಪ್ರಶಸ್ತಿ’ಗೆ ಈ ವರ್ಷ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 50 ಸಾವಿರ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. 25ರಂದು ಬೆಳಗ್ಗೆ ಶ್ರೀಶೈಲ ಜಗದ್ಗುರುಗಳ ಸಾನ್ನಿಧ್ಯದಲ್ಲಿ ವಿಶ್ವಚೇತನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

    | ಪ್ರಶಾಂತ ರಿಪ್ಪನ್​ಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts