ಬಾಯಿಗೆ ಬಂದಂತೆ ಮಾತನಾಡುತ್ತಿರುವ ಸಿಎಂ, ಬಿಎಸ್ ಯಡಿಯೂರಪ್ಪ ವ್ಯಂಗ್ಯ, ಜೆಡಿಎಸ್‌ಗೆ ಸೋಲಿನ ಭೀತಿ

ಕೊಪ್ಪಳ: ಮಂಡ್ಯದಲ್ಲಿ ಸುಮಲತಾ ಗೆಲುವು ಖಚಿತ. ಸೋಲಿನ ಭೀತಿಯಿಂದ ಸಿಎಂ ಕುಮಾರಸ್ವಾಮಿ ಸೇರಿ ಜೆಡಿಎಸ್ ನಾಯಕರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ತಾಲೂಕಿನ ಖಾಸಗಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಂಡ್ಯದಲ್ಲಿ ಸುಮಲತಾ ಗೆಲ್ಲುವುದು ಪಕ್ಕಾ ಆಗಿದ್ದಕ್ಕೆ ಸಿಎಂ ಕುಮಾರಸ್ವಾಮಿ ಮನಬಂದಂತೆ ಮಾತಾಡುತ್ತಿದ್ದಾರೆ. ಸಂಸದ ಶಿವರಾಮೇಗೌಡ ಸಹ ಸುಮಲತಾ ಮಾಯಾಂಗನೆ ಎಂಬ ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಹಗುರವಾಗಿ ಮಾತನಾಡುವ ಮೂಲಕ ತಮ್ಮ ಪರ ವಾತಾವರಣವಿಲ್ಲವೆಂದು ಅವರೇ ತೋರಿಸಿಕೊಳ್ಳುತ್ತಿದ್ದಾರೆ. ಮಾಧ್ಯಮದವರ ಮೇಲೆ ಹಲ್ಲೆ ನಡೆದರೆ ತಾವು ಜವಾಬ್ದಾರಲ್ಲ ಎನ್ನುವ ಮೂಲಕ ಸಿಎಂ ಹಲ್ಲೆಗೆ ಪಿತೂರಿ ನಡೆಸಿದ್ದಾರೆಂದು ಆರೋಪಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಸಚಿವರಾದ ಡಿಕೆಶಿ-ಎಂ.ಬಿ.ಪಾಟೀಲ್ರ ಹೇಳಿಕೆ ವಿಚಾರ ಅವರಿಗೇ ಬಿಟ್ಟಿದ್ದು. ಯಾವ ತಂತ್ರ-ಕುತಂತ್ರದಿಂದ ಅವರ ಮಾತಾಡುತ್ತಿದ್ದಾರೆಂದು ಗೊತ್ತಿಲ್ಲ. ಆದರೆ, ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ದೇಶಾದ್ಯಂತ 300ಕ್ಕೂ ಅಧಿಕ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.